ಪ್ರತಿ ಅಮ್ಮಂದಿರು ನೋಡ್ಲೆಬೇಕಾದ ಶಾರ್ಟ್‌ಫಿಲ್ಮ್…
ಅದೊಂದು ರೆಸಿಡೆನ್ಸಿ ಸ್ಕೂಲು. ಅಲ್ಲೊಂದು ಲೈಬ್ರರಿ. ರ್ಯಾಕಿನಲ್ಲಿ ಒಪ್ಪವಾಗಿ ಜೋಡಿಸಿಟ್ಟ ಪುಸ್ತಕಗಳ ಮೈದಡವುತ್ತಾ, ಪುಟಾಣಿ ಏನೋ ಹುಡುಕುತ್ತಿರುತ್ತದೆ. ಎಷ್ಟು ಹುಡುಕಿದರೂ ಅದಕ್ಕೆ ಬೇಕಾದ ವಸ್ತು ಅಲ್ಲಿ ಸಿಗೋದೇ ಇಲ್ಲ. ಆದ್ರೂ ಅದರ ಮೊಗದಲ್ಲಿ ಸಪ್ಪೆ ಭಾವದ ಪಸೆ ಇರುವುದಿಲ್ಲ.
ಒಂದು ಪುಟ್ಟ ನಗುವನ್ನು ಮುಖದಲ್ಲಿ ನೆಲೆಗೊಳಿಸಿಕೊಂಡು, ಮೆಟ್ಟಿಲಿಳಿದು ಕೆಳಕ್ಕೆ ಬರುತ್ತೆ. ಮುಖ ಇನ್ನಷ್ಟು ಅರಳುತ್ತೆ. ಯಾಕಂದ್ರೆ, ಅಲ್ಲಿ ಕಾಣಿಸೋದು ಟೀಚರ್ ಕೊಠಡಿ. ಆ ಪುಟಾಣಿಗೆ ಬೇಕಾದ ವಸ್ತು ಅಲ್ಲಿದೆ. ಟೀಚರ್ ಕೂರುವ ಕುರ್ಚಿಯೆದುರು, ಟೇಬಲ್ ಇದೆಯಲ್ಲ, ಅದರ ಡ್ರಾನಲ್ಲಿಯೇ ಆ ವಸ್ತುವಿದೆ. ಅದು ಜಸ್ಟ್ ಸೀಮೆಸುಣ್ಣ! ಕೈಯಲ್ಲಿ ಕೊಹಿನೂರು ವಜ್ರವನ್ನೇ ಹಿಡಿದಂತೆ ಸಂಭ್ರಮಿಸುತ್ತಾ, ಆಟದಂಗಳಕ್ಕೆ ಬರುತ್ತೆ. ಗೇಟಿನ ಬಳಿಯಿದ್ದ ಸೆಕ್ಯೂರಿಟಿ ಗಾರ್ಡ್ ಆ ಪುಟಾಣಿಯ ಸಂಭ್ರಮವನ್ನು ಅಚ್ಚರಿಗಣ್ಣಿಂದ ನೋಡ್ತಾನೆ. ಆದ್ರೆ, ಪುಟಾಣಿ ಮಾತ್ರ ಅವನತ್ತ ನೋಡುವುದಿಲ್ಲ. ಅವನು ಹಾಗೆ ನೋಡ್ತಿರೋದೂ ಪುಟಾಣಿಗೆ ಅರಿವಿಲ್ಲ. ಖುಷಿಯೆಂಬ ಅದರ ಪ್ರಪಂಚದಲ್ಲಿ ಅದಕ್ಕೆ ಸೆಕ್ಯೂರಿಟಿ ಗಾರ್ಡ್ ಬೇಕಿಲ್ಲ ನೋಡಿ… ಅದಕ್ಕೇ ಅದು ನೋಡಿಲ್ಲವೇನೋ! ನೈಸಾದ ಸಿಮೆಂಟಿನ ಅಂಗಳ. ಚಪ್ಪಲಿಯನ್ನು ನೀಟಾಗಿ ಕಳಚಿಟ್ಟು, ಅಂಗಳದ ಮಧ್ಯ ಆ ಪುಟಾಣಿ ಹೋಗಿ ಕೂರುತ್ತೆ. ಬೆರಳ ಕೋಟೆಯಲ್ಲಿ ಬಂಧಿಸಿಟ್ಟ ಚಾಕ್‌ಪೀಸ್ (ಸೀಮೆಸುಣ್ಣ) ಅನ್ನು ನಿಧಾನಕ್ಕೆ ತೆರೆಯುತ್ತೆ. ‘ಸೀಮೆಸುಣ್ಣ ತಗೊಂಡು ಮಗು ಏನ್ ಮಾಡುತ್ತೆ?’ ಅನ್ನೋದು ಸೆಕ್ಯೂರಿಟಿ ಗಾರ್ಡ್ ಕುತೂಹಲ.
ಪುಟಾಣಿ, ಪುಟ್ಟ ಕೈಗಳಿಂದ ನೆಲದ ಮೇಲೊಂದು ಚಿತ್ರ ಬಿಡಿಸುತ್ತೆ. ಐದಡಿ ಉದ್ದದ ಆ ಚಿತ್ರ ಬಿಡಿಸಿದ ಮೇಲೆ, ಅದರ ಮಧ್ಯದಲ್ಲಿ ಪುಟಾಣಿ ತಣ್ಣಗೆ ಮಲಗುತ್ತೆ! ಅದ್ಯಾವ ಚಿತ್ರ ಇರಬಹುದು ಎಂದು ಸೆಕ್ಯೂರಿಟಿ ಗಾರ್ಡಿನ ಹಾಗೆ ನಿಮಗೂ ಅನ್ನಿಸಬಹುದು. ಅದು ಆ ಪುಟಾಣಿಯ ತಾಯಿಯ ಚಿತ್ರ! ಅದಕ್ಕೆ ಅಮ್ಮ ಬೇಕಾಗಿದೆ! ಮಗನನ್ನು ಬಿಟ್ಟು ಅಮ್ಮ ಎಷ್ಟೇ ದೂರವಿದ್ದರೂ, ಆ ಪುಟಾಣಿಗೆ ಆಕೆಯನ್ನು ನಿಮಿಷದಲ್ಲಿ ಸೃಷ್ಟಿಸಿಕೊಳ್ಳುವುದು ಸುಲಭ. ಪ್ರತಿ ತಾಯಂದಿರು ನೋಡ್ಲೇಬೇಕಾದ ಈ ಶಾರ್ಟ್‌ಫಿಲ್ಮ್ ಯೂಟ್ಯೂಬ್‌ನಲ್ಲಿದೆ.
‘ಚಾಕ್’ (CHALK) ಎಂದು ಟೈಪಿಸಿ… ಈ ಪುಟಾಣಿ ನಿಮ್ಮ ಹೃದಯಕ್ಕೆ ಬಂದು ಚಿತ್ರ ಬಿಡಿಸುತ್ತೆ!