Advertisement

ಐಟಿಸಿ ಕಂಪನಿಯಿಂದ ತಂಬಾಕು ಬೆಳೆಗಾರರಿಗೆ ಅನ್ಯಾಯ

08:55 PM Oct 18, 2019 | Lakshmi GovindaRaju |

ಹುಣಸೂರು: ತಂಬಾಕು ಖರೀದಿಯಿಂದ ಐಟಿಸಿ ಕಂಪನಿ 1,300 ಕೋಟಿ ರೂ. ನಿವ್ವಳ ಲಾಭ ಗಳಿಸುತ್ತಿದ್ದು, ಖರೀದಿಯಲ್ಲಿ ದೊಡ್ಡಣ್ಣನಂತೆ ವರ್ತಿಸುತ್ತಾ, ಬೆಳೆಗಾರರನ್ನು ಶೋಷಿಸುತ್ತಿದೆ. ತಕ್ಷಣವೇ ವಾಣಿಜ್ಯ ಮಂತ್ರಾಲಯ ಹಾಗೂ ತಂಬಾಕು ಮಂಡಳಿ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯಯುತ ದರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶರಾಜೇ ಅರಸ್‌ ಆಗ್ರಹಿಸಿದರು.

Advertisement

ನಗರದ ಪ್ರವಾಸಿಮಂದಿರದಲ್ಲಿ ರೈತಸಂಘ ಮತ್ತು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ತಂಬಾಕು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಿದ್ದರೂ ಬೆಳೆಗಾರರಿಗೆ ಲಾಭವಾಗುತ್ತಿಲ್ಲ.

ಹರಾಜು ಮಾರುಕಟ್ಟೆಯಲ್ಲಿ ಐಟಿಸಿ ಕಂಪನಿ ಅತಿಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದೆ. ತಂಬಾಕಿನ ದರ ಕುಸಿತವಾದಾಗ ತಂಬಾಕು ಮಂಡಳಿಯೇ ಮಧ್ಯಪ್ರವೇಶಿಸಿ ಕನಿಷ್ಠ 25 ಮಿಲಿಯನ್‌ ತಂಬಾಕು ಖರೀದಿಸಲು ಮುಂದೆ ಬರಬೇಕು. ಜನಪ್ರತಿನಿಧಿಗಳನ್ನು ನಂಬಿ ಕುಳಿತರೆ ಪ್ರಯೋಜನವಿಲ್ಲ, ರೈತ ಸಂಘಗಳು ಸಂಘಟಿತ ಹೋರಾಟ ನಡೆಸಿ ತಂಬಾಕು ಮಂಡಳಿ ಹಾಗೂ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದರು.

ಮುಖಂಡ ವಿಷಕಂಠಪ್ಪ ಮಾತನಾಡಿ, ಈ ವರ್ಷ ತಂಬಾಕಿಗೆ ಸರಾಸರಿ ಕೆ.ಜಿ.ಗೆ 143 ರೂ.ದೊರಕಿದ್ದು, ಯೋಗ್ಯ ಬೆಲೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಭೆಗೆ ಆಗಮಿಸಿದ್ದ ಕಟ್ಟೆಮಳಲವಾಡಿಯ ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಾದ ವೀರಭದ್ರನಾಯ್ಕ, ದಿನೇಶ್‌ ಹಾಗೂ ಪುರುಷೋತ್ತಮರಾಜೇ ಅರಸ್‌ ಅವರಿಗೆ ಬೆಳೆಗಾರರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಯಿತು. ರೈತ ಸಂಘದ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ತಂಬಾಕು ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ನಿಲುವಾಗಿಲು ಪ್ರಭಾಕರ್‌, ಮುಖಂಡರಾದ ಅಗ್ರಹಾರ ರಾಮೇಗೌಡ, ಜಯಣ್ಣ, ಮಹದೇವ್‌, ರಮೇಶ್‌, ಕಾಳೇಗೌಡ ಇತರರಿದ್ದರು.

Advertisement

ಮಂಡಳಿಯೇ ತಂಬಾಕು ಹುಡಿ ಖರೀದಿಸಲಿ: ಹಳ್ಳಿಗಳಲ್ಲಿ ತಂಬಾಕು ಹುಡಿಯನ್ನು ಖಾಸಗಿ ವ್ಯಕ್ತಿಗಳು ಖರೀದಿಸುತ್ತಿದ್ದು, ಇದರಿಂದ ರೈತರಿಗೆ ನ್ಯಾಯಯುತ ದರ ಸಿಗುತ್ತಿಲ್ಲ. ಬದಲಿಗೆ ಮಂಡಳಿಯೇ ತಿಂಗಳಿಗೊಂದು ದಿನ ಹುಡಿ ಖರೀದಿ ದಿನವನ್ನಾಗಿ ಆಯೋಜಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಆಗ್ರಹಿಸಿದರು.

ತಂಬಾಕು ಪ್ಲಾಟ್‌ಫಾರಂಗಳಲ್ಲಿ ಕೆಲ ಸಮಯ ಉಂಟಾಗುವ ಬಿಗುವಿನ ವಾತಾವರಣ ತಿಳಿಗೊಳಿಸಲು ಹಾಗೂ ರೈತರಿಗೆ ನೈತಿಕ ಧೈರ್ಯ ತುಂಬಲು ಪೊಲೀಸ್‌ ವ್ಯವಸ್ಥೆ ಕಲ್ಪಿಸಬೇಕು. ತಂಬಾಕು ಬೆಲೆ ನಿಯಂತ್ರಣಕ್ಕಾಗಿ ಸಿಂಗಲ್‌ ಬಾರನ್‌ಗೆ 1900 ಕೆ.ಜಿ. ತಂಬಾಕು ಮಾರಾಟಕ್ಕೆ ಅವಕಾಶ ನೀಡಬೇಕು. ಯಾವ ಪ್ಲಾಟ್‌ಫಾರಂನ ರೈತರಿಗಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಕಾಳಸಂತೆಯಲ್ಲಿ ಇ-ಸಿಗರೇಟ್‌ ಮಾರಾಟ ಎಗ್ಗಿಲ್ಲದೇ ಸಾಗಿದ್ದು, ಕೂಡಲೇ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next