ಅಳ್ನಾವರ: ಹೊನ್ನಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಹಸಿರು ಸೊಬಗಿನ ಮಧ್ಯದಲ್ಲಿರುವ ಗೌಳಿಗರ ವಾಡಾಗಳಿಗೆ ಶಾಸಕ ಸಿ.ಎಂ. ನಿಂಬಣ್ಣವರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಮೂಲಸೌಲಭ್ಯ ಒದಗಿಸುವ ಭರವಸೆ ನೀಡಿದರು.
ನೂರಕ್ಕೂ ಅಧಿಕ ಗೌಳಿಗರ ವಾಸವಿರುವ ರೇಣುಕಾ ನಗರ ಗೌಳಿವಾಡಾ, ಲಿಂಗನಕೊಪ್ಪ ಹಾಗೂ ರೇಣುಕಾ ನಗರ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಕಳೆದ ಹಲವು ದಿನಗಳ ಹಿಂದೆ ಕ್ರೂರ ಪ್ರಾಣಿ ಚಿಕ್ಕ ಜಾನುವಾರುಗಳನ್ನು ಕೊಂದು ಹಾಕಿದೆ. ಕಾಡಿನಲ್ಲಿ ನಡೆದು ಮಕ್ಕಳು ಶಾಲೆಗೆ ಹೋಗಬೇಕು. ಲಿಂಗನಕೊಪ್ಪದಲ್ಲಿ ಸಾಕಷ್ಟು ಪುಟ್ಟ ಮಕ್ಕಳು ಇದ್ದು, ಅಂಗನವಾಡಿ ಕೇಂದ್ರ ತೆರೆಯಬೇಕು. ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡುವುದರಿಂದ ಗೌಳಿಗರ ಬದುಕು ಕತ್ತಲಲ್ಲಿ ಮುಳುಗಿದೆ. ಮಕ್ಕಳಿಗೆ ಓದಲು ತೊಂದರೆ ಆಗಿದೆ ಎಂಬ ಅಳಲನ್ನು ಗ್ರಾಮಸ್ಥರು ತೊಡಿಕೊಂಡರು.
ಶಾಸಕ ನಿಂಬಣ್ಣವರ ಮಾತನಾಡಿ, ಗೌಳಿಗರು ಹೈನುಗಾರಿಕೆ ನಂಬಿ ಬದುಕು ಕಟ್ಟಿಕೊಂಡಿದ್ದು, ಹಲವರು ಕೃಷಿ ಮಾಡುತ್ತಿದ್ದಾರೆ. ಅವರ ಬದುಕು ಉತ್ತಮವಾಗಿರಲು ಕಡ್ಡಾಯವಾಗಿ ಎಲ್ಲ ಮ್ಕಕಳಿಗೆ ಶಿಕ್ಷಣ ನೀಡಬೇಕು. ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ರಸ್ತೆ, ಬೀದಿ ದೀಪ, ನೀರು ಮುಂತಾದ ಅಗತ್ಯ ಸೌಲಭ್ಯ ನೀಡಲಾಗುವುದು. ಸರ್ಕಾರ ಈಚೆಗೆ ಬೆಳಕು ಎಂಬ ವಿಶೇಷ ಯೋಜನೆ ಜಾರಿ ಮಾಡಿದೆ. ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕೊಡಿಸುವ ಹಾಗೂ ಅಂಗನವಾಡಿ ಕೇಂದ್ರ ತೆರೆಯುವ ಪ್ರಯತ್ನ ಮಾಡುವೆ. ಸಮೀಪದ ಊರುಗಳಿಗೆ ವಿದ್ಯಾರ್ಥಿಗಳು ಹೋಗಲು ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಲಾಗುವುದು. ಸ್ಥಳೀಯ ಯುವಕರು ಕಲಿತವರು ಇದ್ದರೆ ಇಲ್ಲಿನ ಮಕ್ಕಳಿಗೆ ಅಕ್ಷರಜ್ಞಾನ ಧಾರೆ ಎರೆಯಲು ಮುಂದಾಗಬೇಕು. ಉಜ್ವಲ ಯೋಜನೆ ಗ್ಯಾಸ್ ವಿತರಣೆ, ಸರ್ಕಾರದ ಸಕಲ ಸವಲತ್ತುಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಧುರೀಣ ಶಿವಾಜಿ ಡೊಳ್ಳಿನ, ಭರತೇಶ ಪಾಟೀಲ, ನಾಗಣ್ಣ ಬುಡರಕಟ್ಟಿ, ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಪೋಡೆ, ಗಂಗಪ್ಪ ಬುಡರಕಟ್ಟಿ, ರಮೇಶ ಹೂಗಾರ, ಮುಕ್ತುಂ ಡೊನಸಾಲ್, ಭೀಮಪ್ಪ ಕ್ಷಾತ್ರತೇಜ, ಬಸಪ್ಪ ಚಿಕ್ಕಣ್ಣವರ, ಬಾಳು ಗಸ್ತೆ, ಅಪ್ಪು ದೊಂಡಿಬಾ ಗೌಳಿ, ರಾಯಪ್ಪ ಚಂಡಕಿ, ಪರಶುರಾಮ ಬಂಡಕಿ, ರಾಯಪ್ಪ ಸುರಗಟ್ಟಿ ಇನ್ನಿತರರಿದ್ದರು.
ಹೊನ್ನಾಪುರದಿಂದ ಸುಮಾರು ಏಳೆಂಟು ಕಿಮೀ ಅಂತರದಲ್ಲಿ ಅರಣ್ಯ ಪ್ರದೇಶದಲ್ಲಿ ಗೌಳಿ ಕುಟುಂಬದವರು ಕಳೆದ ಆರೇಳು ದಶಕಗಳಿಂದ ವಾಸವಿದ್ದು, ಸೌಲಭ್ಯಗಳು ಇಲ್ಲದೆ ಬದುಕು ದುಸ್ಥರವಾಗಿದೆ. ಈ ಹಿಂದೆ ಯಾವ ಶಾಸಕರು, ಅಧಿಕಾರಿಗಳು ಇಲ್ಲಿ ಭೇಟಿ ನೀಡಿದ ಉದಾಹರಣೆ ಇಲ್ಲ. ಇದೇ ಮೊದಲು ಬಾರಿಗೆ ಶಾಸಕ ನಿಂಬಣ್ಣವರ ಭೇಟಿ ನೀಡಿದ್ದು ನಮ್ಮ ಬದುಕಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. –
ನಾಗು ವಿಠ್ಠಲ ಗೌಳಿ, ಗೌಳಿಗರ ತಾಂಡಾದ ಮುಖ್ಯಸ್ಥ