Advertisement
ಅಗರು ಮರಕ್ಕೆ ಇನಾಕ್ಯುಲೇಷನ್ ಎಂಬ ವಿಷಯ ಬೆಳ್ತಂಗಡಿ ತಾಲೂಕಿನ ರೈತರಲ್ಲಿ ಕುತೂಹಲ ಮೂಡಿಸಿದ್ದು ತೀರಾ ಸಹಜ. ಇಲ್ಲಿ ಅನೇಕ ರೈತರು ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಹತ್ತು ವರ್ಷಗಳ ಹಿಂದೆ ಅಗರು ಮರಗಳನ್ನು ನಾಟಿ ಮಾಡಿ ಸಲಹಿದ್ದಾರೆ. ಮರಗಳು ಈಗ ಅಡಿಕೆಮರದಷ್ಟೇ ಎತ್ತರ ಬೆಳೆದಿವೆ. ಅದಕ್ಕಿಂತ ದಪ್ಪವಾಗಿ ಒಂದು ಮೀಟರ್ ಸುತ್ತಳತೆಯೂ ಬಂದಿವೆ. ಇದು ಇನಾಕ್ಯುಲೇಷನ್ ಮಾಡಿಸಲು ಸಕಾಲ. ಮರದ ಒಳಗೆ ಶಿಲೀಂಧ್ರದ ಸಂಪರ್ಕವಾಗಬೇಕು. ಕ್ರಮಶಃ ಮರ ಸಾಯುತ್ತ ಬರಬೇಕು. ಆಗ ಮಾತ್ರ ಅದರೊಳಗೆ ಉತ್ಪನ್ನವಾಗುತ್ತದೆ. ಬೆಲೆಬಾಳುವ ಸುಗಂಧಿತ ತೈಲ. ಅದೇ ಲೋಕಪ್ರಸಿದ್ಧವಾದ ಅಗರು ಎಂಬ ಅತ್ಯಂತ ಸುವಾಸನೆಯ ದ್ರವ್ಯವೆಂಬ ಖ್ಯಾತಿ ಗಳಿಸಿದೆ.
ಇತ್ತೀಚೆಗಿನ ವರೆಗೂ ಅಗರ್ ಮರಗಳಿಗೆ ಇನಾಕ್ಯುಲೇಷನ್ ಮಾಡಲು ಚೀನಾದೇಶದಿಂದ ಪರಿಣತರು ಬರುತ್ತಿದ್ದರು. ಆದರೆ ಈಗ ವನದುರ್ಗಿ ಕಂಪೆನಿಯವರು ಸ್ಥಳೀಯ ರೈತರಿಗೆ ತರಬೇತಿ ನೀಡಿ ಈ ಕೆಲಸವನ್ನು ಮಾಡಿಸುತ್ತಿದ್ದಾರೆ. ಮಾಣಿಯ ಪ್ರವೀಣಚಂದ್ರ ಮತ್ತು ಹುಬ್ಬಳ್ಳಿಯ ಶಿವರಾಜ್ ಜತೆಗೂಡಿ ಬೆಳ್ತಂಗಡಿಯ ರೈತರ ಸಿದ್ಧವಾಗಿ ನಿಂತ ಮರಗಳಿಗೆ ಶಿಲೀಂಧ್ರ ಸಂಪರ್ಕವಾಗುವ ಚುಚ್ಚುಮದ್ದನ್ನು ಕೊಡುವ ಕೆಲಸ ಮಾಡುತ್ತಿದ್ದಾರೆ.
Related Articles
Advertisement
ವರ್ಷದೊಳಗೇ ಗೊತ್ತಾಗುತ್ತೆಒಂಭತ್ತರಿಂದ ಹನ್ನೆರಡು ತಿಂಗಳೊಳಗೆ ಮರದ ಎಲೆಗಳು ಉದುರಿ ಕೊಂಬೆಗಳು ಒಣಗುವ ಪ್ರಕ್ರಿಯೆ ಆರಂಭವಾದರೆ ಇನಾಕ್ಯುಲೇಷನ್ ಕೆಲಸ ಮಾಡಿದೆ ಎಂದರ್ಥ. ಹಾಗಾಗಲಿಲ್ಲವೆಂದಾದರೆ ಮತ್ತೂಮ್ಮೆ ಇನಾಕ್ಯುಲೇಷನ್ ಮಾಡಿಸಬೇಕು. ಔಷಧ ಸ್ವೀಕೃತವಾದರೆ ಒಂದು ವರ್ಷದಲ್ಲಿ ಮರದ ಮಧ್ಯಭಾಗದಲ್ಲಿ ಕೆತ್ತಿ ನೋಡಿದರೆ ಒಳಗಿನ ತಿರುಳು ಕಂದು ಅಥವಾ ಕಪ್ಪು ವರ್ಣ ತಳೆದಿರುವುದು ಕಾಣಿಸುತ್ತದೆ. ಈ ಕಪ್ಪಗಿನ ತಿರುಳಿನಲ್ಲಿದೆ ಸುಗಂಧಿತವಾದ, ಬೆಲೆಬಾಳುವ ಅಗರ್ ತೈಲ. ಒಂದು ವರ್ಷದ ಮರದಲ್ಲಿ ಸಿಗುವ ತೈಲ ಹದಿನೈದರಿಂದ ಇಪ್ಪತ್ತು ಗ್ರಾಮ್. ಅಷ್ಟು ಸಿಗಬೇಕಾದರೆ ಮರವನ್ನು ಕತ್ತರಿಸಿದಾಗ ಎಪ್ಪತ್ತು ಕಿಲೋದಷ್ಟು ಚಕ್ಕೆಗಳು ದೊರಕಬೇಕು. ಒಂದು ಮರದಿಂದ ಗರಿಷ್ಠ ಎಷ್ಟು ಆದಾಯ ಬರಬಹುದು? ಹದಿನೈದು ಗ್ರಾಮ್ ತೈಲ ಬಂದರೆ ಹತ್ತರಿಂದ ಹದಿನೈದು ಸಾವಿರ ನಿರೀಕ್ಷಿತ. ಎರಡು ವರ್ಷ ಹಾಗೆಯೇ ಉಳಿಸಿದರೆ ಹೆಚ್ಚು ಆದಾಯ ಸಿಗುತ್ತದೆ. ಐದು ವರ್ಷ ಕಾದರೆ ಒಂದು ಮರ ಇಪ್ಪತ್ತೆ„ದು ಸಾವಿರ ತರಲು ಸಾಧ್ಯವಿದೆ. ಸಾಮಾನ್ಯವಾಗಿ ಹತ್ತು ಮರಗಳಿಂದ ಒಂದು ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಬಹುದು. ಲೆಕ್ಕ ಹಾಕಿದರೆ ಹತ್ತು ವರ್ಷಗಳಲ್ಲಿ ರಬ್ಬರ್ ಮತ್ತು ಅಡಿಕೆಮರಗಳಿಂದ ಇಷ್ಟು ಆದಾಯ ಬಂದಿರುವುದಿಲ್ಲ. ಇನಾಕ್ಯುಲೇಷನ್ ಮಾಡಿಸಲು ಎಷ್ಟು ವೆಚ್ಚ ಬರುತ್ತದೆ ಅಂದಿರಾ? ಒಂದು ಮರಕ್ಕೆ 800 ರೂಪಾಯಿಯ ಔಷಧಿ ಬೇಕು. ಇದರಲ್ಲಿ ಶೇ. 50 ವೆಚ್ಚವನ್ನು ವನದುರ್ಗಿ ಕಂಪೆನಿ ರೈತರಿಗೆ ಕೊಡುತ್ತದೆ. ರೈತರೇ ಇದನ್ನು ಮಾಡಲು ಕಲಿತರೆ ಕೂಲಿಯ ವೆಚ್ಚ ಉಳಿಯುತ್ತದೆ. ಆದರೆ ಮರದ ಮೇಲೆ ಏರಿ ರಂಧ್ರ ಕೊರೆಯಬೇಕು. ಇಬ್ಬರು ಒಂದು ದಿನದಲ್ಲಿ ಗರಿಷ್ಠ ನಾಲ್ಕಕ್ಕಿಂತ ಅಧಿಕ ಮರಗಳಿಗೆ ಔಷಧಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಒಂದು ಮರದ ಇನಾಕ್ಯುಲೇಷನ್ ಕೆಲಸಕ್ಕೆ ಒಂದೂವರೆಯಿಂದ ಎರಡು ಸಾವಿರ ರೂ. ವೆಚ್ಚ ತಗಲುತ್ತದೆ ಎಂದು ಹೇಳುತ್ತಾರೆ ಗಂಗಾಧರ ಭಟ್ಟರು. ರಂಧ್ರಕ್ಕೆ ಹಾಕುವ ಬಿರಡೆಗೂ ಹತ್ತು ರೂಪಾಯಿ ಬೆಲೆ ಇದೆಯಂತೆ. ಗಂಗಾಧರ ಭಟ್ಟರ ತೋಟದಲ್ಲಿ ಇನಾಕ್ಯುಲೇಷನ್ ಮುಗಿದಿದೆ. ಇನ್ನು ಏನಿದ್ದರೂ ಒಂದು ವರ್ಷ ಕಾಯುವ ಕೆಲಸ. ಮರದೊಳಗೆ ಶಿಲೀಂಧ್ರ ಬೆಳೆದು ಮರ ಸತ್ತು ಒಳಗಿನ ತಿರುಳು ಕಂದು ವರ್ಣ ತಳೆದರೆ ಹತ್ತು ವರ್ಷದ ಶ್ರಮ ಸಾರ್ಥಕವಾಗುತ್ತದೆ, ಇನ್ನಷ್ಟು ರೈತರ ಒಲವು ಇದರ ಕೃಷಿಯತ್ತ ತಾನಾಗಿ ಹರಿಯುತ್ತದೆ. ಔಷಧ ತಯಾರಿಕೆಗೆ ಅತ್ಯಗತ್ಯ
ಅಗರ್ ಮರದ ತೈಲದಲ್ಲಿ 150ಕ್ಕಿಂತ ಹೆಚ್ಚು ರಾಸಾಯನಿಕಗಳ ಸಂಯುಕ್ತವಾಗಿವೆ. ಸುಗಂಧ ದ್ರವ್ಯಗಳ ತಯಾರಿಕೆ ಮಾತ್ರವಲ್ಲ, ಔಷಧಿಗಳ ತಯಾರಿಕೆಯಲ್ಲೂ ಅದನ್ನು ಉಪಯೋಗಿಸುತ್ತಾರೆ. ತೈಲ, ಹುಡಿ, ಚಕ್ಕೆ ಎಲ್ಲವೂ ಉಪಯುಕ್ತವಾಗಿವೆ. ಕಾಮಾಲೆ, ಸಿಡುಬು, ಅಸ್ತಮಾ, ಸಂಧಿವಾತ, ಚರ್ಮದ ಕಾಯಿಲೆಗಳು, ಹೊಟ್ಟೆನೋವು, ಯಕೃತ್, ಕಿಡ್ನಿ, ಶ್ವಾಸಕೋಶ ಸಮಸ್ಯೆಗಳು, ಹೊಟ್ಟೆಯ ಗೆಡ್ಡೆ, ನರಮಂಡಲದ ತೊಂದರೆ, ಹೆರಿಗೆ ಸಮಯದ ನೋವು, ಕ್ಯಾನ್ಸರ್, ಅತಿಸಾರ ಹೀಗೆ ಹಲವು ವ್ಯಾಧಿಗಳ ಔಷಧ ತಯಾರಿಕೆಯಲ್ಲಿ ಅದರ ಪಾತ್ರವಿದೆ. ಪ. ರಾಮಕೃಷ್ಣ ಶಾಸ್ತ್ರಿ