ಹಾಸನ: ಪೊಲೀಸ್ ಬಡಾವಣೆ ನಿವೇಶನಗಳ ಹಂಚಿಕೆ ಹಾಗೂ ದರ ನಿಗದಿಯಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ನಗರದ ಹೊರ ವಲಯದ ಸತ್ಯಮಂಗಲದ ಹೌಸಿಂಗ್ ಬೋರ್ಡ್ ಬಡಾವಣೆ ಸಮೀಪ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿರ್ಮಿಸಿರುವ ವಸತಿ ಬಡಾವಣೆ ಯಲ್ಲಿ ಪೊಲೀಸ್ ಸಿಬ್ಬಂದಿ ಜತೆಗೆ ಬೇರೆಯವರೂ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಹಣ ಪಾವತಿ ಮಾಡಿದ್ದಾರೆ.
ಹಾಸನದಲ್ಲಿ ಈ ಹಿಂದೆ ಎಸ್ಪಿಯಾಗಿದ್ದ ಎ.ಎನ್.ಪ್ರಕಾಶ್ ಗೌಡ ಅಧ್ಯಕ್ಷ, ಉಪಾಧ್ಯಕ್ಷ ಎಚ್.ಪಿ.ಶ್ರೀಧರ್ ಅವರು ಉಪಾಧ್ಯಕ್ಷರಾಗಿರುವ ಸಂಘದ ವಸತಿ ಬಡಾವಣೆ ಯನ್ನು ಎಸ್‌ಆರ್ ಡೆವಲಪರ್ ಅಭಿವೃದ್ಧಿಪಡಿಸಿದ್ದು, ನಿವೇಶನಗಳ ಹಂಚಿಕೆ ಸಂಬಂಧ ಬುಧವಾರ ಸಂಜೆ ಬಡಾವಣೆ ಬಳಿ ಸಭೆ ಕರೆಯಲಾಗಿತ್ತು. ಈ ಹಿಂದೆಯೇ ಒಂದೇ ಬಾರಿಗೆ ಸಂಪೂರ್ಣ ಹಣ ಪಾವತಿಸುವವರಿಗೆ ಚದರ ಅಡಿಗೆ 700 ರೂ, ಕಂತುಗಳಲ್ಲಿ ಹಣ ಪಾವತಿಸಿರುವವರಿಗೆ 725 ರೂ. ಗಳಂತೆ ನಿಗದಿ ಮಾಡಲಾಗಿತ್ತು. ಆದರೆ ಬುಧವಾರ ಸಂಜೆ ನಡೆದ ಸಭೆಯಲ್ಲಿ ನಿವೇಶನಗಳಿಗೆ ಈ ಹಿಂದೆ ಪೂರ್ಣ ಮೊತ್ತ ಪಾವತಿ ಮಾಡಿದವರೂ ಹೆಚ್ಚುವರಿ ಚದರ ಅಡಿಗೆ 145 ರೂ. ಪಾವತಿ ಮಾಡಬೇಕು. ನಿವೇ ಶನ ಚದರ ಅಡಿಗೆ ಬದಲಾಗಿ ಚದರ ಮೀಟರ್‌ಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದಾಗ ಹಣ ಪಾವತಿ ಮಾಡಿದ್ದವರು ಸಂಘದ ಪದಾಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ನಮಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ್ ಗೌಡ ಮಾಹಿತಿ ನೀಡದೆ ಸಭೆಯಿಂದ ನಿರ್ಗಮಿಸಿದರು. ರಾತ್ರಿ 11 ಗಂಟೆವರೆಗೂ ಪ್ರತಿಭಟನೆ ನಡೆಸಿದ ನೂರಾರು ಜನ ಇದುವರೆಗೂ ನಿವೇಶನದ ಅಭಿವೃದ್ಧಿ ಮಾಡದಿದ್ದರೂ ಹೆಚ್ಚುವರಿ ಹಣ ನೀಡಬೇಕೆಂದು ಈಗ ಹೇಳಿ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಕಳೆದ 6 ವರ್ಷಗಳ ಹಿಂದೆಯೇ ನಾವು ಹಣ ಪಾವತಿ ಮಾಡಿ ದ್ದೇವೆ. ಮೊದಲು ಹಣ ಪಾವತಿಸಿದವರಿಗೆ ಸತ್ಯ ಮಂಗಲ ಹೌಸಿಂಗ್‌ಬೋರ್ಡ್ ಸಮೀಪ, ಕಂತುಗಳಲ್ಲಿ ವಿಳಂಬವಾಗಿ ಹಣ ಕಟ್ಟಿದವರಿಗೆ ದೂರದಲ್ಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡ ನಿವೇಶನದಾರರು, ಈ ಮೊದಲು ನಿಗದಿ ಮಾಡಿದಂತೆ ನಮಗೆ ನಿವೇಶನ ಕೊಡಬೇಕೆಂದು ಪಟ್ಟು ಹಿಡಿದ್ದಾರೆ. ಮತ್ತೂಂದು ಸಭೆ ನಡೆಸಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.