ಗುಳೇದಗುಡ್ಡ (ಬಾಗಲಕೋಟೆ): ಇಂಜಿನವಾರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದೃಶ್ಯಮಯವಾಗಿ ಬೀಳುತ್ತಿರುವ ಕಲ್ಲಿನ ಕಾಟ ಶುಕ್ರವಾರವೂ ಮುಂದುವರಿದಿದ್ದು, ಮತ್ತೆ ನಾಲ್ಕು ಕಲ್ಲುಗಳು ವಿದ್ಯಾರ್ಥಿಗಳ ಮೇಲೆ ಬಿದ್ದಿವೆ. ಇದರಿಂದ ಕಂಗಾಲಾದ ಗ್ರಾಮಸ್ಥರು ಪವಾಡ ಬಯಲು ಮಾಡುವ ಹುಲಿಕಲ್ ನಟರಾಜ್‌ರನ್ನು ಕರೆಸಲು ಮುಂದಾಗಿದ್ದಾರೆ.
ಗ್ರಾಮದ ಶಾಲೆಯಲ್ಲಿ ಮಕ್ಕಳ ಮೇಲೆ ಪದೇಪದೆ ಕಲ್ಲುಗಳು ಬೀಳುತ್ತಿರುವ ಹಿನ್ನೆಲೆ ಯಲ್ಲಿ ಈ ಮರ್ಮವನ್ನು ಸೋಮವಾರ ಅಥವಾ ಮಂಗಳವಾರ ಪವಾಡ ಬಯಲು ಮಾಡುವ ಹುಲಿಕಲ್ ನಟರಾಜರನ್ನು ಕರೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಶುಕ್ರವಾರ ಶಿಕ್ಷಣ ಸಂಯೋಜಕಿ ಎಸ್.ಡಿ. ಆಲಗುಂಡಿ ಶಾಲೆಗೆ ಭೇಟಿ ನೀಡಿದಾಗ 16 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಅವರ ಸಮ್ಮುಖದಲ್ಲಿಯೇ ಒಂದು ಕಲ್ಲು ಬಿದ್ದಿದೆ. ಶನಿವಾರದವರೆಗೂ ರಜೆ ಘೋಷಿಸಿದ್ದರೂ ಕೆಲ ಮಕ್ಕಳು ಮನೆಯಲ್ಲಿ ಕೂರದೇ ಶಾಲೆಗೆ ಬಂದಿದ್ದರು.
ಗ್ರಾಮಸ್ಥರು ಗುಳೇದಗುಡ್ಡ, ಬೂದಿನಗಡ, ಕುಟಗನಕೇರಿ, ಹಳದೂರು ಹೀಗೆ ಎಲ್ಲೆಂದರಲ್ಲಿ ಹೋಗಿ ಕಲ್ಲಿನ ಕಾಡಾಟದ ಬಗ್ಗೆ ವಿಚಾರಿಸಿ, ವಿಧಿ-ವಿಧಾನಗಳನ್ನು ಅನುಸರಿಸಿದರೂ ಮಕ್ಕಳ ಮೇಲೆ ಕಲ್ಲು ಬೀಳುವುದು ತಪ್ಪಿಲ್ಲ. ದೈವಿ ಶಕ್ತಿಯ ಪದ್ಧತಿಗಳನ್ನು ಮಾಡಿದರೂ ಫಲ ನೀಡಿಲ್ಲ. ಕಲ್ಲು ಹೇಗೆ ಬೀಳುತ್ತವೆ ಎಂಬುದನ್ನು ಪರೀಕ್ಷಿಸಲು ಗ್ರಾಮದ ಹಿರಿಯರಾದ ಎಸ್‌ಡಿಎಂಸಿ ಸದಸ್ಯ ಭೀಮನಗೌಡ ಗೌಡರ, ಸೋಮನಗೌಡ ಗೌಡರ, ಚಂದಪ್ಪ ಹುಲ್ಲಪ್ಪ ಡುಳ್ಳಿ ಸ್ವತಃ ಶಾಲೆಯಲ್ಲಿ ಕಾಯ್ದು ಕುಳಿತಿದ್ದರು.
ಪೊಲೀಸ್ ಕಾವಲು: ಶಾಲೆಯಲ್ಲಿ ಕಲ್ಲು ಬೀಳುವುದನ್ನು ತಡೆಯಲು ಪೊಲೀಸ್ ಇಲಾಖೆ ಎಎಸ್‌ಐ ಹಾಗೂ ಸಿಬ್ಬಂದಿಯನ್ನು ನೇಮಿಸಿದೆ. ಅವರ ಸಮ್ಮುಖದಲ್ಲೇ ಕಲ್ಲುಗಳು ಬೀಳುತ್ತಿವೆ. ಶಾಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರೂ ಕಾರ್ಯಗತವಾಗಿಲ್ಲ.