Advertisement

75 ಸರ್ಕಾರಿ ಶಾಲೆ ಕಾಯಕಲ್ಪಕ್ಕೆ ಯುವಕ ಸಂಘ ಸಜ್ಜು

03:12 PM Aug 13, 2021 | Team Udayavani |

ಬೆಂಗಳೂರು: ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ
ಸಂಘಟನೆಯೊಂದು ರಾಜ್ಯದ 75 ಸರ್ಕಾರಿ ಶಾಲೆಗಳನ್ನು ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸುವ ಸಂಕಲ್ಪ ತೊಟ್ಟಿದೆ.

Advertisement

ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಕಲ್ಪಗಳಲ್ಲಿ ಒಂದಾದ ಯುವಕ ಸಂಘವು ರಾಜ್ಯದ 75 ಸ್ವಾತಂತ್ರ್ಯ ಹೋರಾಟಗಾರರ ಊರುಗಳಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಪೀಠೊಪಕರಣ, ಸುಣ್ಣ-ಬಣ್ಣ, ಸ್ವಚ್ಛತೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಲ್ಪಿಸುವ ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದು, ಆ. 15ರಂದೇ ಯೋಜನೆಯನ್ನು ಆರಂಭಿಸಿ, ಮುಂದಿನ ಒಂದು ವರ್ಷದಲ್ಲಿ ರಾಜ್ಯದ 75 ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಗುರಿ ಹೊಂದಿದೆ.

ರಾಜ್ಯಕಂಡ ಶ್ರೇಷ್ಠ ಸೇನಾನಿಗಳಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ ದೇವಿ, ಒನಕೆ ಒಬವ್ವ, ಟಿಪ್ಪು ಸುಲ್ತಾನ್‌ ಸಹಿತವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಕಾರ್ನಾಡು ಸದಾಶಿವರಾವ್‌, ಕೆ.ಜಿ.ಗೋಖಲೆ, ಎಚ್‌.ಎಸ್‌.ದೊರೆಸ್ವಾಮಿ, ನಿಟ್ಟೂರು ಶ್ರೀನಿವಾಸ ರಾವ್‌, ಗೋವಿಂದ್‌ರಾವ್‌ ಯಲಗಿ, ದತ್ತೋಪಂತ ಮಜಲಿ, ನಾರಾಯಣರಾವ್‌ ಜೋಶಿ, ವಾಸುದೇವ್‌ ರಾವ್‌ ಕೊಲ್ಲಳ್ಳಿ, ಚೌಡ ನಾಯಕ,
ದಿನಕರ ದೇಸಾಯಿ, ವೀರಣ್ಣ ಮಾಸ್ಟರ್‌, ಉಮಾಬಾಯಿ ಕುಂದಾಪುರ, ಕಮಲಾದೇವಿ ಚಟ್ಟೋಪಾಧ್ಯಾಯ,ಯಶೋಧರದಾಸಪ್ಪಸೇರಿದಂತೆ
119 ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇದರಲ್ಲಿ ಸುಮಾರು 58 ಸ್ವಾತಂತ್ರ್ಯ ಹೋರಾಟಗಾರರ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಉಳಿದವರ ವಿಳಾಸವನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಯುವಕ ಸಂಘದ ಕಾರ್ಯಾಲಯ ಕಾರ್ಯದರ್ಶಿ ಸಚಿವ್‌ ಅವರು ಉದಯವಾಣಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ:ಆಜಾದಿ ಕಾ ಅಮೃತ್ ಮಹೋತ್ಸವ: ಅಂಜುದೀವ್‌ನಲ್ಲಿ ನೌಕಾಪಡೆಯಿಂದ ಧ್ವಜಾರೋಹಣ

ದೇಶವು 75ನೇ ಸ್ವಾತಂತ್ರ್ಯೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಯುವಕ ಸಂಘದಿಂದ ರಾಜ್ಯದ 75
ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಊರಿನಲ್ಲಿರುವ ಅಥವಾ ಅವರ ಹೋಬಳಿ, ತಾಲೂಕುಗಳಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ಗುರುತಿಸಿ, ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಸೌಲಭ್ಯವನ್ನು ಒದಗಿಸುವ ಕಾರ್ಯ ಮಾಡಲಿದ್ದೇವೆ ಎಂದು ವಿವರಿಸಿದರು.

Advertisement

ಶಾಲೆಯಲ್ಲಿ ಏನೇನು ಬದಲಾವಣೆ?: ಮುಖ್ಯವಾಗಿ ನಾವು ಆಯ್ದುಕೊಳ್ಳು ಶಾಲೆಗಳಿಗೆ ಸ್ವಯಂಸೇವಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿಕೊಂಡು ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು ಆಕರ್ಷಕ ಚಿತ್ರ ಬಿಡುಸುತ್ತೇವೆ. ಆ ಶಾಲೆಗೆ ಬೇಕಿರುವ ಅಗತ್ಯ ಗ್ರಂಥಾಲಯದ ವ್ಯವಸ್ಥೆ, ಲ್ಯಾಬ್‌ ಪರಿಕರಗಳನ್ನು ಒದಗಿಸಲಿದ್ದೇವೆ. ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗೆ ಅನುಕೂಲವಾಗುವ ಕ್ರೀಡಾ ಸಲಕರಣಗಳನ್ನು ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸುತ್ತೇವೆ. ಶಾಲೆಯ ಶೌಚಾಲಯದ ಅಭಿವೃದ್ಧಿ, ಶುದ್ಧ ಕುಡಿವ ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಸ್ಥಳೀಯ ಅಥವಾ ಲಭ್ಯವಿರುವ ದಾನಿಗಳ ಮೂಲಕ ಮಾಡಿಸುತ್ತೇವೆ ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯ ಕಾಲದಿಂದಲೂ ಯುವಕ ಸಂಘ ಜಾಗೃತ
1927ರಲ್ಲಿ ಮಹಾತ್ವ ಗಾಂಧೀಜಿಯವರು ಬೆಂಗಳೂರಿನಲ್ಲಿ ಮಾಡಿದ ಭಾಷಣದಿಂದ ಪ್ರೇರಣೆಗೊಂಡ ಯುವಕರ ತಂಡ ಯುವಕ ಸಂಘ ಆರಂಭಿಸಿತ್ತು. 1960ರಿಂದ ಪ್ರೌಢಶಾಲೆ, ಪದವಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್‌ ನೀಡುತ್ತಾ ಬರುತ್ತಿದೆ. 1.25 ಲಕ್ಕೂ ಅಧಿಕ ವಿದ್ಯಾರ್ಥಿಗಳು ಇದರಿಂದ ಅನುಕೂಲ ಪಡೆದಿದ್ದಾರೆ. ಶಿಕ್ಷಣ ಮಾಹಿತಿ ಮತ್ತು ಕೌನ್ಸೆಲಿಂಗ್‌ ಕೇಂದ್ರ, ಸ್ಟಾರ್ಟ್‌ಅಪ್‌ ಮತ್ತು ಇನ್‌ ಕ್ಯೂಬೇಷನ್‌ ಸೆಂಟರ್‌, ಕ್ರೀಡೆ ಮತ್ತು ಯೋಗಾ ಕೇಂದ್ರ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. 2020ರಲ್ಲಿ ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ರಾಷ್ಟ್ರೀಯ ಯುವ ಸಲಹಾ ಮಂಡಳಿಯ ಸದಸ್ಯತ್ವವನ್ನು ಪಡೆದಿದೆ.

ಕರ್ನಾಟಕದ ಸ್ವಾತಂತ್ರ್ಯ ಯೋಧರು ಓದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಆ ಶಾಲೆಗಳಿಗೆ ಅಗತ್ಯ ಸೌಲಭ್ಯದ ಜತೆಗೆ ಅಲ್ಲಿನ ವಾತಾವರಣವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಲಿದೆ. ಈ ಅಭಿಯಾನ ವರ್ಷಪೂರ್ತಿ ನಡೆಯಲಿದೆ.
– ಪ್ರೊ.ಎಂ.ಕೆ.ಶ್ರೀಧರ್‌ ಅಧ್ಯಕ್ಷ ಯುವ ಸಂಘ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next