ಮುಂಬಯಿ: ಹೊಟ್ಟೆ ಹಸಿದಾಗ ಜನ ಹೊಟ್ಟೆಪಾಡಿಗಾಗಿ ಮುಂಬಯಿಗೆ ಬಂದರು. ಅದೇ ರೀತಿ ಮುಂಬಯಿಯಲ್ಲಿರುವ ದಕ್ಷಿಣ ಕನ್ನಡದವರಿಗೆ ಊರಿಗೆ ಹೋಗಿ ಶ್ರೀಕೃಷ್ಣನ ದರ್ಶನ ಮಾಡಲು ಅನಾನುಕೂಲವಾದುದರಿಂದ ಶ್ರೀಕೃಷ್ಣನನ್ನೇ ಮುಂಬಯಿಗೆ ಕರೆ ತಂದಿದ್ದಾರೆ. ಜನರು ದಾರಿತಪ್ಪಿ ಹೋಗಬಾರದೆಂಬ ಕಾರಣಕ್ಕಾಗಿ ನಮ್ಮ ಪೂರ್ವಜರು ಶ್ರೀಕೃಷ್ಣನನ್ನು ತಂದು ಇಲ್ಲಿನ ಗೋಕುಲದಲ್ಲಿ ಪ್ರತಿಷ್ಠಾಪಿಸಿದರು. ಬಿಎಸ್‌ಕೆಬಿ ಅಸೋಸಿಯೇಶನ್ ರೂಪಿಸಿದ ಗೋಕುಲ ಕಂಸನ ಮನೆಯ ಪಕ್ಕದಲ್ಲಿದ್ದಂತಹ ನಂದಗೋಕುಲಕ್ಕಿಂತ ಕಡಿಮೆಯಿಲ್ಲ. ಇದನ್ನೆಲ್ಲ ನೋಡಿಕೊಂಡು ನಮ್ಮ ದೈಹಿಕ, ಮಾನಸಿಕ ಕಾಯಿಲೆಗಳಿಂದ ಮುಕ್ತರಾಗೋಣ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.
ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸಂಯುಕ್ತ ಆಯೋಜನೆಯಲ್ಲಿ ಸಯಾನ್ ಪೂರ್ವದ ನಿವೇಶನ ಸಂಖ್ಯೆ-273ರಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡ ಗೋಕುಲ ಕಟ್ಟಡಕ್ಕೆ ಎ. 6ರಂದು ಆಗಮಿಸಿದ ಸ್ವಾಮೀಜಿ ಆಶೀರ್ವಚನ ನೀಡಿ, 1925ರಲ್ಲಿ ಬಿಎಸ್‌ಕೆಬಿಎ ಅಸೋಸಿಯೇಶನ್ ಎಂದು ನಾಮಕರಣಗೈದು ಸಂಸ್ಥೆಯನ್ನು ಸ್ಥಾಪಿಸಿದ ಸ್ಥಾಪಕರು, ಸಂಸ್ಥೆಯ ಏಳ್ಗೆಗೆ ಶ್ರಮಿಸಿದವರು, ಹಾಗೂ ಶತಮಾನದ ಸೇವೆಯತ್ತ ಮುನ್ನಡೆಸುತ್ತಿರುವ ಎಲ್ಲರನ್ನೂ ಅಭಿನಂದಿಸಿದರು.
ಸಂಬಂಧಗಳು ಮತ್ತು ಸತ್ಯ ಎರಡು ನಮ್ಮ ಮುಂದೆ ನಿಂತಾಗ ಸಂಬಂಧಿ ಎಂದು ನೋಡದೆ ಸತ್ಯದ ಕಡೆಗೆ ಗಮನ ಕೊಡಬೇಕು. ಶ್ರೀಕೃಷ್ಣ ನಮಗೆ ಭಗವದ್ಗೀತೆ ಕೊಟ್ಟಿದ್ದಾರೆ. ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಮ್ಮ ಮನೆಯಲ್ಲಿ ಹಿರಿಯರು ಪ್ರತೀದಿನ ಪಠಿಸುವ ಕೆಲಸ ಮಾಡಿದರೆ ನಮ್ಮ ಮಕ್ಕಳು ಅದನ್ನು ಅನುಸರಿಸುತ್ತಾರೆ. ಮಾತಾಪಿತರಿಗೆ ಕೊಟ್ಟ ಭಾಷೆಯನ್ನು ಉಳಿಸುತ್ತಾರೆ. ಇಲ್ಲವಾದಲ್ಲಿ ಮಕ್ಕಳು ಮತಾಪಿತರನ್ನು ಆಶ್ರಮದಲ್ಲಿ ಬಿಡುತ್ತಾರೆ. ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಭಗವದ್ಗೀತೆ ಏನೆಂದು ತಿಳಿಸಿಕೊಡಬೇಕು. ಆಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಜಗತ್ತಿಗೆ ವ್ಯಾಪಿಸುತ್ತದೆ. ಗೋಕುಲದ ಪುನರ್‌ನಿರ್ಮಾಣ ಇಷ್ಟೊಂದು ಸೊಗಸಾಗಲು ಇದರ ಸಾರಥ್ಯ ವಹಿಸಿರುವ ಡಾ| ಸುರೇಶ್ ರಾವ್ ಕಾರಣ ಎಂದು ತಿಳಿಸಿ ಶುಭ ಹಾರೈಸಿದರು.
ಬಿಎಸ್‌ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಸ್ವಾಗತಿಸಿ, ಸುಮಾರು ಒಂಬತ್ತೂವರೆ ದಶಕಗಳ ಹಿಂದೆ ಮುಂಬಯಿವಾಸಿ ಅವಿಭಜಿತ ದಕ್ಷಿಣ ಕನ್ನಡದ ಬ್ರಾಹ್ಮಣರು ಸಂಘಟಿತರಾಗಿ ಸ್ಥಾಪಿಸಿದ ಬಿಎಸ್‌ಕೆಬಿಎ ಸಂಸ್ಥೆಯ ಬೃಹತ್ ಕನಸು ಇದೀಗ ನನಸಾಗಿದೆ. ಗೋಕುಲದ ಪುನರ್ ನಿರ್ಮಾಣ, ಶ್ರೀಕೃಷ್ಣ ಮಂದಿರ ಮುಂದಿನ ಜನಾಂಗಕ್ಕೆ ಕಾಮಧೇನುವಾಗಲಿ ಎಂದು ತಿಳಿಸಿ ಶುಭ ಹಾರೈಸಿದರು.
ಗೋಕುಲದ ಹಿರಿಯ ಪುರೋಹಿತ ವೇ| ಮೂ| ಶ್ರೀ ಗುರುರಾಜ ಉಡುಪ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಗಣಪತಿಯಾಗ, ದ್ವಾರ ಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ ಪೂಜೆ ನೆರವೇರಿತು. ವಿದ್ವಾನ್ ಧರೆಗುಡ್ಡೆ ಶ್ರೀನಿವಾಸ ಭಟ್ ಆಶೀರ್ವಚನ ನೀಡಿದರು. ಕೃಷ್ಣರಾಜ ಉಪಾಧ್ಯಾಯ, ಶ್ರೀನಿವಾಸ ಭಟ್, ಗೋಪಾಲ ಭಟ್, ಗಿರಿಧರ ಉಡುಪ, ನಾಗರಾಜ ಐತಾಳ, ಎಸ್. ಎನ್. ಉಡುಪ ಜೆರಿಮೆರಿ, ನಾಗರಾಜ ಉಡುಪ, ದಿನೇಶ್ ಉಪರ್ಣಾ, ಗುರುರಾಜ ಉಡುಪ ಅವರು ಸಹ ಪುರೋಹಿತರಾಗಿ ಸಹಕರಿಸಿದರು. ಬಿಎಸ್‌ಕೆಬಿಎ ಉಪಾಧ್ಯಕ್ಷೆ ಶೈಲಿನಿ ಎ. ರಾವ್ ಮತ್ತು ಅರುಣ್ ರಾವ್ ದಂಪತಿ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಕಾರ್ಯದರ್ಶಿ ಅನಂತ ಪದ್ಮನಾಭನ್ ಕೆ. ಪೋತಿ ಮತ್ತು ಡಾ| ಸಹನಾ ಎ. ಪೋತಿ ದಂಪತಿ ಗಣಪತಿಹೋಮದ ಯಜಮಾನತ್ವ ವಹಿಸಿದ್ದರು. ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ದಂಪತಿ ಶ್ರೀಪಾದರ ಪಾದಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಕೆಬಿಎ ಕೆ. ಸುಬ್ಬಣ್ಣ ರಾವ್, ಪ್ರಸಕ್ತ ಉಪಾಧ್ಯಕ್ಷ ವಾಮನ ಹೊಳ್ಳ, ಕೋಶಾಧಿಕಾರಿ ಸಿಎ ಹರಿದಾಸ ಭಟ್, ಜತೆ ಕಾರ್ಯದರ್ಶಿಗಳಾದ ಪಿ. ಸಿ. ಎನ್. ರಾವ್, ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ. ಬಿ. ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಐ. ಕೆ. ಪ್ರೇಮಾ ಎಸ್. ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ತರಾದ ಎ. ಶ್ರೀನಿವಾಸ ರಾವ್, ಬಿ. ರಮಾನಂದ ರಾವ್, ಕೃಷ್ಣ ಆಚಾರ್ಯ ಸಹಿತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ. ಎಲ್. ಬಂಗೇರ, ದೇವಾಡಿಗ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಬಿ. ದೇವಾಡಿಗ, ರಾಮ ವಿಠಲ ಕಲ್ಲೂರಾಯ, ಹರಿ ಭಟ್ ಮುಂಡ್ಕೂರು, ಸುಧೀರ್ ಆರ್. ಎಲ್. ಭಟ್, ಡಾ| ಎ. ಎಸ್. ರಾವ್, ಅದಮಾರು ಮಠದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಡುಬಿದ್ರಿ ವಿ. ರಾಜೇಶ್ ರಾವ್, ಡಾ| ಎಂ. ನರೇಂದ್ರ, ಡಾ| ಜೀವಿ ಕುಲ್ಕರ್ಣಿ ಹಾಗೂ ದಾನಿಗಳು, ಭಕ್ತರು ಉಪಸ್ಥಿತರಿದ್ದರು. ಸಿಎ ಹರಿದಾಸ ಭಟ್ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ವಾಮನ ಹೊಳ್ಳ ವಂದಿಸಿದರು.
– ರೋನ್ಸ್ ಬಂಟ್ವಾಳ್