Advertisement

ಕೀಟ ಪಾಠ: ಇದು ಜಂತುಗಳ ಜಗತ್ತು

02:58 PM Jan 06, 2018 | |

ಕಿರುಬೆರಳ ತುದಿಯಷ್ಟು ಗಾತ್ರದ, ಮೈಗೆ ಚೂರೇ ಚೂರು ತಾಕಿದರೂ ಕೆಂಡದಂತೆ ಚುರುಕು ಮುಟ್ಟಿಸುವ, ಕಂಡೂ ಕಾಣದಂತೆ ಕಣ್ಮುಂದೆ ಹಾರುವ, ಕೀಟಗಳಲ್ಲಿ ಸಾವಿರಾರು ಬಗೆ. ಈ ಜೀವಿಗಳನ್ನು ಕುತೂಹಲದಿಂದ ಗಮನಿಸುವವರು ಕಡಿಮೆ. ಜೀವ ವೈವಿಧ್ಯತೆಯನ್ನು ಗಾತ್ರದ, ಜೀವಿತಾವಧಿಯ ಆಧಾರದಲ್ಲಿ ನಿರ್ಧರಿಸುವುದು ಮೂರ್ಖತನ ಎಂದು ಅರಿವಾಗುವುದು ಕೀಟ ಲೋಕದೊಳಗೆ ಕುತೂಹಲದಿಂದ ಕಾಲಿಟ್ಟಾಗಲೇ…

Advertisement

ಭೂಮಿಯ ಮೇಲೆ ಕೆಲವೇ ಕೆಲವು ದಿನ, ತಿಂಗಳುಗಳ ಕಾಲ ಜೀವಿಸುವ ಕೀಟಗಳ ಬದುಕಿನ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ. 
1. ಹರ್ಕ್ಯುಲಸ್‌ ಬೀಟಲ್‌


ವೆಯ್‌r ಲಿಫ್ಟಿಂಗ್‌ನಲ್ಲಿ ಮನುಷ್ಯ ನಿರ್ಮಿಸಿದ ದಾಖಲೆಗಳನ್ನೆಲ್ಲ ಈ ಸಣ್ಣ ಕೀಟ ನಿವಾಳಿಸಿ ಎಸೆದು ಬಿಡಬಲ್ಲದು. ನೀವು ನಂಬುತ್ತೀರೋ, ಇಲ್ಲವೋ ಈ ಕೀಟ ತನ್ನ ದೇಹದ ತೂಕಕ್ಕಿಂತ 850 ಪಟ್ಟು ಜಾಸ್ತಿ ತೂಕ ಎತ್ತಬಲ್ಲದಂತೆ! 17 ಸೆ.ಮೀ.ನಷ್ಟು ಉದ್ದ ಬೆಳೆಯಬಲ್ಲ ಈ ಹಕ್ಯುìಲಸ್‌ ಬೀಟಲ್‌, ರೈನೋಸಾರ್‌ ಬೀಟಲ್‌ ಕೀಟ ಸಮೂಹಕ್ಕೆ ಸೇರಿದೆ. ಈ ಕೀಟ ಸಮೂಹದ ಇತರೆ ಕೀಟಗಳು ಸಹ ತಮ್ಮ ತೂಕದ ನೂರು ಪಟ್ಟು ಭಾರವನ್ನು ಹೊರಬಲ್ಲವು ಎಂಬುದನ್ನು ಕೀಟಶಾಸ್ತ್ರಜ್ಞರು ಧೃಡೀಕರಿಸಿದ್ದಾರೆ. 

2.ಬುಲ್‌ ಡಾಗ್‌ ಆ್ಯಂಟ್‌


ಇರುವೆಗಳ ಪ್ರಪಂಚದಲ್ಲಿ ಅತ್ಯಂತ ಅಪಾಯಕಾರಿ ಇರುವೆಯೇ ಬುಲ್‌ ಡಾಗ್‌ ಆ್ಯಂಟ್‌. ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಇದು ಕಾಣ ಸಿಗುತ್ತದೆ. ಕುಟುಕು ಮತ್ತು ದವಡೆಗಳನ್ನು ಏಕಕಾಲಕ್ಕೆ ಉಪಯೋಗಿಸಿ ದಾಳಿ ಮಾಡಿ ಮನುಷ್ಯನನ್ನು ಕೊಂದಿರುವ ಉದಾಹರಣೆಗಳೂ ಇವೆ. ಆಕ್ರಮಣಕಾರಿ ದಾಳಿಯಿಂದಾಗಿ ಬುಲ್‌ ಡಾಗ್‌ ಎಂಬ ಹೆಸರು ಪಡೆದ ಈ ಇರುವೆ ವಿಷಕಾರಿಯಾಗಿದ್ದು, ಸತತವಾಗಿ 15 ನಿಮಿಷ ಕಚ್ಚಿದರೆ ಮನುಷ್ಯ ಸತ್ತೇ ಹೋಗುತ್ತಾನೆ. 20 ಮಿಮೀ ಉದ್ದ, 0.015 ಗ್ರಾಂ ಇರುವ ಈ ಇರುವೆಯ ಜೀವಿತಾವಧಿ 21 ದಿನಗಳು.   

3.ಹಮ್ಮಿಂಗ್‌ಬರ್ಡ್‌ ಮೋತ್‌


ಹೂವಿನ ಮಕರಂದ ಹೀರುತ್ತಿರುವ ಈ ಕೀಟವನ್ನು ನೋಡಿದವರು ತಕ್ಷಣಕ್ಕೆ ಇದನ್ನು ಹಮ್ಮಿಂಗ್‌ಬರ್ಡ್‌ ಪಕ್ಷಿ ಎಂದೇ ಭಾವಿಸುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಹಕ್ಕಿಯಲ್ಲ, ಕೀಟ ಎಂದು ಗೊತ್ತಾಗುತ್ತದೆ. ದೇಹರಚನೆ, ಗಾತ್ರ, ಆಕಾರದಲ್ಲಿ ಹಮ್ಮಿಂಗ್‌ಬರ್ಡ್‌ ಹಕ್ಕಿಗೂ, ಹಮ್ಮಿಂಗ್‌ಬರ್ಡ್‌ ಮೋತ್‌ಗೂ ಬಹಳಷ್ಟು ಸಾಮ್ಯತೆಯಿದೆ. ಈ ಕೀಟ ಹೆಚ್ಚಾಗಿ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತದೆ. 

Advertisement

4. ಡಂಗ್‌ ಬೀಟಲ್‌
ಡಂಗ್‌ ಬೀಟಲ್‌ ಅಥವಾ ಸಗಣಿ ಹುಳುಗಳು ಬಹಳ ಜಾಣ ಕೀಟಗಳು. ಸಗಣಿ ಉಂಡೆಯನ್ನು ಸರಳರೇಖೆಯಲ್ಲಿಯೇ ಉರುಳಿಸಿಕೊಂಡು ಗೂಡು ಸೇರಿಸುವ ಇವಕ್ಕೆ, ದಿಕ್ಕನ್ನು ಕಂಡು ಹಿಡಿಯಲು ಜಿಪಿಎಸ್‌ ಬೇಡವೇ ಬೇಡ. ಈ ಕೀಟ, ನಕ್ಷತ್ರಗಳನ್ನೇ ಆಧರಿಸಿ ದಿಕ್ಕನ್ನು ಗುರುತಿಸಬಲ್ಲದು. ತನ್ನ ದೇಹದ ತೂಕಕ್ಕಿಂತ ಹತ್ತು ಪಟ್ಟು ಜಾಸ್ತಿ ಭಾರ ಹೊರಬಲ್ಲ ಸಾಮರ್ಥ್ಯ ಅದಕ್ಕಿದೆ. 

5.ಬಟರ್‌ಫ್ಲೈ
ನಮ್ಮ ಪರಿಸರವನ್ನು ವರ್ಣಮಯವಾಗಿಸುವ ಬಟರ್‌ಫ್ಲೆ/ ಚಿಟ್ಟೆ ಮನುಷ್ಯನಿಗೆ ಬಹಳ ಹತ್ತಿರವೆನಿಸುವ ಕೀಟ.ಅಂಟಾರ್ಟಿಕಾ ಖಂಡವನ್ನು ಬಿಟ್ಟರೆ, ಜಗತ್ತಿನಾದ್ಯಂತ ವ್ಯಾಪಿಸಿರುವ ಈ ಚಿಟ್ಟೆಗಳಲ್ಲಿ 24,000ಕ್ಕೂ ಹೆಚ್ಚು ಪ್ರಭೇದಗಳಿವೆ (ಪತಂಗಗಳನ್ನು ಹೊರತುಪಡಿಸಿ). ನೋಡಲು ಸುಕೋಮಲವಾಗಿ ಕಾಣಿಸಿದರೂ, ಕೆಲವು ಚಿಟ್ಟೆಗಳು ಗಂಟೆಗೆ 12 ಮೈಲಿ ವೇಗದಲ್ಲಿ ಹಾರಬಲ್ಲವು. ಮಾನವನ ಕಣ್ಣುಗಳಿಗೆ ಕಾಣಿಸದ ಬೆಳಕನ್ನು ಚಿಟ್ಟೆಗಳು ಗ್ರಹಿಸುತ್ತವೆ. 
 
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಕೀಟಶಾಸ್ತ್ರ ವಿಭಾಗವು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ವಿಸ್ಮಯ ಕೀಟಗಳ ಪ್ರದರ್ಶನವನ್ನು ನಡೆಸುತ್ತಿದೆ. 50ಕ್ಕೂ ಹೆಚ್ಚು ಕೀಟ ಭಾವಚಿತ್ರಗಳು, 5000ಕ್ಕೂ ಹೆಚ್ಚು ನೈಜ ಕೀಟಗಳು  ಪ್ರದರ್ಶನ ಕಾಣಲಿವೆ. ಕೀಟಗಳ ಚಿತ್ರವಿರುವ ಅಂಚೆ ಚೀಟಿಗಳು, ಕೀಟಗಳಿಂದ ಸಿದ್ಧಪಡಿಸಿದ ಆಭರಣಗಳು, ಕೀಟಗಳ ಕಿರುಚಿತ್ರಗಳು ಪ್ರದರ್ಶನದಲ್ಲಿರುತ್ತವೆ. 

Advertisement

Udayavani is now on Telegram. Click here to join our channel and stay updated with the latest news.

Next