ಹೊಸದಿಲ್ಲಿ: “ನನ್ನ ಮೇಲೆ ಇ.ಡಿ. ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ದಾಳಿ ನಡೆಸುವ ಯೋಜನೆ ಬಗ್ಗೆ ಇ.ಡಿ. ಒಳಗಿರುವವರೇ ತನಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, “ನಾನು ಇತ್ತೀಚೆಗೆ ಲೋಕಸಭೆಯಲ್ಲಿ ಮಾಡಿರುವ “ಚಕ್ರವ್ಯೂಹ’ ಕುರಿತ ಭಾಷಣವನ್ನು “ಇಬ್ಬರಲ್ಲಿ ಒಬ್ಬರು’ ಇಷ್ಟಪಟ್ಟಿಲ್ಲ. ಹೀಗಾಗಿ ನನ್ನ ಮೇಲೆ ಇ.ಡಿ. ದಾಳಿಗೆ ಸಂಚು ರೂಪಿಸಲಾಗಿದೆ. ಚಹಾ ಮತ್ತು ಬಿಸ್ಕೆಟ್‌ಗಳಿಗಾಗಿ ತೆರೆದ ತೋಳಿನಿಂದ ಕಾಯು ತ್ತಿದ್ದೇನೆ ಇ.ಡಿ.’ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಕೂರ್ ನೋಟಿಸ್ ಸಲ್ಲಿಸಿ, ಕೇಂದ್ರೀಯ ತನಿಖಾ ಸಂಸ್ಥೆ ಗಳಾದ ಇ.ಡಿ., ಸಿಬಿಐ, ಐಟಿ ಇಲಾಖೆಗಳನ್ನು ಬಿಜೆಪಿ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ವಿರುದ್ಧ ಸಂಸತ್ತಿನಲ್ಲಿ ತುರ್ತು ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಭಾಷಣದಿಂದ ಬಿಜೆಪಿಯ “ಇಬ್ಬರು’ ಅಗ್ರ ನಾಯಕರಲ್ಲಿ “ಒಬ್ಬರಿಗೆ’ ಸಿಟ್ಟು ಬಂದಿದೆ ಎಂದು ಹೇಳಿರುವ ರಾಹುಲ್, ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರತ್ತ ಬೆರಳು ಮಾಡಿದ್ದಾರೆಂದು ವಿಶ್ಲೇಷಿಸಲಾಗಿದೆ.
ಕಾಲ್ಪನಿಕ ಆರೋಪ: ರಾಜೀವ್ ಚಂದ್ರಶೇಖರ್
ರಾಹುಲ್ ಆರೋಪದ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಹಲವು ವರ್ಷಗಳಿಂದ ಏನೂ ಮಾಡದಿರುವ ರಾಹುಲ್, ವಯನಾಡ್ ದುರಂತದಲ್ಲಿ ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಳ್ಳಲು ಇ.ಡಿ. ದಾಳಿಯ ಕಾಲ್ಪನಿಕ ಕಥೆಯನ್ನು ಸೃಷ್ಟಿಸಿದ್ದಾರೆ. ಇದು ರಾಹುಲ್ ಅವರ ಅಪಕ್ವ, ಅನುಚಿತ ಯತ್ನ ಎಂದಿದ್ದಾರೆ.