Advertisement

ಹೊಲಸು ಹಿಡಿಸಿದ ಯುಜಿಡಿ!

04:36 PM Sep 30, 2018 | Team Udayavani |

ಕೊಪ್ಪಳ: ನಗರವನ್ನು ಚಂಢೀಗಡ ಮಾದರಿ ಮಾಡುವೆವು ಎನ್ನುವ ಜನ ನಾಯಕರು ಇಲ್ಲಿನ ಯುಜಿಡಿ ಸ್ಥಿತಿಯನ್ನೊಮ್ಮೆ ನೋಡಿದರೆ, ನಗರವು ಹೇಗೆ ಅಭಿವೃದ್ಧಿಯಾಗಿದೆ ಅನ್ನೋದು ಕಾಣಲಿದೆ. 8 ವರ್ಷಗಳ ಹಿಂದೆ ಆರಂಭವಾಗಿದ್ದ ಒಳ ಚರಂಡಿ ಕಾಮಗಾರಿಗೆ ವೆಚ್ಚ ಮಾಡಿದ ಕೋಟಿ ಕೋಟಿ ಅನುದಾನ ಮಣ್ಣುಪಾಲಾಗಿದ್ದು ನಿಜಕ್ಕೂ ದುರಂತವೇ ಸರಿ.

Advertisement

ಹೌದು, ಕೊಪ್ಪಳವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತೇವೆ. ಸಿಲಿಕಾನ್‌ ಸಿಟಿ ಮಾಡಿ ಜನ ಸಾಮಾನ್ಯರಿಗೆ ಸಕಲ ಸೌಲಭ್ಯವನ್ನೂ ಕೊಡುತ್ತೇವೆ ಎನ್ನುವ ಜನಪ್ರತಿನಿಧಿಗಳು ತಮ್ಮ ಭರವಸೆಯ ಮಾತನ್ನೊಮ್ಮೆ ನೆನಪಿಸಿಕೊಳ್ಳಬೇಕಿದೆ.

ನಗರದ ಅಭಿವೃದ್ಧಿಗೆ 2010-11ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ಒಳ ಚರಂಡಿ (ಯುಜಿಡಿ) ಕಾಮಗಾರಿ ಆರಂಭ ಮಾಡಲಾಯಿತು. ಯೋಜನೆ ಒಳ್ಳೆಯದ್ದಾಗಿದೆ ಆದರೆ ಅಭಿವೃದ್ಧಿ ಮಾಡುವಲ್ಲಿ ಆರಂಭದಿಂದಲೂ ಎಡವಟ್ಟು ಮಾಡಲಾಗಿದೆ. ಈ ಯೋಜನೆ ಆರಂಭದಿಂದ ಜನರಿಗೆ ಖುಷಿಯ ಭಾವನೆ ಇತ್ತು. ಆದರೆ ನಂತರದ ದಿನಗಳಲ್ಲಿ ನಗರದ ಜನ ಹಿಡಿಶಾಪ ಹಾಕಿದ್ದನ್ನು ಮರೆಯುವಂತಿಲ್ಲ.

ಯೋಜನೆ ಪ್ರಕಾರ, ಒಂದೆಡೆಯಿಂದ ಕಾಮಗಾರಿ ನಿರ್ವಹಿಸುವುದನ್ನು ಬಿಟ್ಟು ನಗರಾದ್ಯಂತ ರಸ್ತೆ ಕಿತ್ತು ಹಾಕಲಾಯಿತು. ಅಲ್ಲಲ್ಲಿ ರಸ್ತೆಯ ಮಧ್ಯೆ ಗುಂಡಿ ಅಗೆಯಲಾಯಿತು. ಮಳೆಗಾಲದಲ್ಲೇ ಕೆಲಸ ಆರಂಭಿಸಿದ್ದರಿಂದ ಜನರು ನರಕಯಾತನೆ ಅನುಭಿವಿಸಿದರು. ಓಣಿ ಓಣಿಯಲ್ಲೂ ತಗ್ಗು ತೊಡಿದ್ದರಿಂದ ಸಂಚಾರಕ್ಕೆ ಜಾಗವೇ ಇಲ್ಲದಂತಾಯಿತು. ಕೊನೆಗೆ ಜನಾಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಅದನ್ನು ಅರೆಬರೆ ಮಾಡಿ ಕೈಬಿಟ್ಟಿದ್ದಾರೆ. ಕೆಲವು ಕಡೆ ಕಲ್ಲು ಬಂಡೆ ಬಂದಿವೆ ಎಂದು ಅರ್ಧ ಕಾಮಗಾರಿ ನಡೆಸಲಾಗಿದೆ.

ನರಕ ಯಾತನೆ ಕಂಡ ಜನರು: ಒಳ ಚರಂಡಿ ಕಾಮಗಾರಿ ಜನರಿಗೆ ನಗರದಲ್ಲೇ ನರಕ ದರ್ಶನ ಮಾಡಿಸಿದೆ. ಜನರು ತಗ್ಗು-ಗುಂಡಿಗಳಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ಉದಾಹರಣೆ ಇವೆ. ಇನ್ನೂ ಧೂಳು ಮುಕ್ತಗೊಳಿಸಲು ಹೋರಾಟವನ್ನೇ ಮಾಡಲಾಗಿದೆ. ಈ ಹೋರಾಟಕ್ಕೆ ಸಂಬಂಧಿಸಿ 42 ಜನರ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ. ಯುಜಿಡಿ ಅಧ್ವಾನ ನೋಡಿದ ಜನರು ಕೊಪ್ಪಳಕ್ಕೆ ಬರುವುದನ್ನೇ ಬಿಟ್ಟಿದ್ದರು. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ನಿತ್ಯವೂ ನಗರಸಭೆ, ಜನ ನಾಯಕರಿಗೆ ಶಾಪ ಹಾಕುತ್ತಲೇ ಇದ್ದರು. ಇದರಲ್ಲೇ ಕುಡಿಯುವ ನೀರಿನ ಕಾಮಗಾರಿ ಶುರು ಮಾಡಿದ್ದರಿಂದ ಸಮಸ್ಯೆ ಇನ್ನೂ ಹೆಚ್ಚಾಯಿತು. ಇಷ್ಟೇಲ್ಲ ಸಮಸ್ಯೆ ಅನುಭವಿಸಿದ ಜನರಿಗೆ ಇನ್ನೂ ಒಳ ಚರಂಡಿಯ ಸೌಲಭ್ಯ ಸಿಕಿಲ್ಲ.

Advertisement

25 ಕೋಟಿ ರೂ. ಪಾವತಿ: ನಗರೋತ್ಥಾನದಡಿ ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಆದರೂ ಗುತ್ತಿಗೆದಾರರಿಗೆ 25 ಕೋಟಿ ರೂ. ಅನುದಾನ ಪಾವತಿ ಮಾಡಲಾಗಿದೆ. ಇಲ್ಲಿ ಒಳ ಚರಂಡಿ ಕಾಮಗಾರಿ ಅಭಿವೃದ್ಧಿ ಆಗಿಲ್ಲ. ಆದರೂ ಗುತ್ತಿಗೆದಾರರು ಮಾತ್ರ ಬರೊಬ್ಬರಿ ಅಭಿವೃದ್ಧಿಯಾಗಿದ್ದಾರೆ. ಸರ್ಕಾರದ ಹಣ ಮಣ್ಣುಪಾಲಾಗಿದೆ. ಗುತ್ತಿಗೆದಾರರು ಕಲ್ಲುಬಂಡೆ ಬಂದಿವೆ. ಕಾಮಗಾರಿ ನಿರ್ವಹಿಸಲು ಹೆಚ್ಚಿನ ಅನುದಾನ ಬೇಕಿದೆ ಎಂದು ಕೆಲವು ಕಡೆ ಅರ್ಧಕ್ಕೆ ಕೆಲಸ ನಿಲ್ಲಿಸಿದ್ದಾರೆ. ಈ ಕುರಿತು ಕೋರ್ಟ್‌ನಲ್ಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸದ್ಯಕ್ಕಂತೂ 2016ರಿಂದ ಕಾಮಗಾರಿ ಬಂದ್‌ ಆಗಿದೆ.

ಇದೇನಾ ದೂರದೃಷ್ಟಿ?: ಅಭಿವೃದ್ಧಿ ಮಾಡುವೆವು ಎನ್ನುವ ಜನ ನಾಯಕರ ಅಭಿವೃದ್ಧಿ ಇದೇನಾ? 
ನಗರದ ದೂರದೃಷ್ಟಿ ಯೋಜನೆ ರೂಪಿಸುವ ಮುನ್ನ ಸಾಧಕ-ಬಾಧಕಗಳ ಬಗ್ಗೆ ಇವರಿಗೆ ಅರಿವಾಗಲಿಲ್ಲವೇ? ಜನರ ಸಂಕಷ್ಟ ಇವರಿಗೆ ಕಾಣಲಿಲ್ಲವೇ? ಬಾಯಲ್ಲಿ ಅಭಿವೃದ್ಧಿ ಮಾಡುವೆವು ಎಂದರೆ ಸಾಲದು, ಅದಕ್ಕೆ ತಕ್ಕಂತೆ ಕೆಲಸವನ್ನೂ ಮಾಡಬೇಕಿದೆ. ಈ ವರೆಗೂ ಯಾರೊಬ್ಬರು ನಗರ ಸಂಚಾರ ಮಾಡಿಲ್ಲ. ಯುಜಿಡಿ ಕಾಮಗಾರಿ ಏಕೆ ಬಂದ್‌ ಆಗಿದೆ. ಇದಕ್ಕೆ ಮುಂದೇನು ಪರಿಹಾರ ಎನ್ನುವ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ.

ಯುಜಿಡಿ ಕಾಮಗಾರಿ ಪರಿಸ್ಥಿತಿಯಂತೂ ಹೇಳತೀರದು. ಕಾಮಗಾರಿ ನಡೆಸುವ ನೆಪದಲ್ಲಿ ಅಧಿಕಾರಿಗಳು-ಜನಪ್ರತಿನಿಧಿಗಳು ಒಂದಾಗಿ ಕೋಟಿ ಕೋಟಿ ಅನುದಾನ ತಿಂದು ಹಾಕಿದ್ದಾರೆ. ಅದೊಂದು ಮುಗಿದ ಅಧ್ಯಾಯ. ಸ್ವತಃ ನಗರಸಭೆ ಇಂಜನಿಯರ್‌ಗಳೇ ಈ ಯೋಜನೆ ಎಲ್ಲೂ ಯಶಸ್ವಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರದ ಹಣ ಅನ್ಯರ ಪಾಲಾಗಿದೆ.
ಮಹಾಂತೇಶ ಕೊತಬಾಳ, ಹೋರಾಟಗಾರ.

ಕೊಪ್ಪಳದಲ್ಲಿ ಯುಜಿಡಿ ಕಾಮಗಾರಿ ಆರಂಭಿಸಿದ್ದ ವೇಳೆ ಒಳ್ಳೆಯ ಯೋಜನೆ ಎಂದುಕೊಂಡಿದ್ದೆವು. ಆದರೆ ಕಾಮಗಾರಿ ಆರಂಭಿಸಿ 8 ವರ್ಷವಾದರೂ ಇನ್ನೂ ಪೂರ್ಣಗೊಳಿಸಿಲ್ಲ. ಸರ್ಕಾರದ ಹಣ ಪೋಲಾಗಿದೆ. ಕಾಮಗಾರಿ ನಡೆಸುವ ವೇಳೆ ಜನ ನೂರೆಂಟು ಸಮಸ್ಯೆ ಅನುಭಿಸಿದ್ದು, ಜನಪ್ರತಿನಿಧಿಗಳು ಇನ್ನಾದರೂ ಕಣ್ತೆರೆದು ನೋಡಿ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಲಿ.
 ಅಮರೇಶ ಎಂ., ನಗರದ ನಿವಾಸಿ.

. ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next