ಹುಬ್ಬಳ್ಳಿ: ಸಾಮಾಜಿಕ ನ್ಯಾಯದಿಂದ ಹಿಂದುಳಿದವರ, ಪೌರ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಂತಕ್ಕೆ ಅವರನ್ನು ಆರ್ಥಿಕ ಸಬಲರನ್ನಾಗಿ
ಮಾಡುವ ಕಾರ್ಯ ಸಹಕಾರಿ ಸಂಘದಿಂದ ಆಗಲಿ ಎಂದು ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು. ಇಲ್ಲಿನ ಜೆ.ಸಿ. ನಗರದ ಅಕ್ಕನಬಳಗ ಸಭಾಂಗಣದಲ್ಲಿ ನಡೆದ ಪ್ರೊ| ಬಿ. ಕೃಷ್ಣಪ್ಪ ಕ್ರೆಡಿಟ್ ಕೋ-ಆಪ್ ಸೊಸೈಟಿ ಪೌರ ಕಾರ್ಮಿಕರ ನೂತನ ಸಹಕಾರಿ ಸಂಘಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೌರ ಕಾರ್ಮಿಕರನ್ನು ಆರ್ಥಿಕವಾಗಿ ಸಬಲಗೊಳಿಸಿ ಅವರ ಕುಟುಂಬ ನಿರ್ವಹಣೆ ಸುಧಾರಿಸುವ ನಿಟ್ಟಿನಲ್ಲಿ ಸಹಕಾರಿ ಸಂಘ ಶ್ರಮ ವಹಿಸಬೇಕು. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡುವಂತಾಗಬೇಕು. ಶ್ರೀ ಧರ್ಮಸ್ಥಳ ಸಹಕಾರಿ ಸಂಘಗಳ ಮಾದರಿಯಲ್ಲಿ ಉಳಿತಾಯ ಮಾಡಬೇಕು ಎಂದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಅಧ್ಯಕ್ಷ ಕೆ.ಬಿ. ಓಬಳೇಶ ಮಾತನಾಡಿ, ಗುಜರಾತಿನಲ್ಲಿ ಎಲ್ಲಾ ಸಮುದಾಯಗಳು ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ. ಸಹಕಾರಿ ಸಂಘಗಳಲ್ಲಿ ಮರುಪಾವತಿ ಪ್ರಮುಖವಾಗಿದ್ದು, ಪ್ರತಿಯೊಬ್ಬ ಪೌರ ಕಾರ್ಮಿಕರು ಪಡೆದ ಸಾಲವನ್ನು ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಹೇಳಿದರು.
ದಲಿತ ಹೋರಾಟಗಾರ ಪಿತಾಂಬ್ರಪ್ಪ ಬಿಳಾರ ಮಾತನಾಡಿ, ಉಳಿತಾಯದ ಮೂಲಕ ಪೈ ಎಂಬುವರು ಕೆನರಾ ಬ್ಯಾಂಕ್ ಸ್ಥಾಪಿಸಿದರು. ಇಂದು ಅದು ರಾಷ್ಟ್ರೀಕೃತ ಬ್ಯಾಂಕ್ ಆಗಿ ಪರಿವರ್ತನೆಯಾಗಿರುವುದು ದೊಡ್ಡ ಸಾಧನೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಹಕಾರಿ ಸಂಘವನ್ನು ಮುಂದುವರಿಸಬೇಕಾಗಿದೆ. ಪೌರ ಕಾರ್ಮಿಕರು ಹೆಚ್ಚು ಬಡ್ಡಿಗೆ ಸಾಲ ಪಡೆಯದೆ ತಮ್ಮದೇ ಸಹಕಾರಿ ಸಂಘದಲ್ಲಿ ಅವಶ್ಯತೆಗೆ ತಕ್ಕಂತೆ ಮಾತ್ರ ಸಾಲ ಪಡೆದು ಮರುಪಾವತಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ನ್ಯಾಶನಲ್ ಸ್ಕೂಲ್‌ನ ಡಾ| ಚಂದ್ರಶೇಖರ ಹಾಗೂ ಪೌರ ಕಾರ್ಮಿಕರ ಹೋರಾಟಗಾರ ವಿಜಯ ಗುಂಟ್ರಾಳ ಮಾತನಾಡಿದರು. ಸೋಮು ಮೊರಬದ, ಚಂದ್ರಶೇಖರ ಖಾನಾಪುರ, ಶರಣಪ್ಪ ಅಮರಾವತಿ, ಗಂಗಮ್ಮ ಸಿದ್ರಾಂಪುರ, ಕಸ್ತೂರೆವ್ವ ಬೆಂಗುಂದಿ, ಕನಕಪ್ಪ ಕೊಟಬಾಗಿ ಸೇರಿದಂತೆ ಇನ್ನಿತರರಿದ್ದರು.