Advertisement

ಅಂಕ ಗಳಿಕೆಗೆ ಪ್ರಶ್ನೆ ಕುರಿತು ಮಾಹಿತಿ

12:32 AM Nov 14, 2019 | Team Udayavani |

ಬೆಂಗಳೂರು: ಬಿಬಿಎಂಪಿಯು ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು ನೀಡಲು ಮುಂದಾಗಿದೆ. ಇದರ ಮೊದಲ ಹಂತವಾಗಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಮೆಟ್ರೋಗಳಲ್ಲಿನ ಮಾಹಿತಿ ಫ‌ಲಕಗಳ ಮೇಲೆ (ಎಲ್‌ಇಡಿ ಡಿಸ್‌ಪ್ಲೇ) ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಕೇಳುವ ಪ್ರಶ್ನೆಗಳ ಬಗ್ಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಿಕೊಳ್ಳುತ್ತಿದೆ.

Advertisement

ಕಳೆದ ಬಾರಿ ನಡೆದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬೆಂಗಳೂರಿನ ಸಾರ್ವಜನಿಕರು ಹೆಚ್ಚು ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಇದು ಸಹ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಪಾಲಿಕೆಗೆ ಕಡಿಮೆ ಅಂಕ ಬರುವುದಕ್ಕೆ ಕಾರಣವಾಗಿತ್ತು. ಹೀಗಾಗಿ, ಈ ಬಾರಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ 1,500 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಸರ್ವೇಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮಾತ್ರ ಬೆಂಗಳೂರಿಗೆ ಅಂಕ ಬರಲಿದೆ.

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮೂರು ಪ್ರಮುಖ ಹಂತಗಳಿವೆ. ಸಾರ್ವಜನಿಕ ಸಹಭಾಗಿತ್ವ, ಅಭಿಪ್ರಾಯ ಸಂಗ್ರಹ ಮತ್ತು ನಗರದ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಹಾಗೂ ನಗರ ಬಯಲು ಶೌಚಾಲಯ ಮುಕ್ತವಾಗಿದೆ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಕೇಂದ್ರ ಅಧ್ಯಾಯನ ತಂಡ ಪರಿಶೀಲನೆ ಮಾಡುತ್ತದೆ. ಹೀಗಾಗಿ, ಈ ಎಲ್ಲ ಅಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿಯೂ ಬಿಬಿಎಂಪಿ ಸಕ್ರಿಯವಾಗಿದೆ.

ಬಿಬಿಎಂಪಿಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳು ಮತ್ತು ಅದು ಎಷ್ಟು ಕಾಲಮಿತಿಯಲ್ಲಿ ಪರಿಹಾರವಾಗುತ್ತದೆ ಎನ್ನುವುದನ್ನೂ ಗಣನೆಗೆ ತೆಗೆದು ಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಬಿಬಿಎಂಪಿಯ ಸಹಾಯ ಆ್ಯಪ್‌ಗೆ ಸರ್ವೀಸ್‌ ಲೆವೆಲ್‌ ಅಗ್ರೀಮೆಂಟ್‌ ಅಳವಡಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆ ಮೂಲಕ ಸಹಾಯ ಆ್ಯಪ್‌ಗೆ ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಆದರೆ, ಸಹಾಯ ಆ್ಯಪ್‌ಅನ್ನು ಮೇಲ್ದರ್ಜೆಗೇರಿಸುವ ಕೆಲಸವಾಗಿಲ್ಲ. ಹೀಗಾಗಿ, ಈ ಅಂಶವೂ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬಿಬಿಎಂಪಿ ಅಂಕ ಕಳೆದುಕೊಳ್ಳುವ ಸಾಧ್ಯತೆ ಇದೆ.

11 ಪ್ರಶ್ನೆಗಳು: ಸ್ವಚ್ಛ ಸರ್ವೇಕ್ಷಣ್‌ನಲ್ಲಿ ನೇರ ಮತ್ತು ಪೋನ್‌ ಸಂದರ್ಶನದ ಮೂಲಕ 11 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾರ್ವಜನಿಕರಿಂದ ಧನಾತ್ಮಕ ಉತ್ತರಗಳನ್ನು ಬಿಬಿಎಂಪಿಯ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ, ನಗರದಲ್ಲಿ ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ, ಬ್ಲಾಕ್‌ ಸ್ಪಾಟ್‌ಗಳ ನಿರ್ಮಾಣ ಹಾಗೂ ಸಹಾಯ ಆ್ಯಪ್‌ಗೆ ಸುಧಾರಣೆ ತರದೆ ಇರುವುದರಿಂದ ಈ ಬಾರಿಯೂ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬಿಬಿಎಂಪಿಗೆ ಕಡಿಮೆ ಅಂಕಗಳು ಬರುವ ಸಾಧ್ಯತೆ ಇದೆ.

Advertisement

ಪ್ರಶ್ನೆಗಳು ಹಾಗೂ ಅಂಕಗಳು
1. ಸ್ವಚ್ಛ ಸರ್ವೇಕ್ಷಣ್‌-2020ನಲ್ಲಿ ನಿಮ್ಮ ನಗರ (ಬೆಂಗಳೂರು)ಭಾಗವಹಿಸುತ್ತಿರುವ ಬಗ್ಗೆ ನಿಮಗೆ ಮಾಹಿತಿ ಇದೆಯೇ? (ಅಂಕ 100).

2. ನೀವು ವಾಸಿಸುವ ಪ್ರದೇಶದ ಸುತ್ತಮುತ್ತಲಿನ ಜಾಗಕ್ಕೆ 200 ಅಂಕಗಳಿಗೆ ನೀವು ಎಷ್ಟು ಅಂಕ ಕೊಡಲು ಇಚ್ಛಿಸುತ್ತೀರಿ? (ಕಳೆದ ಆರು ತಿಂಗಳಲ್ಲಿ ಸಾರ್ವಜನಿಕರ ಅನುಭವವನ್ನು ಕೇಳಬಹುದು). (ಅಂಕ 200).

3. ನಗರದ ವಾಣಿಜ್ಯ ಕಟ್ಟಡಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿನ ಶೌಚಾಲಯಗಳ ಶುಚಿತ್ವಕ್ಕೆ ನೀವು ಎಷ್ಟು ಅಂಕ ನೀಡಲು ಇಚ್ಛಿಸುತ್ತೀರಿ? (ಅಂಕ 200)

4. ತ್ಯಾಜ್ಯ ಪಡೆದುಕೊಳ್ಳುವ ಬಿಬಿಎಂಪಿ ಸಿಬ್ಬಂದಿ ನಿಮ್ಮಿಂದ ತ್ಯಾಜ್ಯ ವಿಂಗಡಣೆ ಮಾಡಿಕೊಡಿ ಎಂದು ಕೇಳುತ್ತಾರೋ, ನೀವು ನೀಡಿದ್ದನ್ನು ಯಥಾವತ್ತು ಸ್ವೀಕರಿಸುತ್ತಾರೋ? (ಅಂಕ 200)

5. ನಿಮ್ಮ ನಗರದಲ್ಲಿನ ರಸ್ತೆ ವಿಭಜಕಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆಯೇ ಮತ್ತು ಸಸಿಗಳನ್ನು ನಡೆಲಾಗಿದೆಯೇ ? (ಅಂಕ 100)

6. ನಿಮ್ಮ ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ನೀವು ಎಷ್ಟು ಅಂಕ ನೀಡುತ್ತೀರ? (ಅಂಕ 200).
7. ನಿಮಗೆ ಒಡಿಎಫ್ (ಬಯಲು ಬಹಿರ್ದೆಸೆ ಮುಕ್ತ ಪ್ರದೇಶ) ಹಾಗೂ ಜಿಎಫ್ಸಿ (ತ್ಯಾಜ್ಯ ಮುಕ್ತ ಪ್ರದೇಶ)ದ ಬಗ್ಗೆ ಮಾಹಿತಿ ಇದೆಯೇ ? (ಅಂಕ 50).

ಸೇವೆ ಮತ್ತು ಆ್ಯಪ್‌ ಅಂಕಗಳು
8. ಸ್ವಚ್ಛ ಭಾರತ ಮತ್ತು ನಗರದ (ಸಹಾಯ) ಆ್ಯಪ್‌ ಹೊಂದಿರುವವರ ಸಂಖ್ಯೆ (ಅಂಕ 75).

9. ಸ್ಥಳೀಯ ಆ್ಯಪ್‌ನಲ್ಲಿ ದಾಖಲಾಗುವ ದೂರು ಎಷ್ಟು ಸಮಯದಲ್ಲಿ ಪರಿಹಾರವಾಗುತ್ತಿದೆ. ಈ ಆ್ಯಪ್‌ಗೆ ದಾಖಲಿಸುವ ದೂರು ಕಾಲಮಿತಿಯೊಳಗಾಗಿ ಪರಿಹಾರ ನೀಡಲಾಗುತ್ತಿದೆಯೇ? ( ಅಂಕ 150).

10. ಬಿಬಿಎಂಪಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಪರಿಚಯಿಸಿರುವ ಸಹಾಯ ಆ್ಯಪ್‌ ಅನ್ನು ಎಷ್ಟು ಜನ ಅಳವಡಿಸಿಕೊಂಡಿದ್ದಾರೆ ಮತ್ತು ಬಳಸುತ್ತಿದ್ದಾರೆ? (ಅಂಕ 100).

11. ಆ್ಯಪ್‌ ಮೂಲಕ ದಾಖಸಿದ ದೂರುಗಳಿಗೆ ಬಿಬಿಎಂಪಿ ಪತ್ರಿಕ್ರಿಯೆ ನಿಮಗೆ ಸಮಾಧಾನಕರವಾಗಿದೆಯೇ? (ಅಂಕ 75)

Advertisement

Udayavani is now on Telegram. Click here to join our channel and stay updated with the latest news.

Next