ಭಾಲ್ಕಿ: ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಶಿಕ್ಷಣದ ಪ್ರತಿ ಹಂತದಲ್ಲಿಯೂ ನಾವಿನ್ಯತೆ, ಗುಣಾತ್ಮಕತೆ, ಪ್ರಯೋಗಶೀಲತೆ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದೊಳಗೆ ಎರಡು ಮುಖ್ಯ ಭಾಗಗಳಿವೆ. ಜ್ಞಾರ ಪ್ರಸಾರ ಮಾಡುವುದು ಮತ್ತು ಜ್ಞಾನ ಸೃಷ್ಟಿ ಮಾಡುವುದು. ಜ್ಞಾನ ಪ್ರಸಾರ ಮಾಡುವುದು ಪ್ರತಿಯೊಂದು ಶಾಲೆಯ ಮೊದಲ ಕರ್ತವ್ಯ. ಜ್ಞಾನ ಸೃಷ್ಟಿ ಮಾಡುವುದನ್ನು ನಾವು ಮರೆತಿದ್ದೇವೆ. ಜ್ಞಾನವನ್ನು ಸೃಷ್ಟಿ ಮಾಡಲು ನಾವು ಸದಾ ಹೊಸ ವಿಚಾರ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇರುವಂತಹ ಚಿಂತನೆ ಗಟ್ಟಿಯಾಗಿರಬೇಕು. ಯಾರಿಗೆ ತಳಪಾಯ ಗಟ್ಟಿ ಇದೆಯೋ ಅವರು ಮಾತ್ರ ಹೊಸ ಚಿಂತನೆ ಮಾಡುವುದಕ್ಕೆ ಸಾಧ್ಯ ಎಂದರು.
ಜೀವನೋತ್ಸಾಹ, ಸತತ ಪ್ರಯತ್ನ, ಸಾಮಾಜಿಕ ಬದ್ಧತೆ ಎಂಬ ಮೂರು ಸೂತ್ರಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಯುವಕರಲ್ಲಿ ಈಗ ಬೋರ್ ರೋಗ ಕಾಣಿಸಿಕೊಂಡಿದೆ. ಜೀವನದ ಬಗ್ಗೆ 25ನೇ ವಯಸ್ಸಿನಲ್ಲಿಯೇ ನಿರುತ್ಸಾಹ ತೋರುತ್ತಿದ್ದಾರೆ. ಹಳೆ ಮನೆ ಗೋಡೆಯ ಬಿರುಕು, ಕಲ್ಲಿನ ನಡುವಿನ ಕೊರಕಲ್ಲಿನ ಜಾಗದಲ್ಲೇ ಹುಲ್ಲೊಂದು ಜೀವನೊತ್ಸಾಹದಿಂದ ಹುಟ್ಟುತ್ತದೆ. ಅದರಂತೆ ನಾವು ಬದುಕಿನ ಸಂಭ್ರಮ ಕಂಡುಕೊಳ್ಳಬೇಕು. ಹೊರಗೆಲ್ಲೋ ಉತ್ಸಾಹ ಹುಡುಕುತ್ತಾ ಹೋಗದೆ, ನಮ್ಮೊಳಗೆ ಇರುವ ಅಪಾರ ಉತ್ಸಾಹದ ಚಿಲುಮೆ ಹುಡುಕಬೆಕು ಎಂದು ಹೇಳಿದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಗುರುಕುಲದ ಆಡಳಿತಾ ಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಮುಖ್ಯಶಿಕ್ಷಕ ನಾಗರಾಜ ಮಠಪತಿ ಇದ್ದರು.