ಮುಂಬಯಿ : ರಾಷ್ಟ್ರ ನಿರ್ಮಾಣದಲ್ಲಿ ಐಐಟಿಗಳ ಶ್ಲಾಘನೀಯ ಪಾತ್ರವನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಶನಿವಾರ ಐಐಟಿ ಮುಂಬಯಿ ಇದರ 56ನೇ ಘಟಿಕೋತ್ಸವದಲ್ಲಿ ಮಾತನಾಡುತ್ತಾ “ಐಐಟಿಗಳು ನಿರಂತರವಾಗಿ ನಡೆಸುತ್ತಿರುವ ಹೊಸ ಹೊಸ ತಾಂತ್ರಿಕ ಅನ್ವೇಷಣೆಗಳ ಫಲವಾಗಿ ಭಾರತ ಗ್ಲೋಬಲ್ ಬ್ರಾಂಡ್ ಆಗಿದೆ’ ಎಂದು ಹೇಳಿದರು.
ಮುಂಬಯಿ ಐಐಟಿಗೆ 1,000 ಕೋಟಿ ರೂ.ಗಳ ಹಣಕಾಸು ನೆರವನ್ನು ಪ್ರಧಾನಿ ಮೋದಿ ಘೋಷಿಸಿದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞಾನವನ್ನು ಪರಿಣಾಮವಾಗಿ ಬಳಸಿಕೊಂಡಿರುವ ಭಾರತೀಯ ಐಐಟಿಗಳ ಸಾಧನೆ ಶ್ಲಾಘನೀಯವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ನೂತನ ಪದವೀಧರರನ್ನು ಅಭಿನಂದಿಸಿ ಉಜ್ವಲ ಭವಿಷ್ಯ ಹಾರೈಸಿದರು.
ದೇಶದಲ್ಲಿ ಉಪಲಬದ್ಧವಿರುವ ಅತ್ಯುತ್ತಮ ಶಿಕ್ಷಣವನ್ನು ನೀವು ಪಡೆದಿದ್ದೀರಿ. ದೇಶದ ವೈವಿಧ್ಯವನ್ನು ನೀವು ಪ್ರತಿನಿಧಿಸುವವರಾಗಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.
ಅತ್ಯುತ್ತಮ ಆಲೋಚನೆಗಳು, ಚಿಂತನೆಗಳು ಉನ್ನತ ಶಿಕ್ಷಣಾಲಯಗಳ ಕ್ಯಾಂಪಸ್‌ನಿಂದ ಬರುತ್ತವೆಯೇ ವಿನಾ ಸರಕಾರಿ ಕಟ್ಟಡಗಳ ಒಳಗಿಂದ ಅಥವಾ ಶೋಕಿ ಕಾರ್ಯಾಲಯಗಳಿಂದ ಬರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.