ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮೂವರು ಪಾಕ್ ಪ್ರಜೆಗಳು ಸೇರಿದಂತೆ ನಾಲ್ವರನ್ನು ಗುರುವಾರ ಕೇಂದ್ರದ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆಗೊಳಪಡಿಸಿವೆ.
ಪಾಸ್ ಪೋರ್ಟ್ ಮತ್ತು ವೀಸಾ ಇಲ್ಲದೇ ಕತಾರ್ ಮತ್ತು ಪಾಕಿಸ್ತಾನದಿಂದ ಬಂದ ಬಗ್ಗೆ ಸಿಸಿಬಿಯ ಹಿರಿಯ ಅಧಿಕಾರಿಗಳು ಮತ್ತು ದಕ್ಷಿಣ ವಿಭಾಗದ ಅಧಿಕಾರಿಗಳು, ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ರಾ (ಸಂಶೋಧನೆ ಮತ್ತು ವಿಶ್ಲೇಷಣೆ(ಅನಾಲಿಸಿಸ್) ವಿಭಾಗ, ಕೇಂದ್ರ ಗುಪ್ತಚರ ಮತ್ತು ಐಎಫ್ಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಸಿಸಿಬಿ ಮೂಲಗಳು ತಿಳಿಸಿವೆ.
ಪ್ರೀತಿ, ಪ್ರೇಮ, ಮದುವೆ ವಿಚಾರ ಹೊರತು ಪಡಿಸಿ ಬೇರೆ ಯಾವುದೇ ವಿಚಾರಗಳು ಬಂಧಿತರಿಂದ ತಿಳಿದು ಬಂದಿಲ್ಲ. ಬೇರೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ಸಿಕ್ಕಿಲ್ಲ. ಅವರ ಕೆಲವು ಉತ್ತರಗಳೇ ಹಲವು ಅನುಮಾನಗಳು ಹುಟ್ಟುಹಾಕಿವೆ.
ಆರೋಪಿಗಳ ಪೈಕಿ ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದು, ಅವರನ್ನು ವಿಚಾರಣೆ ನಡೆಸುತ್ತೇವೆ. ಆದರೆ, ಹೆಚ್ಚಿನ ವಿಶ್ರಾಂತಿ ಕೊಟ್ಟಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಏರ್ಪಾಡು ಮಾಡಲಾಗಿದೆ. ಕೇರಳ ಮೂಲದ ಸಿಹಾಬ್‌ನ ನೆರವಿನಿಂದಲೇ ನಗರದಲ್ಲಿ ನಕಲಿ ಗುರುತಿನ ಚೀಟಿಗಳನ್ನು ಪಡೆದು ನೆಲೆಸಿದ್ದರು ಎಂಬುದಷ್ಟೇ ಸದ್ಯದ ವರೆಗೆ ತಿಳಿದು ಬಂದಿರುವ ವಿಚಾರ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯರಲ್ಲಿ ಕುತೂಹಲ, ಆತಂಕ: ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಮೂವರು ಪಾಕ್ ಪ್ರಜೆಗಳ ಬಗ್ಗೆ ಜೆಎಚ್‌ಬಿಸಿಎಲ್ ಲೇಔಟ್ ನಿವಾಸಿಗಳು ಆತಂಕ ಹಾಗೂ ಕುತೂಹಲ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತಾರು ತಿಂಗಳಿಂದ ಎಲ್ಲರ ಜತೆಯಲ್ಲೂ ಅವರು ಚೆನ್ನಾಗಿದ್ದರು. ಅಕ್ಕ-ಪಕ್ಕದ ನಿವಾಸಿಗಳ ಜತೆ ಗಂಟೆಗಟ್ಟಲೇ ಮಾತನಾಡುತ್ತಿದ್ದರು.
ಆದರೂ ಪಾಕಿಸ್ತಾನದಿಂದ ಬಂದವರು ಎಂದು ತಿಳಿದಿರಲಿಲ್ಲ. ಭಾರತೀಯರಂತೆ ನಡೆದುಕೊಳ್ಳುತ್ತಿದ್ದರು. ನಜ್ಮಾ ಸಮೀರಾ ಮತ್ತು ಜಿನಬ್ ಕಿರಣ್ ಇಬ್ಬರೂ ನಮ್ಮೆಲ್ಲರ ಜತೆಗೆ ಹೆಚ್ಚು ಬೆರೆಯುತ್ತಿದ್ದರು. ಇದೀಗ ಅವರನ್ನು ಬಂಧಿಸಿರುವುದು ನಮ್ಮಲ್ಲಿ ಆತಂಕ ಉಂಟು ಮಾಡಿದೆ ಎಂದು ಹೇಳುತ್ತಾರೆ.