ಬೆಂಗಳೂರು: ಪ್ರತಿಸ್ಪರ್ಧಿಯಾದ ಟೆಕ್ ಮಹೀಂದ್ರಾ ಕಂಪನಿ ಸೇರುವ ನಿಟ್ಟಿನಲ್ಲಿ ಮೋಹಿತ್ ಜೋಶಿ ಅವರು ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸ್ಟಾಕ್ ಎಕ್ಸ್ ಚೇಂಜ್ ಗೆ ಇನ್ಫೋಸಿಸ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಮದುವೆಗೂ ಮುನ್ನ ಮಕ್ಕಳು: ಇಬ್ಬರು ಪ್ರೇಯಸಿರನ್ನೂ ಒಂದೇ ಮಂಟಪದಲ್ಲಿ ಮದುವೆಯಾದ ಯುವಕ.!
2000ನೇ ಇಸವಿಯಿಂದ ಮೋಹಿತ್ ಜೋಶಿ ಅವರು ಇನ್ಫೋಸಿಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇನ್ಫೋಸಿಸ್ ಗೆ ರಾಜೀನಾಮೆ ನೀಡಿರುವ ಮೋಹಿತ್ ಜೋಶಿ ಅವರನ್ನು ಟೆಕ್ ಮಹೀಂದ್ರಾದ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಇನ್ಫೋಸಿಸ್ ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ ನೀಡಿರುವ ಪ್ರಕಟನೆಯಲ್ಲಿ, ಮೋಹಿತ್ ಜೋಶಿ ಅವರು ಮಾರ್ಚ್ 11ರಿಂದ ರಜೆಯಲ್ಲಿದ್ದು, 2023ರ ಜೂನ್ 9 ಕಂಪನಿಯಲ್ಲಿನ ಅವರ ಕೊನೆಯ ದಿನವಾಗಿದೆ ಎಂದು ತಿಳಿಸಿದೆ.
ಹೊಸ ಪೀಳಿಗೆಯ ಡಿಜಿಟಲ್ ಸೇವೆ ಮತ್ತು ಕನ್ಸಲ್ಟಿಂಗ್ ನಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಇಂದು ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದೆ. ಕಂಪನಿಗಾಗಿ ಮೋಹಿತ್ ಜೋಶಿ ಅವರು ಸಲ್ಲಿಸಿರುವ ಸೇವೆ ಮತ್ತು ಕೊಡುಗೆಯನ್ನು ನಿರ್ದೇಶಕ ಮಂಡಳಿ ಮೆಚ್ಚಿರುವುದಾಗಿ ತಿಳಿಸಿದ್ದು, ಅವರ ರಾಜೀನಾಮೆ ಮಾಹಿತಿ ದಾಖಲೆಗಾಗಿ ನೀಡುತ್ತಿರುವುದಾಗಿ ಇನ್ಫೋಸಿಸ್ ಪ್ರಕಟನೆಯಲ್ಲಿ ತಿಳಿಸಿದೆ.
ಮೋಹಿತ್ ಜೋಶಿ ಅವರು ಅಧ್ಯಕ್ಷರಾಗಿ ಇನ್ಫೋಸಿಸ್ ನಲ್ಲಿ ಫೈನಾಶ್ಶಿಯಲ್ ಸರ್ವೀಸ್ ಮತ್ತು ಹೆಲ್ತ್ ಕೇರ್/ಲೈಫ್ ಸೈನ್ಸ್ ಬ್ಯುಸಿನೆಸ್ ಅನ್ನು ನಿಭಾಯಿಸುತ್ತಿದ್ದರು. 2014ರಲ್ಲಿ ನಡೆದ ವರ್ಲ್ಡ್ ಎಕಾನಾಮಿಕ್ ಫೋರಂನ ಗ್ಲೋಬಲ್ ಯಂಗ್ ಲೀಡರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೋಶಿ ಅವರನ್ನು ಆಹ್ವಾನಿಸಿತ್ತು.