ಮುಂಬಯಿ: ಭಾರತೀಯ ನೌಕಾಪಡೆಗೆ ಗುರುವಾರ “ಐಎನ್‌ಎಸ್ ವೇಲಾ’ ಸಬ್‌ಮರೀನ್ ಅನ್ನು ಸೇರ್ಪಡೆ ಮಾಡಲಾಗಿದೆ. ಮುಂಬಯಿಯ ನೌಕಾನೆಲೆಯಲ್ಲಿ ನೌಕಾ ದಳದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಸಮ್ಮುಖ ಐಎನ್‌ಎಸ್ ವೇಲಾಕ್ಕೆ ಚಾಲನೆ ನೀಡಲಾಗಿದೆ.
ಕಲ್ವರಿ ಕ್ಲಾಸ್ ಜಲಾಂತರ್ಗಾಮಿ ಯೋಜನೆ-75ರಲ್ಲಿ ಭಾರತೀಯ ನೌಕಾಪಡೆ ಸೇರಿಸಿಕೊಳ್ಳಲಿರುವ ಆರು ಜಲಾಂತರ್ಗಾಮಿ ನೌಕೆಯ ಪೈಕಿ ವೇಲಾ ನಾಲ್ಕನೆಯದ್ದಾಗಿದೆ. ನ.21ರಂದು ಮುಂಬಯಿಯ ನೌಕಾನೆಲೆ ಯಲ್ಲಿ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧ ನೌಕೆ ಯನ್ನು ಸೇರ್ಪಡೆಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನೌಕಾಪಡೆ ಮುಖ್ಯಸ್ಥ ಕರಂಬೀರ್ ಸಿಂಗ್ “ಐಎನ್‌ಎಸ್ ವೇಲಾದಿಂದ ನೌಕಾದಳಕ್ಕೆ ಮತ್ತಷ್ಟು ಶಕ್ತಿ ಬಂದಿದೆ’ ಎಂದು ಹೇಳಿದ್ದಾರೆ.
ಮುಂಬಯಿಯಲ್ಲೇ ನಿರ್ಮಾಣ: ಐಎನ್‌ಎಸ್ ವೇಲಾವನ್ನು ಮುಂಬಯಿಯ ಮ್ಯಾಜಗಾನ್ ಡಾಕ್ ಶಿಪ್‌ಬಿಲ್ಡರ್ ಲಿ.(ಎಂಡಿಎಲ್) ಸಂಸ್ಥೆಯು ಫ್ರಾನ್ಸ್‌ನ ಎಂ/ಎಸ್ ನಾವಲ್ ಗ್ರೂಪ್ ಸಂಸ್ಥೆಯೊಂದಿಗೆ ಜಂಟಿಯಾಗಿ ನಿರ್ಮಿಸಿದೆ. 43 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶೀಯ ತಂತ್ರಜ್ಞಾನದಲ್ಲಿ ಆರು ಸಬ್‌ಮರೀನ್‌ಗಳನ್ನು ನಿರ್ಮಿಸಲಾಗುತ್ತದೆ.
ಎರಡು ತಿಂಗಳಲ್ಲಿ ಮತ್ತೆ 6 ರಫೇಲ್ :
ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನಗಳ ಪೈಕಿ ಇನ್ನೂ ಆರು ಯುದ್ಧ ವಿಮಾನ ಮುಂದಿನ ತಿಂಗಳು ಅಥವಾ ಜನವರಿಯಲ್ಲಿ ಹರಿಯಾಣದ ಅಂಬಾಲಕ್ಕೆ ಆಗಮಿಸಲಿವೆ. ಇದರ ಜತೆಗೆ ಫ್ರೀಕ್ವೆನ್ಸಿ ಜಾಮರ್‌ಗಳು ಮತ್ತು ಸುಧಾರಿತ ಸಂಪರ್ಕ ತಂತ್ರಜ್ಞಾನಗಳನ್ನೂ ಈ ವಿಮಾನಗಳು ಹೊಂದಲಿವೆ. 59 ಸಾವಿರ ಕೋಟಿ ರೂ. ಮೊತ್ತದ ಡೀಲ್‌ನಲ್ಲಿ ಇದುವರೆಗೆ 26 ವಿಮಾನಗಳು ಕೈಸೇರಿವೆ. ಚೀನ ಮತ್ತು ಪಾಕ್‌ನಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಫೇಲ್ ಮಹತ್ವದ್ದು.