ಮಂಗಳೂರು: “ನುಡಿದಂತೆ ನಡೆದಿದ್ದೇವೆ’ ಎಂದು ಹೇಳುವ ರಾಜ್ಯದ ಕಾಂಗ್ರೆಸ್ ಸರಕಾರ ಕರಾವಳಿಯ ಮೀನುಗಾರರಿಗೆ ಅನ್ಯಾಯವೆಸಗುತ್ತಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ನೇತೃತ್ವದ ಸರಕಾರ 2023ರ ಫೆಬ್ರವರಿ ಬಜೆಟ್‌ನಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಿತ್ತು. ಕಾಂಗ್ರೆಸ್ ಸರಕಾರ ಜುಲೈಯಲ್ಲಿ ಘೋಷಿಸಿದ ಬಜೆಟ್‌ನಲ್ಲಿ ಆ ಎಲ್ಲ ಯೋಜನೆಗಳನ್ನು ಅವಗಣಿಸುವ ಮೂಲಕ ಮೀನುಗಾರರ ಬದುಕಿಗೆ ಹೊಡೆತ ನೀಡಿದೆ ಎಂದರು.
ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಚುನಾವಣೆ ಸಂದರ್ಭ ಉಚ್ಚಿಲದಲ್ಲಿ ನಡೆಸಿದ ಸಂವಾದದಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಲ್ಲ. ಪ್ರತೀ ಮೀನುಗಾರರಿಗೆ 10 ಲಕ್ಷ ರೂ. ವಿಮೆ, ಲೀಟರ್‌ಗೆ 25 ರೂ. ಸಬ್ಸಿಡಿಯಂತೆ ಪ್ರತೀ ದಿನ 500 ಲೀ. ಡೀಸೆಲ್, ಉಚಿತ ಸೀ ಆ್ಯಂಬುಲೆನ್ಸ್, ಅಧಿಕಾರಕ್ಕೆ ಬಂದ ಕೂಡಲೇ ಹೂಳು ಸಮಸ್ಯೆಗೆ ಪರಿಹಾರ ಸೇರಿ ಹಲವಾರು ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿತ್ತು. ಅದ್ಯಾವುದೂ ಕಾರ್ಯಗತಗೊಂಡಿಲ್ಲ. ಕಾಂಗ್ರೆಸ್ ತನ್ನ ಮೊದಲ ಬಜೆಟ್‌ನಲ್ಲಿ ಮೀನುಗಾರ ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಘೋಷಿಸಿದ್ದು ಅದನ್ನೂ ಜಾರಿಗೊಳಿಸಿಲ್ಲ ಎಂದರು.
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ದ.ಕ. ಜಿಲ್ಲೆಗೆ 3 ವರ್ಷಗಳ ಅವಧಿಯಲ್ಲಿ 16 ಕೋಟಿ 77 ಲಕ್ಷ ರೂ. ಸಬ್ಸಿಡಿ ದೊರೆತಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮೀನುಗಾರರ ಬಗ್ಗೆ ಇರುವ ಬದ್ಧತೆಗೆ ಸಾಕ್ಷಿ. ನಮ್ಮ ಬಜೆಟ್‌ನಲ್ಲಿ ನಾಡದೋಣಿ ಮೀನುಗಾರರಿಗೆ ಪೆಟ್ರೋಲ್/ ಡೀಸೆಲ್ ಚಾಲಿತ ಎಂಜಿನ್ ಖರೀದಿಗೆ 50 ಸಾವಿರ ರೂ. ಸಹಾಯಧನ ನೀಡುವ ಕಾರ್ಯಕ್ರಮಕ್ಕೆ 40 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್‌ನಲ್ಲಿ ಈ ಹಿಂದಿನ 40 ಕೋಟಿ ರೂ. ಅನ್ನು 20 ಕೋಟಿ ರೂ.ಗೆ. ಕಡಿತಗೊಳಿಸಿ ಉಳಿದ 20 ಕೋಟಿಯನ್ನು ಮಾತ್ರ ನೀಡಿದೆ ಎಂದರು.
ನಮ್ಮ ಬಜೆಟ್‌ನಲ್ಲಿ ಇಸ್ರೋ ನಿರ್ಮಿತ ಜಿಪಿಎಸ್ ಸಂವಹನ ವ್ಯವಸ್ಥೆಯನ್ನು ಎಲ್ಲ ಯಾಂತ್ರೀಕೃತ ದೋಣಿಗಳಲ್ಲಿ ಅಳವಡಿಸಲು 17 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನವನ್ನುಈ ಒದಗಿಸದೆ ಮೀನುಗಾರರ ಸುರಕ್ಷೆಯನ್ನೇ ಅವಗಣಿಸಿದೆ ಎಂದರು.
ಮೇಯರ್ ಸು ಧೀರ್ ಶೆಟ್ಟಿ ಕಣ್ಣೂರು, ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಪ್ರಮುಖರಾದ ಮೀರಾ ಕರ್ಕೇರ, ಗೌತಮ್, ಪದ್ಮನಾಭ, ವಿನೋದ್ ಮೆಂಡನ್ ಉಪಸ್ಥಿತರಿದ್ದರು.