ಮುಂಬಯಿ: ಹಡಗು ನಿರ್ಮಾಣಗಾರ ಮಜ್ಗಾಂವ್ ಡಾಕ್ ಲಿಮಿಟೆಡ್ ವತಿಯಿಂದ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿರುವ ಸ್ಕಾರ್ಪಿನ್ ಶ್ರೇಣಿಯ 6 ಜಲಾಂತರ್ಗಾಮಿ ನೌಕೆಗಳಲ್ಲಿ ಒಂದಾಗಿರುವ ಐಎನ್‌ಎಸ್ ಕಲ್ವರಿಯನ್ನು ಪ್ರಸಕ್ತ ತಿಂಗಳು ನೌಕಾಪಡೆಯ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ನೌಕಾಪಡೆಯ ಉನ್ನತಾಧಿಕಾರಿರೊಬ್ಬರು ತಿಳಿಸಿದ್ದಾರೆ.
ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾಪೆìನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಕಲ್ವರಿಯು ವಿಸ್ತೃತ ಸಾಗರ ಪರೀಕ್ಷೆಯ ಬಳಿಕ ಇದೇ ತಿಂಗಳಿನಲ್ಲಿ ನೌಕಾಪಡೆಯ ತೆಕ್ಕೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಶುಕ್ರವಾರ ಇಲ್ಲಿ ನೌಕಾಪಡೆಯ ಪಶ್ಚಿಮ ಕಮಾಂಡ್‌ನ ಫ್ಲ್ಯಾಗ್ ಆಫಿಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ಅವರು ಹೇಳಿದ್ದಾರೆ.
ಕಲ್ವರಿ ಜಲಾಂತರ್ಗಾಮಿ ನೌಕೆಯು ಸುಮಾರು 120 ದಿನಗಳ ವಿಸ್ತೃತ ಸಾಗರ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು,ಈ ಅವಧಿಯಲ್ಲಿ ವಿವಿಧ ಉಪಕರಣಗಳ ಯಶಸ್ವಿ ಪರೀಕ್ಷೆ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಜಲಾಂತರ್ಗಾಮಿ ನೌಕೆಯು ಭಾರತದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದ್ದು, ದೇಶದ ಕಡಲ ಪರಾಕ್ರಮಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಹಿರಿಯ ನೌಕಾ ಅಧಿಕಾರಿ ಲೂಥ್ರಾ ನುಡಿದಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ಚೀನಾ ಮತ್ತು ಪಾಕಿಸ್ತಾನದ ಜಲಾಂತರ್ಗಾಮಿ ನೌಕೆಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಕಲ್ವರಿಯನ್ನು ನೌಕಾಪಡೆಯ ತೆಕ್ಕೆಗೆ ಸೇರಿಸಿಕೊಳ್ಳುವುದು ಆವಶ್ಯಕವಾಗಿದೆ ಎಂದವರು ಹೇಳಿದ್ದಾರೆ.
ಐಎನ್‌ಎಸ್ ಕಲವರಿ, ಪ್ರಾಜೆಕ್ಟ್ 75 ಅಡಿಯಲ್ಲಿ ಭಾರತದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸ್ಕಾರ್ಪಿನ್ ಶ್ರೇಣಿಯ 6 ಜಲಾಂತರ್ಗಾಮಿ ನೌಕೆಗಳಲ್ಲಿ ಒಂದಾಗಿದೆ.
ಈ ಜಲಾಂತರ್ಗಾಮಿ ನೌಕೆಯನ್ನು ಮುಂಬಯಿಯ ಮಜ್ಗಾಂವ್ ಡಾಕ್ಸ್ ಲಿಮಿಟೆಡ್ (ಎಂಡಿಎಲ್) ನಲ್ಲಿ ತಯಾರಿಸಲಾಗಿದ್ದು, ಇಂತಹ ಒಟ್ಟು 6 ಜಲಾಂತರ್ಗಾಮಿ ನೌಕೆಗಳನ್ನು ಎಂಡಿಎಲ್ ಸಿದ್ಧಪಡಿಸುತ್ತಿದೆ.