ದಾವಣಗೆರೆ: ಮುಂದಿನ ಪರಿಸರ ಸ್ನೇಹಿ ತಂತ್ರಜ್ಞಾನ ಯಾವ ರೀತಿ ಇರಬಲ್ಲದು ಎಂಬುದರ ಪ್ರಾತ್ಯಕ್ಷಿಕೆಯನ್ನು ನೋಡುಗರ ಮುಂದಿಡಲು ಗುರುವಾರ ಬಿಐಇಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇನ್‌ಹೌಸ್ ತಾಂತ್ರಿಕ ಮಾದರಿಗಳ ಪ್ರದರ್ಶನ ಯಶಸ್ವಿಯಾಯಿತು.
ಪ್ರಕೃತಿಗೆ ಹಾನಿ ಉಂಟು ಮಾಡದ, ಪ್ರಕೃತಿಯಲ್ಲಿಯೇ ಸಿಗುವ ಶಕ್ತಿಗಳನ್ನು ಬಳಕೆಮಾಡಿಕೊಳ್ಳುವ ವಾಹನ, ವಸ್ತು ಉತ್ಪಾದನಾ ಘಟಕ ಸೇರಿದಂತೆ ಹಲವು ಮಾದರಿಗಳನ್ನು ಗಮನ ಸೆಳೆದವು. ವಿದ್ಯಾರ್ಥಿಯೋರ್ವ ಸಿದ್ಧಪಡಿಸಿದ್ದ ಸ್ವಯಂಚಾಲಿತ ವಾಹನ ಎಲ್ಲರ ಗಮನ ಸೆಳೆಯಿತು.
ಸೋಲಾರ್ ಬ್ಯಾಟರಿ, ಪವನ ವಿದ್ಯುತ್ ಶಕ್ತಿಯಿಂದ ಚಲಿಸುವ ಈ ವಾಹನ ಭವಿಷ್ಯದಲ್ಲಿ ನಾವು ಕಾಣಬಹುದಾದ ವಾಹನದ ಮಾದರಿಗಳನ್ನು ಮುಂದಿಟ್ಟಿತು. ಬೆಂಗಳೂರು ಜವಾಹರ್ ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಕೆ.ಆರ್. ಶ್ರೀನಿವಾಸ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಾಡುವಾಗ ಮುಂದಿನ ಜಗತ್ತಿನ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಆದಷ್ಟು ಪ್ರಕೃತಿದತ್ತವಾಗಿ ಯಥೇತ್ಛವಾಗಿ ಸಿಗುವ ಮುಗಿಯದ ಸಂಪನ್ಮೂಲಗಳನ್ನು ಬಳಕೆಮಾಡಿಕೊಂಡು ಹೊಸ ಅನ್ವೇಷಣೆಮಾಡುವತ್ತ ಗಮನ ಹರಿಸಬೇಕು ಎಂದರು.
ಕಾಲೇಜು ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ| ಸುಬ್ರಮಣ್ಯ ಸ್ವಾಮಿ, ಡಾ| ಇ. ರಂಗಸ್ವಾಮಿ, ಡಾ| ಕೆ. ಸದಾಶಿವ, ಡಾ| ಎಸ್. ಕುಮಾರಪ್ಪ ಇದ್ದರು.