ಪುತ್ತೂರು: ಪದವಿ ತರಗತಿಯ ಪ್ರಥಮ ಸೆಮಿಸ್ಟರ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅನುತೀರ್ಣಗೊಂಡಿದ್ದ ಮೂವರು ವಿದ್ಯಾರ್ಥಿಗಳು ತೃತೀಯ ಸೆಮಿಸ್ಟರ್‌ನಲ್ಲಿ ಮರು ಪರೀಕ್ಷೆ ಬರೆದಿದ್ದು, ಆದರೆ ಅದರ ಫಲಿತಾಂಶ ಮೂರು ವರ್ಷಗಳ ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆ ಮುಗಿದ ಬಳಿಕ ಬಂದ ಕಾರಣ ಅವರಿಗೆ ಶೈಕ್ಷಣಿಕ ಭವಿಷ್ಯಕ್ಕೆ ದೊಡ್ಡ ಹಿನ್ನಡೆ ಆಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ. ನಾವು ಮುಂದಿನ ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಆರೋಪ ಏನು? ಉಪ್ಪಿನಂಗಡಿ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಜನಾರ್ದನ ಎಂ., ದೀಕ್ಷಿತಾ ಮತ್ತು ಸ್ವಾತಿ ಪಿ. ಅವರು ಎರಡು ವರ್ಷಗಳ ಹಿಂದಿನ ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ ಪರೀಕ್ಷೆಯಲ್ಲಿ ಅನುತೀರ್ಣಗೊಂಡಿದ್ದರು. ನಿಯಮ ಪ್ರಕಾರ ಅವರು ತೃತೀಯ ಸೆಮಿಸ್ಟರ್‌ನ ಪರೀಕ್ಷೆ ಜತೆಗೆ ಪ್ರಥಮ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣಗೊಂಡಿದ್ದ ವಿಷಯಕ್ಕೆ ಮರು ಪರೀಕ್ಷೆ ಬರೆದಿದ್ದರು. ಆದರೆ ನಾಲ್ಕನೇ ಸೆಮಿಸ್ಟರ್ ಫಲಿತಾಂಶದ ಜತೆಗೆ ಮರು ಪರೀಕ್ಷೆಯ ಫಲಿತಾಂಶ ಬಂದಿರಲಿಲ್ಲ. ಐದನೇ ಸೆಮಿಸ್ಟರ್‌ನ ವೇಳೆಯಲ್ಲೂ ಫಲಿತಾಂಶ ಸಿಗಲಿಲ್ಲ. ಪದವಿ ತರಗತಿಯ ಅಂತಿಮ ಹಂತದ ಆರನೇ ಸೆಮಿಸ್ಟರ್‌ನ ಪರೀಕ್ಷೆ ಬರೆದು ಎರಡು ವಾರ ಕಳೆದಿರುವ ಈ ಹೊತ್ತಿನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿ ಬರೆದ ಮರು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅದರಲ್ಲೂ ಅವರು ಅನುತ್ತೀರ್ಣರಾಗಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.
ಅವಕಾಶ ಕಳೆದುಕೊಂಡರು! ಮರು ಪರೀಕ್ಷೆಯ ಫಲಿತಾಂಶವೂ ಅನುತ್ತೀರ್ಣ ಎಂದು ಬಂದಿರುವುದರಿಂದ ಅವರ ಭವಿಷ್ಯದ ಓದಿಗೆ ತಡೆಯಾಗಿದೆ. ನಾಲ್ಕನೇ ಸೆಮಿಸ್ಟರ್ ಸಂದರ್ಭದಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದರೆ ಆಗ ಅನುತೀರ್ಣ ಎಂದಿದ್ದರೂ ಐದನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು. ಆದರೆ ಪಲಿತಾಂಶ ವಿಳಂಬದಿಂದ ಆ ಅವಕಾಶ ಕೈ ತಪ್ಪಿದೆ.