“ನಮ್ಮ ಚಿತ್ರಕ್ಕೆ ನೀವೇ ಹೀರೋ …’
ಹಾಗಂತ ನಿರ್ದೇಶಕರು ಹೇಳಿದಾಗ, ಮುನಿಗೆ ನಂಬಲಿಕ್ಕಾಗಲಿಲ್ಲವಂತೆ. ಏಕೆಂದರೆ, ನಿರ್ದೇಶಕ ಸತ್ಯ ಸಾಮ್ರಾಟ್, ಮುನಿ ಅವರನ್ನು ಭೇಟಿ ಮಾಡಿದ್ದು ತಮ್ಮ ಚಿತ್ರಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುವಂತೆ ಕೇಳುವುದಕ್ಕೆ. ಆದರೆ, ಮುನಿನ ನೋಡಿ ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ಸೀದಾ ತಮ್ಮ ಚಿತ್ರದಲ್ಲಿ ಹೀರೋ ಆಗಿ ನಟಿಸುವ ಆಫರ್ ಕೊಟ್ಟಿದ್ದಾರೆ. ನಿರ್ದೇಶಕರ ಆಫರ್ ಒಪ್ಪಿಕೊಂಡಿರುವ ಮುನಿ, ಈಗ “ಚತುರ’ ಎಂಬ ಹೊಸ ಚಿತ್ರಕ್ಕೆ ಹೀರೋ ಆಗಿಯೇ ಬಿಟ್ಟಿದ್ದಾರೆ.
“ಚತುರ’ ಚಿತ್ರದ ಮುಹೂರ್ತ ಇತ್ತೀಚೆಗೆ ಹನುಮಂತನಗರದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮುಹೂರ್ತಕ್ಕೆ ಶೋಭರಾಜ್, ರಮೇಶ್ ಪಂಡಿತ್, ಮೈಕೋ ಶಿವು, ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್ ಮುಂತಾದ ಖಳ ಪಾತ್ರಗಳಿಗೆ ಜನಪ್ರಿಯರಾಗಿರುವ ನಟರೆಲ್ಲಾ ಬಂದಿದ್ದರು. ಅವರೆಲ್ಲಾ ತಮ್ಮ ಮಿತ್ರ ಮುನಿಗೆ ಶುಭ ಕೋರುವುದಕ್ಕೆ ಬಂದಿದ್ದರು. ಅಷ್ಟೇ ಅಲ್ಲ, ಅವರೆಲ್ಲಾ ಚಿತ್ರದಲ್ಲೊಂದೊಂದು ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಸತ್ಯ ಸಾಮ್ರಾಟ್, ಈ ಚಿತ್ರದ ಕಥಾವಸ್ತುವೇನೆಂದು ವಿವರಿಸತೊಡಗಿದರು. “ಹಳ್ಳಿಯಿಂದ ಸಿಟಿಗೆ ಬರುವ ಶೇ.70ರಷ್ಟು ಹೆಣ್ಮಕ್ಕಳು ನಿಗೂಢವಾಗಿ ನಾಪತ್ತೆಯಾಗುತ್ತಾರೆ. ಅವರೆಲ್ಲಾ ಎಲ್ಲಿ ಹೋಗುತ್ತಾರೆ, ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಹಾಗೆ ಮಿಸ್ ಆದವರನ್ನು ನಾಯಕ, ಸದ್ದಿಲ್ಲದೆ ಕಾಪಾಡುತ್ತಾನೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಸಿಟಿಯಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೀವಿ’ ಎಂದು ಸಾಮ್ರಾಟ್.
ಹಲವು ವರ್ಷಗಳ ಹಿಂದೆ ಮುನಿ ಒಂದು ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಈಗ ಮುನಿ ಪುನಃ ಹೀರೋ ಆಗುತ್ತಿದ್ದಾರೆ. “ಇಲ್ಲಿ ನಾಯಕ ಚಕ್ರವ್ಯೂಹದಲ್ಲಿ ಸಿಕ್ಕಿ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಾನೆ ಮತ್ತು ಹೇಗೆ ಅದರಿಂದ ಹೊರಬರುತ್ತಾನೆ ಎಂಬುದು ಕಷ್ಟ. ನನಗೆ ನಾಯಕಿಯಾಗಿ ಪೂಜಾ ಲೋಕೇಶ್ ನಟಿಸುತ್ತಿದ್ದಾರೆ. ಅವರೊಂದಿಗೆ ಸ್ಪರ್ಧಿಸುವುದು ಬಹಳ ಕಷ್ಟ. ಚಿತ್ರರಂಗಕ್ಕೆ ಬಂದು ಹಲವು ವರ್ಷಗಳಾಯ್ತು. ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಈ ಚಿತ್ರದಿಂದಾದರೂ ಆರಕ್ಕೇರುವಂತಾಗಲೀ’ ಎಂದರು.
ತಮ್ಮ ಎರಡನೆಯ ಇನ್ನಿಂಗ್ಸ್ ಬಹಳ ಜೋರಾಗಿಯೇ ಪ್ರಾರಂಭವಾಗಿದೆ ಎಂದರು ಪೂಜಾ ಲೋಕೇಶ್. “ನಾನು ಮತ್ತು ಮುನಿ ಹಳೆಯ ಸ್ನೇಹಿತರು. ಹಲವು ನಾಟಕಗಳಲ್ಲಿ ಒಟ್ಟಿಗೆ ನಟಿಸಿದವರು. ಒಮ್ಮೆ ಕಥೆ ಕೇಳು ಎಂದು ಕಥೆ ಹೇಳಿಸಿದ. ಕಥೆ ಕೇಳಿ ಖುಷಿಯಾಯಿತು. ವಿಭಿನ್ನ ಅನ್ನೋಕಿಂತ ಚಾಲೆಂಜಿಂಗ್ ಆಗಿದೆ. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೀನಿ. ಸಾಕಷ್ಟು ಹೋಂವರ್ಕ್ ಮಾಡಬೇಕಿದೆ’ ಎಂದರು.
“ಚತುರ’ ಚಿತ್ರವನ್ನು ಮಂಜು ಎಸ್ ಪಟೇಲ್ ಮತ್ತು ಸುಮತಿ ಶ್ರೀನಿವಾಸ್ ಎನ್ನುವವರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಸಂಗೀತ ಸಂಯೋಜಿಸಿದರೆ, ವಿನೋದ್ ಭಾರತಿ ಛಾಯಾಗ್ರಹಣ ಮಾಡುತ್ತಿದ್ದಾರೆ.