ಉಡುಪಿ: ವಕ್ವಾಡಿ ಮನೆತನದ ಹಿರಿಯರು ಕಟ್ಟಿ ಬೆಳೆಸಿದ ಈ ಶಾಲೆ ಸಹಸ್ರಾರು ವಿದ್ಯಾರ್ಥಿಗಳಿಗೆ ಅಕ್ಷರದ ಬೆಳಕು ನೀಡಿದೆ. ಇಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಮನೆತನವನ್ನು ಸ್ಮರಿಸಿಕೊಳ್ಳಬೇಕು ಎಂದು ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.
ಬುಧವಾರ ಕಡಿಯಾಳಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ದುಡ್ಡಿದ್ದವರು ಸಾಮಾನ್ಯವಾಗಿ ಸಮಾಜ ಸೇವೆಯನ್ನು ಸುಲಭವಾಗಿ ಮಾಡಬಹುದು. ಆದರೆ ವಕ್ವಾಡಿ ಮನೆತನ ದುಡ್ಡಿದು ಶಾಲೆಯ ಸೇವೆ ಮಾಡಿದ್ದಲ್ಲ. ಕೃಷಿ ಮಾಡಿಕೊಂಡು ಬಂದ ಸಂಪೂರ್ಣ ಹಣವನ್ನು ಈ ಶಾಲೆಗೆ ವ್ಯಯಿಸಿ, ಕಟ್ಟಿಬೆಳೆಸಿದ್ದಾರೆ. 150 ವರ್ಷದ ಹೊಸ್ತಿಲಿನಲ್ಲಿರುವ ಈ ಶಾಲೆಯ ಅಭಿವೃದ್ಧಿಯ ದೊಡ್ಡ ಜವಾಬ್ದಾರಿ ಹಾಗೂ ಕನಸು ನಮ್ಮ ಸೋದೆ ಮಠಕ್ಕಿದೆ ಎಂದರು.
ರೋಟರಿ ಜಿಲ್ಲಾ 3182ರ ಗವರ್ನರ್ ಬಿ.ಎನ್. ರಮೇಶ್ ಮಾತನಾಡಿ, ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿದಾಗ ಮಕ್ಕಳ ಮನಸ್ಸು ಮುದಗೊಳ್ಳುತ್ತದೆ. ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗುವುದು. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಈ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ಸ್ವತಃ ತಾವೇ ಮುಂದೆ ಬಂದು ಸಹಕಾರ ನೀಡಲು ಸಾಧ್ಯ. ರೋಟರಿ ಕ್ಲಬ್ ನಿಂದಲೂ ಅನೇಕ ಸೇವಾ ಕಾರ್ಯಗಳು ನಡೆಯುತ್ತಿದ್ದು ಶಾಲೆಯ ಅಭಿವೃದ್ಧಿಗೂ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, 1890ರ ಬ್ರಿಟಿಷ್ ಸರಕಾರದಿಂದ ಈ ಶಾಲೆಗೆ ಅನುಮೋದನೆ ದೊರಕಿ ಸುದೀರ್ಘ 147 ವರ್ಷ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಶೈಕ್ಷಣಿಕವಾಗಿಯೂ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಇಲ್ಲಿ ಯುಕೆಜಿ ಗಳಿಂದಲೇ ಸಂಸ್ಕೃತ ಭಾಷಾಭ್ಯಾಸ ನೀಡುವ ಕೆಲಸವು ಆಗುತ್ತಿದೆ ಎಂದರು.
ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಾಡಿಗಾರು ಶ್ರೀನಿವಾಸ ತಂತ್ರಿ, ಮಣಿಪಾಲ ಕೆಎಂಸಿ ಪ್ರಾಧ್ಯಾಪಕ ಡಾ| ರವಿರಾಜ ಆಚಾರ್ಯ, ಉಡುಪಿ ರೋಟರಿ ಕ್ಲಬ್ ಅಧ್ಯಕ್ಷ ಜನಾರ್ದನ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ, ಆಂಗ್ಲ ಮಾಧ್ಯಮ ಶಾಲೆಯ ಪ್ರಭಾವತಿ ಅಡಿಗ, ಎಂಜಿನಿಯರ್ ಭಗವಾನ್ ದಾಸ್, ಮೊದಲಾದವರು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಕಿಣಿ ಸ್ವಾಗತಿಸಿ, ಲಕ್ಷ್ಮೀ ನಾರಾಯಣ ಭಟ್ ವಂದಿಸಿದರು. ಮುಖ್ಯೋಪಾಧ್ಯಾಯ ವಿ.ಜಿ. ಬೈಕಾಡಿ ನಿರೂಪಿಸಿದರು.