Advertisement

ಈದುವಿನಲ್ಲಿ  ಮತ್ತೆ ಶಸ್ತ್ರ ಸಜ್ಜಿತ ತಂಡ ?

06:00 AM Dec 02, 2018 | Team Udayavani |

ಕಾರ್ಕಳ: ತಾಲೂಕಿನ ಈದು ಗ್ರಾಮದ ಪಶ್ಚಿಮ ಘಟ್ಟದ ತಪ್ಪಲು ಭಾಗದ ಕೆಲವು ಮನೆಗಳಿಗೆ ಒಟ್ಟು 13 ಜನರ ಶಸ್ತ್ರ ಸಜ್ಜಿತ ತಂಡ ನ. 29ರಂದು ಭೇಟಿ ನೀಡಿದೆ ಎಂಬ ಮಾಹಿತಿ ಕೇಳಿಬಂದಿದೆ. ಇಲ್ಲಿನ ಬಾರೆ, ಮಂಜೊಟ್ಟು ಭಾಗಗಳಿಗೆ ಗುರುವಾರ ಭೇಟಿ ನೀಡಿದ್ದರೆ, ಬೊಲ್ಲೊಟ್ಟು ಭಾಗಕ್ಕೆ ಬುಧವಾರವೇ ಭೇಟಿ ನೀಡಿತ್ತೆನ್ನಲಾಗಿದೆ. ಸಂಜೆ ಅಂದಾಜು 6.30ರ ವೇಳೆಗೆ ಅಲ್ಲಿನ ನಾಲ್ಕೈದು ಮನೆ ಗಳಿಗೆ ಭೇಟಿ ನೀಡಿ, ಕೆಲ ಹೊತ್ತು ಕಳೆದಿದೆ. ಮನೆಯ ವರೊಂದಿಗೆ ಕೆಲವು ವಿಷಯವನ್ನು ಚರ್ಚಿಸಿತಲ್ಲದೆ, ರಾತ್ರಿಯ ವೇಳೆಗೆ ಕಾಡಿಗೆ ತೆರಳಿದೆ ಎನ್ನಲಾಗಿದೆ.

Advertisement

ತುಳು-ತೆಲುಗು-ಮಲಯಾಳ
ಮೂವರು ಮಹಿಳೆಯರು ಹಾಗೂ 10 ಪುರುಷರು ತಂಡದಲ್ಲಿದ್ದರು. ತುಳು, ತೆಲುಗು,  ಮಲಯಾಳ ಮಾತನಾಡುತ್ತಿದ್ದರು. ನಕ್ಸಲ್‌ ಸಮವಸ್ತ್ರದಲ್ಲಿದ್ದು, ಬಂದೂಕು ಹೊಂದಿದ್ದರು. ಲ್ಯಾಪ್‌ಟಾಪ್‌, ಮೊಬೈಲ್‌ ಇತ್ಯಾದಿ ಅತ್ಯಾಧುನಿಕ ಸಾಧನ ಹೊಂದಿದ್ದರೆಂಬ ಮಾಹಿತಿ ಲಭ್ಯವಾಗಿದೆ.

ಸಮಸ್ಯೆಗಳ ಬಗ್ಗೆ ಪ್ರಶ್ನೆ
ಭೇಟಿ ಸಂದರ್ಭದಲ್ಲಿ ಮಲೆನಾಡಿನ ವಿವಿಧ ಸಮಸ್ಯೆಗಳ ಕುರಿತು ಪ್ರಸ್ತಾವಿಸಿದ್ದಾರೆ. ಆಹಾರ ಪದಾರ್ಥಗಳನ್ನು ಕೇಳಿದ್ದಲ್ಲದೆ ಮನೆಯೊಂದರಲ್ಲಿ ಊಟ ಮಾಡಿ, ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಿಕೊಂಡು ಹಳೆ ಪೇಪರ್‌ಗಳನ್ನು ಪಡೆದೊಯ್ದಿದ್ದಾರೆ. 

ಆಗಾಗ ಭೇಟಿ?
ಘಟ್ಟದ ತಪ್ಪಲು ಭಾಗವಾದ ಈ ಪರಿಸರದಲ್ಲಿ ಐದಾರು ವರ್ಷಗಳ ಬಳಿಕ ಹೀಗೆ ತಂಡಗಳು ಪ್ರತ್ಯಕ್ಷವಾಗುತ್ತಿವೆ. ಈ ಹಿಂದೆಯೂ ಕೆಲವು ಸಲ ಇದೇ ರೀತಿ ನಕ್ಸಲರ ತಂಡಗಳು ಭೇಟಿ ನೀಡಿದ್ದವು ಎನ್ನುತ್ತಾರೆ ಸ್ಥಳೀಯರು.

ನೀರಿನ ಕಟ್ಟದ ಸಮಸ್ಯೆ…?
ಈ ಭಾಗದಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ರುವ ನೀರಿನ ಕಟ್ಟದ ಸಮಸ್ಯೆಯೊಂದಿದೆ. 10 ಮನೆಗಳಿಗೆ ಪ್ರಯೋಜನಕಾರಿ ಕಟ್ಟಕ್ಕೆ ಸಂಬಂಧಿಸಿ ಸ್ಥಳೀಯರೊಬ್ಬರ ತಕರಾರು ಇದೆ. ಭೇಟಿಗೆ ಇದೂ ಕಾರಣವೇ ಎಂಬ ಸಂಶಯ ಸ್ಥಳೀಯರದ್ದು.

Advertisement

ದೃಢಪಟ್ಟಿಲ್ಲ: ಎಎನ್‌ಎಫ್
ಈದು ಪ್ರದೇಶಕ್ಕೆ ನಕ್ಸಲರು ಬಂದಿರುವುದು ಖಚಿತವಾಗಿಲ್ಲ. ಜನರು ಯಾರನ್ನೋ ನೋಡಿ ಸಂಶಯಪಟ್ಟಿರಲೂಬಹುದು. ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈದು ಭಾಗದಲ್ಲಿ  ನಿರಂತರವಾಗಿ ಶೋಧ ನಡೆಯುತ್ತಿದೆ. ಇತ್ತೀಚೆಗೆ ರಾತ್ರಿ ವೇಳೆಯೂ ಶೋಧ ನಡೆಸಲಾಗುತ್ತಿದೆ. 11 ತಂಡಗಳು ಕಾರ್ಯ ನಿರತವಾಗಿದ್ದು, ನ.28ರಂದೂ ನಡೆಸಲಾಗಿತ್ತು ಎನ್ನುತ್ತಾರೆ ಎಎನ್‌ಎಫ್ ಅಧಿಕಾರಿಗಳು.

ಮಾಹಿತಿ ಇಲ್ಲ
ನಕ್ಸಲರು ಬಂದ ಬಗ್ಗೆ ಮಾಹಿತಿ ಇಲ್ಲ. ಎಎನ್‌ಎಫ್ನವರು ಶೋಧ ನಡೆಸುತ್ತಿ ರುತ್ತಾರೆ. ನಿನ್ನೆ ನಾವೂ ಆ ಭಾಗಕ್ಕೆ ಭೇಟಿ ನೀಡಿದ್ದೆವು, ಸುಳಿವು ಸಿಕ್ಕಿಲ್ಲ. 
ನಾಸಿರ್‌ ಹುಸೇನ್‌, ಗ್ರಾಮಾಂತರ ಠಾಣೆ ಪಿಎಸ್‌ಐ
 

Advertisement

Udayavani is now on Telegram. Click here to join our channel and stay updated with the latest news.

Next