ಮುಂಬೈ: ಏ.9ರಿಂದ 14ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಇದರ ಗುಣಮಟ್ಟವನ್ನು ಎಲ್ಲ ರೀತಿಯಿಂದಲೂ ಸುಧಾರಿಸಲು ಬಿಸಿಸಿಐ ಕೆಲವು ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡಲು ನಿರ್ಧರಿಸಲಿದೆ. ಅದರ ಚುಟುಕು ನೋಟ ಹೀಗಿದೆ.
ಡಿಆರ್‌ಎಸ್ ವೇಳೆ ಸಾಫ್ಟ್ ಸಿಗ್ನಲ್ ಇಲ್ಲ: ಮೈದಾನದಲ್ಲಿ ಅಂಪೈರ್ ನೀಡಿದ ತೀರ್ಪನ್ನು ಪ್ರಶ್ನಿಸಿ ತಂಡಗಳು ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಡಿಆರ್‌ಎಸ್ ನಲ್ಲಿ ಗೊಂದಲ ಮುಂದುವರಿದರೆ, ಆಗ ಮತ್ತೆ ಅಂಪೈರ್‌ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಸಾಫ್ಟ್ ಸಿಗ್ನಲ್ ಎಂದು ಕರೆಯಲಾಗುತ್ತದೆ. ಇದನ್ನು ಬಿಸಿಸಿಐ ರದ್ದು ಮಾಡಿದೆ. ಡಿಆರ್‌ಎಸ್ ವೇಳೆ ಅಂತಿಮ ತೀರ್ಪನ್ನು ತೃತೀಯ ಅಂಪೈರ್ ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ನೋಬಾಲ್, ಶಾರ್ಟ್ ರನ್ ತೃತೀಯ ಅಂಪೈರ್‌ಗೆ: 2020ರ ಐಪಿಎಲ್ ನಲ್ಲಿ ಮೈದಾನದ ಅಂಪೈರ್ ಬ್ಯಾಟ್ಸ್‌ಮನ್ ಕ್ರೀಸ್ ಮುಟ್ಟಿಲ್ಲ ಎಂದು ತೀರ್ಪು ನೀಡಿದ್ದರು. ಅದರ ಪರಿಣಾಮ ಪಂಜಾಬ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಎದುರು ಒಂದು ರನ್ ಸೋಲು ಎದುರಾದದ್ದು ನೆನಪಿರಬಹುದು. ಇದು ತೀವ್ರ ಚರ್ಚೆಗೂ ಕಾರಣವಾಗಿತ್ತು. ಹೀಗಾಗಿ ಈ ತೀರ್ಪನ್ನು ಬದಲಾಯಿಸಲು ಮೂರನೇ ಅಂಪೈರ್‌ಗೆ ಅಧಿಕಾರ ನೀಡಲಾಗಿದೆ. ನೋಬಾಲ್ ಕುರಿತು ಅಂತಿಮ ತೀರ್ಪು ಮೂರನೇ ಅಂಪೈರ್ ವ್ಯಾಪ್ತಿಗೆ ಬಂದಿದೆ.
ಇದನ್ನೂ ಓದಿ: ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕ
90 ನಿಮಿಷಗಳಲ್ಲಿ ಇನಿಂಗ್ಸ್ ಮುಗಿಯಬೇಕು: ಈ ಹಿಂದೆ ಐಪಿಎಲ್ ಪಂದ್ಯಗಳು ನಿಧಾನಗತಿಯ ಓವರ್‌ನಿಂದ ತಡವಾಗಿದ್ದನ್ನು ಇಲ್ಲಿ ಗಮನಿಸಬಹುದು. ಪಂದ್ಯಕ್ಕೆ ಯಾವುದೇ ಅಡಚಣೆ ಎದುರಾಗದೇ ಇದ್ದರೆ, 20 ಓವರ್‌ಗಳ ಒಂದು ಇನಿಂಗ್ಸ್ ಅನ್ನು 90 ನಿಮಿಷಗಳಲ್ಲಿ ಮುಗಿಸಲೇಬೇಕು ಎಂದು ಬಿಸಿಸಿಐ ಹೇಳಿದೆ. ಆಟಕ್ಕೆ 85 ನಿಮಿಷ, 5 ನಿಮಿಷ ವಿರಾಮ (ಟೈಮ್ ಔಟ್). ಹೀಗಾಗಿ ಒಬ್ಬ ಬೌಲರ್‌ಗೆ ಒಂದು ಓವರ್ ಎಸೆಯಲು 4 ನಿಮಿಷ, 15 ಸೆಕೆಂಡ್ ಲಭ್ಯವಾಗಲಿದೆ.