ಕ್ರೈಸ್ಟ್ ಚರ್ಚ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಸೋತರೂ ಪುಟಿದೇಳುವ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರಮುಖ ವೇಗಿ ಇಶಾಂತ್ ಶರ್ಮಾ ಲಭ್ಯವಾಗುವುದು ಬಹುತೇಕ ಅನುಮಾನವಾಗಿದೆ.
ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಇಶಾಂತ್ ಶರ್ಮಾ ಬಲ ಪಾದದ ಗಾಯದಿಂದ ಬಳಲುತ್ತಿದ್ದಾರೆ. ಕಳೆದ ತಿಂಗಳು ವಿದರ್ಭ ವಿರುದ್ಧದ ರಣಜಿ ಪಂದ್ಯದಲ್ಲಿ ಇಶಾಂತ್ ಬಲ ಪಾದದ ಗಾಯಕ್ಕೆ ತುತ್ತಾಗಿದ್ದರು. ಈಗ ಅದೇ ನೋವು ಮರುಕಳಿಸಿದೆ ಎನ್ನಲಾಗಿದೆ.
ಗುರುವಾರ ನೆಟ್ಸ್ ನಲ್ಲಿ ಸುಮಾರು 20 ನಿಮಿಷಗಳ ಕಾಲ ಬೌಲಿಂಗ್ ನಡೆಸಿದ್ದ ಇಶಾಂತ್ ಮತ್ತೆ ಪಾದದ ನೋವಿಗೆ ತುತ್ತಾಗಿದ್ದರು. ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.
ಶನಿವಾರದಿಂದ ದ್ವಿತೀಯ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಇಶಾಂತ್ ಬದಲಿಗೆ ಉಮೇಶ್ ಯಾದವ್ ಆಡುವುದು ಬಹುತೇಕ ಖಚಿತವಾಗಿದೆ.
ವೆಲ್ಲಿಂಗ್ಟನ್ ಪಂದ್ಯದಲ್ಲಿ ಬಿಗು ದಾಳಿ ಸಂಘಟಿಸಿದ್ದ ಇಶಾಂತ್ ಶರ್ಮಾ ಐದು ವಿಕೆಟ್ ಕಬಳಿಸಿದ್ದರು. ಇಶಾಂತ್ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ.
ಕಾಲು ನೋವಿನ ಸಮಸ್ಯೆಗೆ ಒಳಗಾಗಿದ್ದ ಆರಂಭಿಕ ಆಟಗಾರ ಪೃಥ್ವಿ ಶಾ ಫಿಟ್ ಆಗಿದ್ದಾರೆಂದು ಕೋಚ್ ರವಿ ಶಾಸ್ತ್ರೀ ತಿಳಿಸಿದ್ಧಾರೆ. ಇದರೊಂದಿಗೆ ಮಯಾಂಕ್ ಜೊತೆ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.