ಕುಂದಾಪುರ: ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಕುಂದಾಪುರದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ಹಾಗೂ ಮಾಹಿತಿ ಕಾರ್ಯಕ್ರಮ ರವಿವಾರ ಬೋರ್ಡ್ ಹೈಸ್ಕೂಲಿನ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು.
ಮಹಾಸಭೆಯನ್ನು ಉದ್ಘಾಟಿಸಿದ ಕುಂದಾಪುರ ಉಪ ವಿಭಾಗದ ಎಎಸ್ಪಿ ಹರಿರಾಂ ಶಂಕರ್ ಮಾತನಾಡಿ, ಪೊಲೀಸರ ಬಗ್ಗೆ ಭಯ ಬೇಡ. ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅಷ್ಟೇ. ರಿಕ್ಷಾ ಚಾಲನೆ ವೇಳೆ ಎಲ್ಲರೂ ಕಡ್ಡಾಯವಾಗಿ ಖಾಕಿ ಬಟ್ಟೆ ಧರಿಸಿ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಎಂದರು.
ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ ಕುಂದಾಪುರದ ಅಧ್ಯಕ್ಷ ಸುರೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಿಎಸ್‌ಎಸ್ ಬ್ಯಾಂಕಿನ ಅಧ್ಯಕ್ಷ ಕೃಷ್ಣಮೂರ್ತಿ, ಬಿಎಂಎಸ್‌ನ ಜಿಲ್ಲಾ ಕಾರ್ಯದರ್ಶಿ ರತ್ನಾಕರ ದೇವಾಡಿಗ, ಸ್ಥಾಪಕಾಧ್ಯಕ್ಷ ಶಂಕರ್ ಅಂಕದಕಟ್ಟೆ, ಕಾರ್ಯದರ್ಶಿ ಭಾಸ್ಕರ ಖಾರ್ವಿ, ಗೌರವಾಧ್ಯಕ್ಷ ಸತೀಶ ಕೆ.ಟಿ., ಉದ್ಯಮಿ ದಿವಾಕರ್ ಕಡ್ಗಿ, ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಕುಂದಾಪುರ, ರೋಟರಿ ಸನ್‌ರೈಸ್‌ನ ಅಧ್ಯಕ್ಷ ಭಾಸ್ಕರ್ ಕೆ., ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಿಕ್ಷಾ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಕುಂದಾಪುರ ರೋಟರಿ ಕ್ಲಬ್ ಸನ್‌ರೈಸ್ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು. ಸಂಚಾರಿ ಠಾಣಾ ಎಎಸ್‌ಐ ಜನಾರ್ದನ್ ಮಾಹಿತಿ ನೀಡಿದರು.
ಸಂಘದ ನರೇಂದ್ರ ಸಂಗಮ್ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಕೆರೆಕಟ್ಟೆ ವಂದಿಸಿದರು. ಸಂಘದ ಮುಖಂಡ ರವಿ ಪುತ್ರನ್ ಕಾರ್ಯಕ್ರಮ ನಿರ್ವಹಿಸಿದರು.