ಪೂಂಚ್ : ನ್ಯಾಶನಲ್ ಕಾನ್‌ಫರೆನ್ಸ್ ಶಾಸಕ ಜಾವೇದ್ ರಾಣಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಕ್ ದಾಳಿ ನಡೆಸಿದ್ದು ಮೋದಿ ಅವರನ್ನು ಓರ್ವ ಭಯೋತ್ಪಾದಕ ಎಂದು ಹೇಳಿದ್ದಾರೆ. “ಪ್ರಧಾನಿ ಮೋದಿ ಇನ್ಸಾಯಿತ್ ಕಾ ಕಾತಿಲ್, ಟೆರರಿಸ್ಟ್’ ಎಂದು ರಾಣಾ ಹೇಳಿರುವುದು ವರದಿಯಾಗಿದೆ.
“ಅವರು ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ; ಆದರೆ ಅತೀ ದೊಡ್ಡ ಭಯೋತ್ಪಾದಕ ಮತ್ತು ಮಾನವತೆಯ ಅತೀ ದೊಡ್ಡ ಕೊಲೆಗಾರ ಎಂದರೆ ಈ ದೇಶದ ಪ್ರಧಾನಿ’ ಎಂದು ರಾಣಾ ಕಳೆದ ಆ.6ರಂದು ಪೂಂಚ್‌ನಲ್ಲಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.
ರಾಣಾ ಅವರು 2002ರ ಗುಜರಾತ್ ದೊಂಬಿಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖೀಸಿದ್ದಾರೆ.
ಶಾಸಕ ರಾಣಾ ಅವರು ಈ ಹಿಂದೆಯೂ ಇದೇ ರೀತಿಯ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರ ಸರಕಾರ ಸಂವಿಧಾನದ 35ಎ ಮತ್ತು 370ನೇ ವಿಧಿಯನ್ನು ಬದಲಾಯಿಸಿದಲ್ಲಿ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ ಎಂದು ರಾಣಾ ಈ ತಿಂಗಳ ಆದಿಯಲ್ಲಿ ಹೇಳಿದ್ದರು.
ಜಮ್ಮು ಕಾಶ್ಮೀರದ ಸ್ವಾಯತ್ತ ಸ್ವರೂಪವನ್ನು ನಾಶ ಮಾಡುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್ ನ ಅಜೆಂಡಾ ಆಗಿದೆ. ಸಂವಿದಾನದ 35ಎ ಮತ್ತು 370 ವಿಧಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಮುಂದೆ ಸತ್ಯಾಂಶಗಳನ್ನು ತಿರುಚಿ ವಾದ ಮಂಡಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ರಾಣಾ ಆರೋಪಿಸಿದರು.