ಆಲಮಟ್ಟಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ಹಿಪ್ಪರಗಿ ಬ್ಯಾರೇಜ್‌ನಿಂದ ಬುಧವಾರದಿಂದ ನೀರು ಬಿಟ್ಟಿದ್ದರಿಂದ ಜಿಲ್ಲೆಯಲ್ಲಿ ರೋಹಿಣಿ ಮಳೆ ಸಮರ್ಪಕವಾಗಿ ಆಗದಿದ್ದರೂ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೃಷ್ಣೆ ಉಗಮ ಸ್ಥಾನ ಮಹಾರಾಷ್ಟ್ರದಲ್ಲಿ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಆಲಮಟ್ಟಿಯ ಶಾಸ್ತ್ರಿ ಜಲಾಶಯಕ್ಕೆ ಕಳೆದೆರಡು ದಿನಗಳಿಂದ ಒಳಹರಿವು ಆರಂಭಗೊಂಡಿದೆ. ಕುಡಿಯುವ ನೀರಿಗಾಗಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಗೇಟುಗಳ ಹಾಗೂ ಆಲಮಟ್ಟಿ ವಿದ್ಯುದಾಗಾರದ ಮೂಲಕ ನೀರು ಬಿಡಲಾಗುತ್ತಿದೆ.
ಪ್ರತಿ ಬಾರಿ ಜೂನ್ ಕೊನೆ ಹಾಗೂ ಜುಲೈ ಮೊದಲ ವಾರದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವುದು ವಾಡಿಕೆ. ಆದರೆ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಪರಿಣಾಮ ನೀರಿನ ಒಳಹರಿವು ಜೂನ್ ಮೊದಲ ವಾರದಲ್ಲೇ ಆರಂಭಗೊಂಡಿದೆ. ಈಗಾಗಲೇ ಗುರುವಾರ 12,761 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಇದರ ಜೊತೆಗೆ ಹಿಪ್ಪರಗಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಒಳಹರಿವು ಮತ್ತಷ್ಟು ಹೆಚ್ಚಾಗಿದೆ.
519.60 ಮೀಟರ್ ಎತ್ತರದಲ್ಲಿ 123.081ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 509.55 ಮೀ. ನೀರು ಸಂಗ್ರಹವಿದೆ. ಸದ್ಯ 27.788 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ. ನಿತ್ಯ 14,050 ಮೀ. ನೀರು ಒಳಹರಿವಿನ ರೂಪದಲ್ಲಿ ಬರುತ್ತಿದ್ದು, 9,780 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ಬಿಡಲಾಗುತ್ತಿದೆ. ಜಲಾಶಯದ ಗೇಟ್ ಮೂಲಕ 6,750 ಕ್ಯೂಸೆಕ್ ಮತ್ತು ವಿದ್ಯುತ್ ಉತ್ಪಾದನಾ ಘಟಕದಿಂದ 2,500 ಕ್ಯೂಸೆಕ್ ನೀರು ನಾರಾಯಣಪುರ ಜಲಾಶಯಕ್ಕೆ ಹಾಗೂ 500 ಕ್ಯೂಸೆಕ್ ಭಾಷ್ಪೀಭವನ ಮತ್ತು 30 ಕ್ಯೂಸೆಕ್ ನೀರನ್ನು ಕುಡಿಯುವುದಕ್ಕಾಗಿ ಹೊರ ಹರಿಸಲಾಗುತ್ತಿದೆ.