ಮುಂಬೈ: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರ 2021-22ರ ಆರ್ಥಿಕ ವರ್ಷದಲ್ಲಿ 15 ಲಕ್ಷ ಕೋಟಿ ರೂ. ಆದಾಯ (200 ಬಿಲಿಯನ್ ಡಾಲರ್) ಸಂಪಾದಿಸಿಕೊಂಡಿವೆ. ಇಷ್ಟು ಮಾತ್ರವಲ್ಲದೆ ಕಳೆದ ಹತ್ತು ವರ್ಷದಲ್ಲಿ 50 ಲಕ್ಷ ಮಂದಿಗೆ ಉದ್ಯೋಗವನ್ನೂ ನೀಡಿವೆ ಎಂದು ರಾಷ್ಟ್ರೀಯ ಸಾಫ್ಟ್ವೇರ್ ಸೇವಾ ಕಂಪನಿಗಳ ಒಕ್ಕೂಟದ (ನ್ಯಾಸ್‌ಕಾಂ) ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಎರಡು ವರ್ಷಗಳ ಅವಧಿಯಲ್ಲಿ ಸಾಫ್ಟ್ವೇರ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.
ಮಾಹಿತಿ ತಂತ್ರಜ್ಞಾನ ಸೇವೆಗಳು, ಬ್ಯುಸಿನೆಸ್ ಪ್ರಾಸೆಸ್ ಮ್ಯಾನೇಜ್‌ಮೆಂಟ್ ಕ್ಷೇತ್ರಗಳ ಮೂಲಕ 30 ಬಿಲಿಯನ್ ಡಾಲರ್ ಆದಾಯ ಸಂಗ್ರಹವಾಗಿದೆ. ಜತೆಗೆ 2011ರಿಂದ ಈಚೆಗೆ ಈ ಕ್ಷೇತ್ರ ಶೇ. 15.5 ಬೆಳವಣಿಗೆ ದಾಖಲಿಸಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಹೊರಗುತ್ತಿಗೆ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡ ಬಳಿಕ ಬ್ಯುಸಿನೆಸ್ ಪ್ರೋಸೆಸ್ ಮ್ಯಾನೇಜ್‌ಮೆಂಟ್ ಕ್ಷೇತ್ರಕ್ಕೆ ಹೆಚ್ಚಿನ ಜಿಗಿತ ಉಂಟಾಗಿದೆ.
ಇದನ್ನೂ ಓದಿ:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ
ವಾರ್ಷಿಕ ವರದಿಯ ಅನುಸಾರ ಪ್ರಸಕ್ತ ವರ್ಷದ ಆದಾಯ 15 ಲಕ್ಷ ಕೋಟಿ ರೂ. ಆಗಿದೆ. ಈ ಬಗ್ಗೆ ಶೇ. 30-32ರಷ್ಟು ಆದಾಯ ಡಿಜಿಟಲ್ ಕ್ಷೇತ್ರದಿಂದಲೇ ಸೇರ್ಪಡೆಯಾಗಿದೆ. ಡಿಜಿಟಲ್ ಕ್ಷೇತ್ರ ಶೇ. 11-14ರಷ್ಟು ಬೆಳವಣಿಗೆ ದಾಖಲಿಸುತ್ತಿದೆ.
ಇದರಿಂದಾಗಿ 2025-26ನೇ ಸಾಲಿನ ವಿತ್ತೀಯ ವರ್ಷದಲ್ಲಿ ಈ ಕ್ಷೇತ್ರವೊಂದರಿಂದಲೇ 26 ಲಕ್ಷ ಕೋಟಿ ರೂ. (350 ಬಿಲಿಯನ್ ಡಾಲರ್ ಮೊತ್ತ) ಆದಾಯ ಬರುವ ಸಾಧ್ಯತೆ ಇದೆ ಎಂದು ಅದು ಲೆಕ್ಕಹಾಕಿದೆ.
ನಾಸ್ಕಾಂ ನಡೆಸಿದ ಸಮೀಕ್ಷೆ ಪ್ರಕಾರ ಪ್ರಸಕ್ತ ವರ್ಷ ಕೂಡ ಉತ್ತಮ ರೀತಿಯಲ್ಲಿಯೇ ಬೆಳವಣಿಗೆ ಸಾಧಿಸಲಿದೆ. ಅದರಲ್ಲೂ ಡಿಜಿಟಲ್ ಕ್ಷೇತ್ರದಲ್ಲಿಯೇ ಶೇ. 80ರಷ್ಟು ನೇಮಕವಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಮುನ್ಸೂಚನೆ ನೀಡಿದೆ.