Advertisement

Inna: ವಿರೋಧದ ನಡುವೆಯೂ ಕೃಷಿ ಜಮೀನಿನಲ್ಲಿ ಟವರ್‌ ನಿರ್ಮಾಣ ಆರಂಭ

11:07 PM Jun 05, 2024 | Team Udayavani |

ಬೆಳ್ಮಣ್‌: ಉಡುಪಿಯ ನಂದಿಕೂರಿನಿಂದ ಕೇರಳದ ಕಾಸರ ಗೋಡಿಗೆ ವಿದ್ಯುತ್‌ ಸರಬರಾಜಿಗಾಗಿ ಇನ್ನಾದ ಕೃಷಿ ಜಮೀನಿನಲ್ಲಿ ಟವರ್‌ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆಯೂ ಬುಧವಾರ ಬಿಗಿ ಪೊಲೀಸ್‌ ಕಾವಲಿನೊಂದಿಗೆ ಕಾಮಗಾರಿ ಪ್ರಾರಂಭಗೊಂಡಿದೆ.

Advertisement

ಕಳೆದ ವಾರ ಉಕ್ಕುಡದ ಖಾಸಗಿ ಜಾಗದಲ್ಲಿ ಕೃಷಿ ಜಮೀನಿನ ಮಾಲಕರಿಗೆ ಯಾವುದೇ ನೀಡದೆ ನೋಟಿಸ್‌ ಜೆಸಿಬಿ ತಂದು ಟವರ್‌ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಬಳಿಕ ಕಾಮಗಾರಿ ಸ್ಥಗಿತವಾಗಿತ್ತು.

ಇದೇ ವೇಳೆ ವಿದ್ಯುತ್‌ ಟವರ್‌ನಿಂದಾಗಿ ನಮ್ಮ ಕೃಷಿಭೂಮಿಗೆ ತೊಂದರೆ ಯಾಗುತ್ತದೆ ಎಂದು ಆಕ್ಷೇಪಿಸಿದ ತನ್ನನ್ನು ಕಾಮಗಾರಿ ನಡೆಸುವ ಕಂಪೆನಿ ಯವರು ತಳ್ಳಿದ್ದಾರೆಂದು ವಯೋವೃದ್ಧ ರೋರ್ವರು ಆರೋಪಿಸಿದ್ದಾರೆ.

ಮುಂದಿನ ನಡೆ ಏನು?
ಟವರ್‌ನ ಸುತ್ತಮುತ್ತ ಬಹು ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣವನ್ನು ನಿಷೇಧಿಸಿರುವುದರಿಂದ ಟವರ್‌ ನಿರ್ಮಾಣವಾಗುವ ಜಮೀನು ಮಾಲಕರಿಗೆ ಮಾತ್ರವಲ್ಲದೆ ತಂತಿ ಹಾದು ಹೋಗುವ ಪ್ರದೇಶದಲ್ಲಿನ 250ಕ್ಕೂ ಅಧಿಕ ಕುಟುಂಬಗಳಿಗೆ ತೊಂದರೆಯಾಗಲಿದೆ. ಕೃಷಿ ಜಮೀನನ್ನು ತಪ್ಪಿಸಿ ಟವರ್‌ ನಿರ್ಮಿಸಿ ಎಂದು ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಸ್ಪಂದಿಸದೆ ಇರುವುದು ಅಮಾನವೀಯ. ಇದರ ವಿರುದ್ಧ ಜನರು ಕೋರ್ಟ್‌ ಮೆಟ್ಟಿಲೇರುವ ಚಿಂತನೆ ನಡೆಸಿದ್ದಾರೆಂದು ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಸರದ ಉಳಿವು, ಕೃಷಿಯ ಮಹತ್ವ ಅರಿತು ಅವುಗಳಿಗೆ ಹಾನಿಯಾಗದಂತೆ ಕಾಮ ಗಾರಿ ನಡೆಸಬೇಕು. ಹಾಗೆ ಮಾಡದೇ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ಹೊರಡಿಸುವವರ ವಿರುದ್ಧವೇ ಹೋರಾಟ ಅನಿವಾರ್ಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

8 ಕಡೆ ಟವರ್‌ ನಿರ್ಮಾಣ
ಇನ್ನಾ ಗ್ರಾಮದ 8 ಕಡೆಗಳಲ್ಲಿ ಟವರ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕೆಲವು ಸರಕಾರಿ ಜಾಗದಲ್ಲಿ ಇನ್ನೂ ಕೆಲವು ಖಾಸಗಿ ಜಾಗದಲ್ಲಿ ನಿರ್ಮಾಣವಾಗಲಿವೆ. ಖಾಸಗಿ ಜಾಗದ ಮಾಲಕರಿಗೆ ಅಷ್ಟು ಜಾಗಕ್ಕೆ ಪರಿಹಾರ ದೊರೆಯಲಿದೆ.

ಕಾರ್ಕಳ ತಹಶೀಲ್ದಾರ್‌ ನರಸಪ್ಪ, ಜಿ.ಪಂ. ನಿಕಟಪೂರ್ವ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಇನ್ನಾ ಗ್ರಾ.ಪಂ ಸದಸ್ಯ ದೀಪಕ್‌ ಕೋಟ್ಯಾನ್‌, ಪ್ರವೀಣ್‌ ಶೆಟ್ಟಿ, ಗ್ರಾಮಸ್ಥರಾದ ಅಮರನಾಥ್‌ ಶೆಟ್ಟಿ, ಗ್ರಾ.ಪಂ. ಸದಸ್ಯ ಚಂದ್ರಹಾಸ ಶೆಟ್ಟಿ ಸ್ಥಳದಲ್ಲಿದ್ದರು.

ಜಿಲ್ಲಾಧಿಕಾರಿಗಳ ಆದೇಶದಂತೆ ಕಾನೂನಾತ್ಮಕವಾಗಿ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿ ಬುಧವಾರ ಟವರ್‌ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ.
– ನರಸಪ್ಪ, ಕಾರ್ಕಳ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next