Advertisement
ಹಿಂದಿನ ಸರಕಾರದ ಅವಧಿಯಲ್ಲಿ ಆಶ್ರಯ ಮನೆ ನಿರ್ಮಾಣ ಯೋಜನೆಯಲ್ಲಿ ಅಕ್ರಮಗಳಾಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ವಸತಿ ಸಚಿವ ವಿ. ಸೋಮಣ್ಣ ತನಿಖೆಗೆ ಆದೇಶಿಸಿದ್ದರು. ಮೊದಲ ಹಂತದಲ್ಲಿ 53,435 ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು. ಅಕ್ರಮ ಪತ್ತೆಗಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದಲೇ ವಿಜಿಲ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿ ಕಾರಿಗಳಿಗೆ ಸರಕಾರ ಸೂಚನೆ ನೀಡಿತ್ತು.
ಆರಂಭದಲ್ಲಿ ವಿಜಿಲ್ ಮೊಬೈಲ್ ಆ್ಯಪ್-1.0 ಅಭಿವೃದ್ಧಿ ಪಡಿಸಲಾಗಿತ್ತು. ಲೋಪಗಳಿದ್ದ ಕಾರಣ ಅದನ್ನು ಬದಲಾಯಿಸಿ ಆ್ಯಪ್ 1.1 ಎಂದು ಅಪ್‌ಡೇಟ್ ಮಾಡಲಾಯಿತು. ಈ ವರ್ಷನ್‌ನಲ್ಲಿಯೂ ಅಕ್ರಮ ಮನೆಗಳ ಸಂಪೂರ್ಣ ಮಾಹಿತಿ ದೊರೆಯುತ್ತಿಲ್ಲ ಎಂದು 1.3 ವರ್ಷನ್ ಬಿಡುಗಡೆ ಮಾಡಲಾಯಿತು. ಅದರಲ್ಲಿಯೂ ಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗದೆ 1.5 ವರ್ಷನ್‌ಗೆ ಅಪ್‌ಡೇಟ್ ಮಾಡಿ ತನಿಖೆ ನಡೆಸಲು ಇಲಾಖೆ ನಿರ್ಧರಿಸಿದೆ. ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ ಎಲ್ಲ ಜಿಲ್ಲೆಗಳ ವಸತಿ ಇಲಾಖೆಯ ಮುಖಸ್ಥರಿಗೆ ಪತ್ರ ಬರೆದಿದ್ದು, ಆದಷ್ಟು ಬೇಗ ವಿಜಿಲ್ ಮೊಬೈಲ್ ಆ್ಯಪ್ ಮೂಲಕ ಫಲಾನುಭವಿಗಳ ಮಾಹಿತಿಯನ್ನು ನಿಗಮಕ್ಕೆ ಅಪ್‌ಲೋಡ್ ಮಾಡುವಂತೆ ಮತ್ತು ಎರಡನೇ ಹಂತದಲ್ಲಿ ಇನ್ನೂ 1.71 ಲಕ್ಷ ಮನೆಗಳನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
Related Articles
ಅಕ್ರಮ ಪತ್ತೆಹಚ್ಚಲು ಇಲಾಖೆ ಸರಳ ಮಾರ್ಗ ಅನುಸರಿಸುವುದರ ಬದಲು ಆ್ಯಪ್ ಅಪ್‌ಡೇಟ್ ನಲ್ಲಿಯೇ ಸಮಯ ವ್ಯಯಿಸುತ್ತಿರುವುದರಿಂದ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆಯಾಗದೆ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
Advertisement