Advertisement

Mo4 Seed: ಕೃಷಿ ಇಲಾಖೆಯಲ್ಲಿ ಎಂಒ4 ಬಿತ್ತನೆ ಬೀಜ ಕೊರತೆ

09:38 AM Jun 07, 2024 | Team Udayavani |

ಕುಂದಾಪುರ: ಕೃಷಿ ಇಲಾಖೆಯಲ್ಲಿ ಎಂಒ4 ಭತ್ತದ ಬಿತ್ತನೆ ಬೀಜದ ಕೊರತೆ ಉಂಟಾಗಿದೆ. ಕರಾವಳಿಯಲ್ಲಿ ಅತ್ಯಧಿಕವಾಗಿ ಬೆಳೆಯುವ ಭತ್ತದ ತಳಿ ಇದಾಗಿದ್ದು ರೈತರಿಂದ ಬೇಡಿಕೆ ಇದೆ. ಆದರೆ ಇಲಾಖೆಗೆ ಸಕಾಲದಲ್ಲಿ ನಿಗಮದಿಂದ ಪೂರೈಕೆಯಾಗದೆ ವಿವಿಧೆಡೆಯಿಂದ ರೈತರಿಂದ ಖರೀದಿಸಿ ನೀಡಲು ಇಲಾಖೆ ಮುಂದಾಗಿದೆ.

Advertisement

ಎಂಒ4 ಭತ್ತ ದ.ಕ., ಉಡುಪಿ, ಉ.ಕ. ಜಿಲ್ಲೆಗಳಿಗೆ ಹೇಳಿ ಮಾಡಿಸಿದ ತಳಿ. ಆದರೆ ಬಿತ್ತನೆಗೆ ಬೇಕಾದ ಮಾದರಿಯಲ್ಲಿ ಬೆಳೆಯುವುದು ಶಿವಮೊಗ್ಗದಲ್ಲಿ ಮಾತ್ರ. ಇತರ ಜಿಲ್ಲೆಗಳಲ್ಲಿ ಎಂಒ4 ಬೆಳೆದರೂ ಯಂತ್ರ ಕಟಾವು ಮಾಡಿ ಮಿಲ್ಲಿಗೆ ಕಳುಹಿಸುವ ಕಾರಣ ಬಿತ್ತನೆಗೆ ಆಗುವುದಿಲ್ಲ.

ಎಂಒ4 ಬಿತ್ತನೆ ಬೀಜ ರಾಜ್ಯಾದ್ಯಂತ ಕೊರತೆಯಿದೆ. ಉಡುಪಿ ಜಿಲ್ಲೆಗೆ 1.5ಯಿಂದ 2 ಸಾವಿರ ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಆದರೆ ಇತರ ಜಿಲ್ಲೆಗಳಲ್ಲಿ ಪರ್ಯಾಯ ಬಿತ್ತನೆಗೆ ರೈತರು ಮನ ಮಾಡಿದ್ದು, ಉಡುಪಿಯಲ್ಲಿ ಎಂಒ4 ಬೇಕೆಂದು ಆಗ್ರಹ ಇದೆ. ಕುಂದಾಪುರ, ಬೈಂದೂರು ಭಾಗದಲ್ಲಿ ಉಪ್ಪು ನೀರು ಇರುವಲ್ಲಿ ಎಂಒ4 ಚೆನ್ನಾಗಿ ಬೆಳೆಯುತ್ತದೆ ಹಾಗೂ 20 ವರ್ಷಕ್ಕಿಂತ ಹಿಂದಿನ ತಳಿ ಇದು ಎನ್ನುವುದು ಅದಕ್ಕೆ ಕಾರಣ. ಈ ತಳಿಗೆ ಪರ್ಯಾಯವಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದವರು ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ ಮಾಡಿದ ಪ್ರಯೋಗ ಯಶಸ್ವಿಯಾಗಿದೆ. ಪ್ರವಾಹ ಬಾಧಿತ ಪ್ರದೇಶದಲ್ಲೂ ಬೆಳೆಯಬಹುದಾದ ಸಹ್ಯಾದ್ರಿ ಕೆಂಪುಮುಖೀ¤ ತಳಿಯನ್ನು ವಿತರಿಸಲಾಗುತ್ತಿದೆ. ಇದು ಎಂಒ4 ರೀತಿಯೇ ಇದ್ದು 15 ದಿನ ಬೇಗ ಕಟಾವಿಗೆ ಬರುತ್ತದೆ. ಇದರ ಜತೆಗೆ ಪ್ರಸ್ತುತ ಬ್ರಹ್ಮ ಎನ್ನುವ ಹೊಸ ತಳಿ ಪರಿಚಯಿಸಲಾಗುತ್ತಿದೆ.

ಬೆಳೆಯುವ ಗುರಿ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 38 ಸಾವಿರ ಹೆಕ್ಟೇರ್‌ಹಾಗೂ ದ.ಕ. ಜಿಲ್ಲೆಯಲ್ಲಿ 9,390 ಹೆಕ್ಟೇರ್‌ ಭತ್ತ ಬೆಳೆಯುವ ಗುರಿ ಇತ್ತು. ಕಳೆದ ವರ್ಷ ಗುರಿ ತಲುಪಲಿಲ್ಲ. ಈ ವರ್ಷವೂ ಗುರಿ ಅದೇ ಇದೆ. ಈ ವರ್ಷ ಎಂಒ4 ಭತ್ತಕ್ಕೆ ಪ್ರತೀ ಕೆ.ಜಿ.ಗೆ 55.50 ರೂ. ನಿಗದಿ ಮಾಡಲಾಗಿದೆ.

ಬೇಡಿಕೆ ಇದ್ದರೂ ನಿರ್ಲಕ್ಷ é!
ಉಡುಪಿ ಜಿಲ್ಲೆಯಲ್ಲಿ ಶೆ. 95ರಷ್ಟು ಎಂಒ4 ಭತ್ತವನ್ನು ಬೆಳೆಯಲಾಗುತ್ತದೆ. ಎಂಒ4 ಕೊರತೆ ಕೆಲವು ವರ್ಷಗಳಿಂದ ಆಗುತ್ತಿದ್ದರೂ ರೈತರಿಂದ ಪದೇಪದೆ ಬೇಡಿಕೆ ಇದ್ದರೂ ಕೃಷಿ ಇಲಾಖೆ ಹಾಗೂ ಬೀಜ ನಿಗಮ ದಿವ್ಯ ನಿರ್ಲಕ್ಷ್ಯ ತೋರಿದೆ.

Advertisement

2018ರಲ್ಲಿ ಉಡುಪಿ ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್‌ಭತ್ತದ ಕೃಷಿ ಮಾಡುವ ಗುರಿ ಹೊಂದಿದ್ದು, 2,500 ಕ್ವಿಂಟಾಲ್‌ ಎಂಒ 4ಗೆ ಬೇಡಿಕೆ ಬಂದಿತ್ತು. ಆದರೆ 600 ಕ್ವಿಂಟಾಲ್‌ ಮಾತ್ರವೇ ಇತ್ತು. 2021ರಲ್ಲಿ 2725 ಕ್ವಿಂ.ಗೆ ಬೇಡಿಕೆ ಇದ್ದರೆ ಇಲಾಖೆ ಕೊಟ್ಟದ್ದು 1845 ಕ್ವಿಂ. ಮಾತ್ರ. ಕಳೆದ ವರ್ಷ 2,500 ಕ್ವಿಂ. ಬೇಡಿಕೆಯಲ್ಲಿ 1914 ಕ್ವಿಂ. ಸರಬರಾಜು ಆಗಿತ್ತು.

ಇಲಾಖೆಯಿಂದಲೇ ಸಂಗ್ರಹದ ಕೊರತೆ:
ಕರ್ನಾಟಕ ರಾಜ್ಯ ಬೀಜ ನಿಗಮ ಅಗತ್ಯವಿದ್ದಷ್ಟು ಬೀಜ ದಾಸ್ತಾನು ಮಾಡಿ ರೈತರಿಗೆ ವಿತರಿಸಲು ಕೃಷಿ ಇಲಾಖೆಗೆ ನೀಡಬೇಕು. ಆದರೆ ಕಳೆದ ಬಾರಿ ಮಳೆ ಕೊರತೆಯಿಂದ ಶಿವಮೊಗ್ಗ ಭಾಗದಲ್ಲಿ ಎಂಒ4 ಬೆಳೆ ಕಡಿಮೆಯಾಗಿದ್ದು ಸಂಗ್ರಹಕ್ಕೆ ತೊಡಕಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ಇದ್ದದ್ದು ನಿಗಮದ ವೈಫಲ್ಯ ಎನ್ನುವುದು ರೈತರ ಆರೋಪ. ಆದರೆ ಇಲಾಖೆ ನೀಡುತ್ತಿರುವ ತಳಿಗಳನ್ನು ಕೃಷಿ ವಿ.ವಿ.ಯೇ ಕರಾವಳಿಗೆ ಸೂಕ್ತ ಎಂದು ಪ್ರಮಾಣೀಕರಿಸಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಬೆಲೆಯೂ ಅಧಿಕ: ಒಂದು ಕೆಜಿಗೆ 55 ರೂ.
ಇಲಾಖೆ ನೀಡುವ ಬಿತ್ತನೆ ಬೀಜದ ದರ ಹೆಚ್ಚಾಗಿದೆ ಎಂಬ ದೂರೂ ರೈತರಿಂದ ಕೇಳಿ ಬರುತ್ತಿದೆ. ಸಬ್ಸಿಡಿ ಹೊರತಾಗಿ 55 ರೂ.ಗೆ ಇಲಾಖೆ ನೀಡುತ್ತಿದ್ದು ದರ ಹೆಚ್ಚಳ ಸರಿಯಲ್ಲ. ರೈತರು ಭತ್ತ ಮಾರಾಟ ಮಾಡುವಾಗ 27 ರೂ. ದೊರೆಯುತ್ತದೆ. ಬಿತ್ತನೆಗೆ ಖರೀದಿಸುವಾಗ 55 ರೂ. ನಿಗದಿ ಪಡಿಸಿರುವುದು ಹೆಚ್ಚಾಯಿತು. ಬೇಕಿ ದ್ದರೆ ಕಳೆದ ವರ್ಷಕ್ಕಿಂತ ಒಂದೆರಡು ರೂ. ಮಾತ್ರ ಹೆಚ್ಚಿಸಲಿ ಎಂದು ರೈತ ಹಾಲಾಡಿ ರಾಘವೇಂದ್ರ ಹೇಳುತ್ತಾರೆ. ಬಿತ್ತನೆ ಬೀಜದ ದರ ಕಡಿಮೆ ಮಾಡಲು ಜನಪ್ರತಿನಿಧಿಗಳೂ ಒತ್ತಡ ಹಾಕಬೇಕಿದೆ. ಯಂತ್ರ ನಾಟಿಯಲ್ಲಿ 1 ಎಕರೆಗೆ 15ರಿಂದ 20 ಕೆ.ಜಿ.ವರೆಗೆ ಭತ್ತ ಬೇಕಾಗುತ್ತದೆ. 14ರಿಂದ 20 ಕ್ವಿಂ. ವರೆಗೆ ಬೆಳೆ ಬರುತ್ತದೆ.

ಕೊರತೆಯಾಗಬಾರದು ಎಂದು ಎಂಒ4 ತಳಿಯನ್ನು 300 ಕ್ವಿಂ. ತರಿಸಲಾಗಿದೆ. ಸ್ಥಳೀಯವಾಗಿ 500 ಕ್ವಿಂ. ಖರೀದಿಸಿ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಎಂಒ4ಗೆ ಹೆಚ್ಚಿನ ಬೇಡಿಕೆಯಿದೆ. ಇದಕ್ಕೆ ಪರ್ಯಾಯ ತಳಿಯನ್ನು ಬೆಳೆಸುವ ಜಾಗೃತಿ ಮೂಡಿಸಲಾಗುತ್ತಿದೆ.
– ಶಿವಪ್ರಸಾದ್‌, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ

ಮಳೆ ಕಡಿಮೆ, ಮತ್ತೂಂದು, ಮಗದೊಂದು ಎಂದು ನೆಪ ಹೇಳುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆ, ನಿಗಮ ಬಿತ್ತನೆ ಬೀಜ ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ವೈಶಾಖದಲ್ಲಿ ಬೆಳೆಯುವಂತಹ ಬೀಜಗಳನ್ನು ಈಗ ಬೆಳೆಯಿರಿ ಎಂದು ರೈತರಿಗೆ ಒತ್ತಾಯ ಮಾಡುವುದು ಸರಿಯಲ್ಲ. ಎಂಒ4 ಅಗತ್ಯವಿದ್ದವರಿಗೆ ಒದಗಿಸಲಿ. ಈ ಬಗ್ಗೆ ನಮ್ಮ ರೈತ ಸಂಘವೂ ಎಚ್ಚರಿಸುವ ಕೆಲಸ ಮಾಡಲಿದೆ.
– ಶರತ್‌ ಶೆಟ್ಟಿ ಬಾಳಿಕೆರೆ, ದೇವಲ್ಕುಂದ, ಮಾಜಿ ಅಧ್ಯಕ್ಷ, ಎಪಿಎಂಸಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next