ಬೆಂಗಳೂರು: ಶೋಷಿತ ಸಮುದಾಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಯಾವೆಲ್ಲ ರೀತಿ ಮೋಸ ಮಾಡಿದೆ ಎಂಬ ಕುರಿತಂತೆ ಕಾಂಗ್ರೆಸ್ ಬುಧವಾರ ಚಾರ್ಜ್‌ಶೀಟ್ ಬಿಡುಗಡೆ ಮಾಡಿದೆ.
ಐಕ್ಯತಾ ಸಮಾವೇಶದ ಭಾಗವಾಗಿ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ.ಜಿ.ಪರಮೇಶ್ವರ, ಶೋಷಿತ ಸಮುದಾಯದ ಏಳ್ಗೆಗಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆ ಬಿಜೆಪಿ ಸರ್ಕಾರ ಹಳ್ಳಿ ಹಿಡಿಸಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಶೋಷಿತ ಸಮುದಾಯಗಳ ಅಭಿವೃದ್ದಿಗಾಗಿ ಸಮುದಾಯಗಳ ಜನಸಂಖ್ಯೆ ಆಧಾರದ ಮೇಲೆ ಯಾವುದೇ ಇಲಾಖೆಯ ಒಟ್ಟು ಬಜೆಟ್ ನಲ್ಲಿ ಶೇ.24.1 ಶೋಷಿತ ವರ್ಗಗಳ ಅಭಿವೃದ್ದಿಗೆ ಮೀಸಲಿಡಬೇಕೆಂಬ ಕ್ರಾಂತಿಕಾರಿ ಕಾರ್ಯಕ್ರಮ ರೂಪಿಸಿತ್ತು. ಆದರೆ ರಾಜ್ಯದ ಬಿಜೆಪಿ ಸರ್ಕಾರ ಆ ಕಾರ್ಯಕ್ರಮದ ಮೂಲ ಉದ್ದೇಶವನ್ನು ಹಳ್ಳಿ ಹಿಡಿಯುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೋಷಿತ ಸಮುದಾಯಕ್ಕಾಗಿ ಕಾಂಗ್ರೆಸ್ ಸರ್ಕಾರ ಗಂಗಾ ಕಲ್ಯಾಣ ಯೋಜನೆ ರೂಪಿಸಿತ್ತು. ಆದರೆ ಈಗಿನ ಸರ್ಕಾರ ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನೇ ಬದಲಾಯಿಸಿ ಒಟ್ಟು 430 ಕೋಟಿ ರೂ.ಅವ್ಯವಹಾರ ನಡೆಸಿದೆ. ಅಂಬೇಡ್ಕರ್ ಅಭಿವೃದ್ದಿ ನಿಗಮ ನೇರ ಸಾಲ ಯೋಜನೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ಕೋಟ್ಯಂತರ ರೂ.ಹಣ ಲೂಟಿ ಹೊಡೆದಿದ್ದಾರೆ. ಜತೆಗೆ ಬೋವಿ ಅಭಿವೃದ್ದಿ ನಿಗಮದಲ್ಲಿ 130 ಕೋಟಿ ರೂ. ಭ್ರಷ್ಟಾಚಾರ ನಡೆಸಲಾಗಿದೆ ಎಂದು ಟೀಕಿಸಿದ್ದಾರೆ.
ಎಸ್ಸಿ/ಎಸ್ಟಿ ಮೀಸಲಾತಿ ವಿಚಾರವಾಗಿ ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕುತಂತ್ರ ರೂಪಿಸಲಾಗಿದೆ. ಶೋಷಿತ ಸಮುದಾಯಕ್ಕೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಕಳೆದ ಮೂರು ವರ್ಷಗಳಿಂದ ಸರ್ಕಾರ ನೀಡಿಲ್ಲ. ಇತ್ತ ಕೇಂದ್ರ ಸರ್ಕಾರ ಕೂಡ ಶೋಷಿತ ಸಮುದಾಯಗಳ ಮೀಸಲಾತಿ ಮುಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.