ಪುಣೆ: ಮಹಾರಾಷ್ಟ್ರದ ಹಿರಿಯ ಸಚಿವ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಮಸಿ ಎರಚಿದ ಘಟನೆಗೆ ಸಂಬಂಧಿಸಿದಂತೆ ಪುಣೆ ಜಿಲ್ಲೆಯ ಪಿಂಪ್ರಿ ಚಿಚ್ವಾಡ್ ಪೊಲೀಸ್ ಇಲಾಖೆ ಮೂವರು ಅಧಿಕಾರಿಗಳು ಮತ್ತು ಇತರ ಏಳು ಸಿಬಂದಿಗಳನ್ನು ಅಮಾನತುಗೊಳಿಸಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಕುರಿತು ಸಚಿವ ಪಾಟೀಲ್ ಅವರ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಶನಿವಾರ ಪಿಂಪ್ರಿ ನಗರದಲ್ಲಿ ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ನಾವು ಏಳು ಪೊಲೀಸ್ಸಿಬಂದಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ಅವರ ಭೇಟಿಯ ವೇಳೆ ಅವರೆಲ್ಲರೂ ಸಚಿವರ ಭದ್ರತೆಯ ಭಾಗವಾಗಿದ್ದರು ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ ಹೇಳಿದ್ದಾರೆ.
ಪಾಟೀಲ್ ಶನಿವಾರ ಸಂಜೆ ಪಿಂಪ್ರಿಯಲ್ಲಿರುವ ಪದಾಧಿಕಾರಿಯೊಬ್ಬರ ಮನೆಯಿಂದ ಹೊರಬರುತ್ತಿದ್ದಾಗ ಮೂವರು ವ್ಯಕ್ತಿಗಳು ಅವರ ಮೇಲೆ ಶಾಯಿ ಎಸೆದಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಔರಂಗಾಬಾದ್ ಜಿಲ್ಲೆಯಲ್ಲಿ ಹೇಳಿಕೆ ನೀಡಿದ ಒಂದು ದಿನದ ನಂತರ ಹಿರಿಯ ಬಿಜೆಪಿ ನಾಯಕನ ಮೇಲೆ ಶಾಯಿ ದಾಳಿ ನಡೆದಿದೆ.
ಶುಕ್ರವಾರ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮರಾಠಿಯಲ್ಲಿ ಮಾತನಾಡಿದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಪಾಟೀಲ್, ಅಂಬೇಡ್ಕರ್ ಮತ್ತು ಫುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನವನ್ನು ಕೇಳಲಿಲ್ಲ, ಅವರು ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಹಣವನ್ನು ಸಂಗ್ರಹಿಸಲು ಜನರಲ್ಲಿ “ಭಿಕ್ಷೆ” ಕೇಳಿದರು ಎಂದಿದ್ದು ವಿವಾದವನ್ನು ಹುಟ್ಟುಹಾಕಿತ್ತು.
ದಾಳಿಯ ನಂತರ ಪಾಟೀಲ್, ಭದ್ರತಾ ಲೋಪಕ್ಕಾಗಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳದಂತೆ ರಾಜ್ಯ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರನ್ನು ವಿನಂತಿಸಿದರು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಅವರು ಹೇಳಿದ್ದಾರೆ.