Advertisement
ಇನ್ಫೋಸಿಸ್ ಎಂದರೆ ಕೇಳಬೇಕೆ? ಬೃಹದಾಕಾರದ ಇಂದ್ರಲೋಕದ ಸಭಾಂಗಣವೆಂಬಂತಿದ್ದ ಅಲ್ಲಿ ದೊಡ್ಡ ಔತಣ ನಡೆಯುತ್ತಿತ್ತು. ಕಂಪೆನಿ ಉದ್ಯೋಗಿ ಬೆಂಗಳೂರಿನ ಸುಂದರ ಮಡಕ್ಷಿರ ಅವರೂ ಒಂದು ತಟ್ಟೆಯಲ್ಲಿ ಅನ್ನ, ಸಾರು, ಹಪ್ಪಳ ಹಾಕಿಕೊಂಡು ಊಟ ಮಾಡುತ್ತಿದ್ದರು. “ನಾನಿಲ್ಲಿ ಕೂತ್ಕೊಬಹುದಾ?’ ಎಂಬ ಧ್ವನಿ ಸುಂದರರಿಗೆ ಕೇಳಿಸಿತು. ಹಿಂದಿರುಗಿ ನೋಡುತ್ತಾರೆ ಇನ್ಫೋಸಿಸ್ ಸಾಮ್ರಾಜ್ಯಾಧಿಪತಿ ಎನ್.ಆರ್.ನಾರಾಯಣಮೂರ್ತಿ. ಸುಂದರರ ಊಟದ ತಟ್ಟೆ ನೋಡಿ “ದ್ಯಾಟ್ ಈಸ್ ಆಲ್ ವಿ ನೀಡ್’ ಎಂದರು. “ಇನ್ನೇನು ಬೇಕು ಹೇಳಿ. ಕೊನೆಗೆ ಬೇಕಾದದ್ದು ಇಷ್ಟೇ ಅಲ್ವೆ? ನೀವಾದರೂ ಅನ್ನ, ತಿಳಿಸಾರಿನ ಜತೆ ಒಂದು ಹಪ್ಪಳವನ್ನಾದರೂ ಹಾಕಿಕೊಂಡಿದ್ದೀರಿ. ನನ್ನ ದೇಹಕ್ಕೆ ಅದೂ ನಾಟೂದಿಲ್ಲ’ ಎಂದರು ಮೂರ್ತಿ. ಇದು ಮೂರ್ತಿಯವರ ಅಂತರಂಗದ (ಇಡೀ ವಿಶ್ವಕ್ಕೂ ಅನ್ವಯ) ವಸ್ತುಸ್ಥಿತಿ.
Related Articles
ಹೊಟೇಲ್‌ನಲ್ಲಿ ಸಂಘಟಕರು ಸಭಾಂಗಣದ ಮುಂಭಾಗ ಅಜೀಂ ಪ್ರೇಮ್‌ಜೀಯವರನ್ನು ಬೆಂಝ್ನಂತಹ ಐಶಾರಾಮಿ ಕಾರಿನಲ್ಲಿ ಬರು ವುದನ್ನು ನಿರೀಕ್ಷಿಸುತ್ತ ಸ್ವಾಗತಕ್ಕೆ ಕಾದು ನಿಂತಿದ್ದರು. ಅಜೀಂ ಪ್ರೇಮ್‌ಜೀ ಮತ್ತು ಸುಂದರ ಅವರು ಮುಂಬಯಿಯ ಖಾಲಿ- ಪೀಲಿ ಟ್ಯಾಕ್ಸಿಯಲ್ಲಿ (ಬ್ಲ್ಯಾಕ್ ಆ್ಯಂಡ್ ಯೆಲ್ಲೊ) ತಾಜ್ ಹೊಟೇಲ್‌ನತ್ತ ಹೊರಟರು. ಈ ತೆರನಾಗಿ ಅಜೀಂ ಪ್ರೇಮ್‌ಜೀ ಆಗಮನವನ್ನು ನಿರೀಕ್ಷಿಸಿ ರಲಿಲ್ಲ. ಹೊಟೇಲ್ ಆವರಣದೊಳಗೆ ಈ ಕಾರನ್ನು ಬಿಡಲೇ ಇಲ್ಲ. ಅದಕ್ಕಾಗಿ ತಕರಾರು ಎತ್ತದೆ ನಡೆದುಕೊಂಡು ಸಭಾಂಗಣಕ್ಕೆ ಬಂದರು. ಪ್ರೇಮ್‌ಜೀಯನ್ನು ಸ್ವಾಗತಿಸಲು ನಿಂತವರಿಗೆ ಪಾದಚಾರಿಗಳನ್ನು ಕಂಡು ಇದಾವ ಜನರು ಎಂಬ ಕುತೂಹಲ. ಬೆಸ್ಟ್ ಟಾಪ್‌ಮೋಸ್ಟ್ ಬಿಸಿನೆಸ್‌ಮ್ಯಾನ್ ಗುರುತು ಸಿಕ್ಕಿದಾಗ ಆಶ್ಚರ್ಯವೋ ಆಶ್ಚರ್ಯ.
Advertisement
ಒಮ್ಮೆ ಬೆಂಗಳೂರಿನ ವಿಪ್ರೋ ಆವರಣದೊಳಗೆ ನಡೆದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಮಾತಿನ ಚಕಮಕಿ ತಾರಕ ಮಟ್ಟಕ್ಕೇರಿತ್ತು. ಕೋಪ ತಾಪಗಳೆಲ್ಲ ಇತ್ತು. ಮೂರು ಗಂಟೆ ಕಾಲ ಸಭೆಯಲ್ಲಿ ಪ್ರೇಮ್‌ಜೀ ಕುಳಿತು ಶಾಂತವಾಗಿ ಕೇಳಿಸಿಕೊಂಡರು. ಅನಂತರ “ವೈಯಕ್ತಿಕ ಟೀಕೆ ಬೇಡ. ಸಭ್ಯ ರೀತಿಯಲ್ಲಿ ಮಾತನಾಡಬಹುದಲ್ಲ’ ಎಂಬ ಕಿವಿಮಾತು ನುಡಿದರು. ಅಧಿಕಾರಿಗಳೇ ಅರ್ಧ ಗಂಟೆಯಲ್ಲಿ ಒಂದು ನಿರ್ಣಯಕ್ಕೆ ಬಂದರು. ಕೊನೆಯಲ್ಲಿ “ನಿಮಗೆ ಸರಿ ಅಂತ ಕಂಡರೆ ಹಾಗೆಯೇ ಮಾಡೋಣ’ ಎಂದು ಪ್ರೇಮ್‌ಜೀ ಅಂತಿಮ ತೀರ್ಪಿಗೆ ಸಹಿಮಾಡಿದಂತೆ ಉದ್ಗರಿಸಿದರು. ಪ್ರೇಮ್‌ಜೀ ಮಧ್ಯಪ್ರವೇಶ ಮಾಡಿದ್ದರೆ ಅವರು ಹೇಳಿದಂತೆ ನಿರ್ಣಯವನ್ನು ತಳೆಯ ಬಹುದಿತ್ತು. ತನ್ನೆದುರೇ ಹೀಗೆ ನಡೆಯುತ್ತಿದೆ ಎಂದು ಕೋಪ ಗೊಳ್ಳಬಹುದಿತ್ತು. ಇದಾವುದನ್ನೂ ಮಾಡಲಿಲ್ಲ.
ಸಭೆ ನಡೆಯುವ ಬೋರ್ಡ್ ರೂಮ್‌ನಲ್ಲಿ ಸಭೆ ನಡೆದ ಬಳಿಕ ಅಜೀಂ ಪ್ರೇಮ್‌ಜೀ ಸ್ವತಃ ಲೈಟ್‌ಗಳನ್ನು ಆರಿಸುತ್ತಿದ್ದರು.
”We had lot of money to spend. But no money to waste’ -ಇದು 2.5 ಲಕ್ಷ ಮಾನವ ಸಂಪನ್ಮೂಲವನ್ನು ಆಳುತ್ತಿದ್ದವನ ಉದ್ಗಾರ. ಎಲ್ಲದಕ್ಕೂ ಮೌಲ್ಯ ಇದೆ. ಖರ್ಚು ಮಾಡುವುದಾದರೆ ವಿಪ್ರೋಗೆ ಮಾಡೋಣ. ಆದರೆ ವೇಸ್ಟ್ ಮಾಡಬಾರದು ಎಂಬುದು ನಿಲುವು. ವಿಪ್ರೋ ಷೇರು ದರ ಬಹಳಷ್ಟು ಏರಿದ ದಿನ ಅಜೀಂ ಪ್ರೇಮ್‌ಜೀ ಭಾರತದ ಅತೀ ಸಿರಿವಂತ. ಸಹೋದ್ಯೋಗಿಗಳು ನಿಮಗೆ ಏನು ಅನಿಸುತ್ತಿದೆ ಎಂದು ಕೇಳಿದರಂತೆ. ‘Beyond a point it does not matter” (ಒಂದು ಹಂತದ ಅನಂತರ ಅದಕ್ಕೆ ಬೆಲೆ ಇಲ್ಲ) ಎಂದು ಉತ್ತರಿಸಿದ್ದರು. ಅಜೀಂ ಪ್ರೇಮ್‌ಜೀಯಾಗಲಿ, ಎನ್. ಆರ್. ನಾರಾಯಣಮೂರ್ತಿಯಾಗಲಿ ಅವರ ಪ್ರತಿಷ್ಠಾನಗಳ ಮೂಲಕ ಸಮಾಜ ಸೇವೆಯನ್ನು ಧಾರಾಳವಾಗಿ ಮಾಡುತ್ತಿದ್ದಾರೆ. ಇವರು ದುಡ್ಡಿದ್ದರೂ ಸಮಾಜಮುಖೀ ಸರಳಜೀವಿಗಳು.
-ಮಟಪಾಡಿ ಕುಮಾರಸ್ವಾಮಿ