Advertisement

ಅಕ್ರಮ ವಲಸಿಗರ ಪತ್ತೆಗೆ ಮಾಹಿತಿ ಕಲೆ

09:59 AM Dec 14, 2019 | Suhan S |

ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಅಕ್ರಮ ವಲಸಿಗರ ಪತ್ತೆ ಮಾಡುವ ಕಾರ್ಯ ಭರದಿಂದ ಸಾಗಿದೆ.

Advertisement

ಐಎಸ್‌ಡಿ ತಂಡ ಕಳೆದೆರಡು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ ವಲಸಿಗರನ್ನು ಪತ್ತೆ ಮಾಡುತ್ತಿದ್ದು, ಅಂಥವರ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ಅಲ್ಲದೆ ಕಟ್ಟಡ ಕಾಮಗಾರಿ, ರಸ್ತೆ ರಿಪೇರಿ, ಚಿನ್ನಾಭರಣ ಕುಸುರಿ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ತೊಡಗಿರುವ ವಲಸಿಗರ ಬಗ್ಗೆ ನಿಗಾ ವಹಿಸಿದೆ. ಈಗಾಗಲೇ ಐಎಸ್‌ಡಿ ತಂಡ ಹೊರ ರಾಜ್ಯದಿಂದ ಹು-ಧಾಗೆ ಬಂದಿರುವ 300ಕ್ಕೂ ಅಧಿಕ ವಲಸಿಗರನ್ನು ಭೇಟಿ ಮಾಡಿ ಅವರಿಂದ ಅಗತ್ಯ ದಾಖಲೆಗಳ ಮಾಹಿತಿ ಪಡೆದಿದೆ ಎಂದು ತಿಳಿದು ಬಂದಿದೆ.

ವಲಸಿಗರ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುವಂತೆ ಐಎಸ್‌ಡಿಗೆ ಮೌಖೀಕವಾಗಿ ಸೂಚನೆಗಳು ಬಂದ ಹಿನ್ನೆಲೆಯಲ್ಲಿ ಈ ವಿಭಾಗದವರು ರಸ್ತೆ ರಿಪೇರಿ ಹಾಗೂ ಕಟ್ಟಡ ಕಾಮಗಾರಿಗಳ ಗುತ್ತಿಗೆದಾರರು, ಇಂಜನಿಯರ್‌ಗಳನ್ನು ಭೇಟಿ ಮಾಡಿ ಅವರ ಬಳಿ ಎಷ್ಟು ವಲಸಿಗರು ಕೆಲಸ ಮಾಡುತ್ತಿದ್ದಾರೆ.

ಅವರು ಎಷ್ಟು ವರ್ಷಗಳಿಂದ ತಮ್ಮ ಬಳಿ ಕೆಲಸಕ್ಕಿದ್ದಾರೆ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಬಾಂಗ್ಲಾ ಹಾಗೂ ರೋಹಿಂಗ್ಯಾ, ಥೈಲ್ಯಾಂಡ್‌ ಇನ್ನಿತರ ಕಡೆಯ ಅನೇಕರು ಅವಳಿನಗರದಲ್ಲಿ ತಂಗಿದ್ದಾರೆನ್ನಲಾಗುತ್ತಿದ್ದು, ಇವರಲ್ಲಿ ಬಹುತೇಕರು ಕಟ್ಟಡ ನಿರ್ಮಾಣ, ಚಿನ್ನಾಭರಣ ಕುಸುರಿ ಕೆಲಸ, ರಸ್ತೆ ಕಾಮಗಾರಿ, ಚಿಂದಿ ಆಯುವ ಕೆಲಸ ಸೇರಿದಂತೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಆಧಾರ ಕಾರ್ಡ್‌, ಮತದಾರರ ಚೀಟಿ ಸೇರಿದಂತೆ ಇನ್ನಿತರೆ ಸರಕಾರಿ ಸೌಲಭ್ಯದ ದಾಖಲೆ ಹೊಂದಿದ್ದಾರೆ. ತಾವು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನಗಳಿಗೆ ಸೇರಿದವರೆಂದು ಹೇಳುತ್ತಿದ್ದು, ಈ ಕುರಿತಾಗಿಯೇ ಪರಿಶೀಲನೆ ನಡೆಯುತ್ತಿದೆ. ಸ್ಥಳೀಯ ಐಎಸ್‌ಡಿ ವಿಭಾಗದ ಬೆಂಗಳೂರಿನ ಐಎಸ್‌ಡಿಗೆ ಕಳುಹಿಸಲಿದ್ದಾರೆ. ಅದು ಆಯಾ ರಾಜ್ಯಗಳ ಸಂಬಂಧಪಟ್ಟವರಿಗೆ ವಲಸಿಗರ ಬಗ್ಗೆ ಇರುವ ದಾಖಲೆಗಳನ್ನು ಕಳುಹಿಸಿ ಅವರಿಂದ ಸಮಗ್ರ ಮಾಹಿತಿ ಪಡೆಯಲಿದ್ದಾರೆಂದು ತಿಳಿದು ಬಂದಿದೆ.

ಅವಳಿ ನಗರಕ್ಕೆ ವಲಸೆ ಬಂದಿರುವವರು ತಾವು ಪಶ್ಚಿಮ ಬಂಗಾಳದವರು, ಉತ್ತರ ಪ್ರದೇಶದವರು, ಬಿಹಾರದವರು, ದೆಹಲಿಯವರು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇವರಲ್ಲಿ ಕೆಲವರು ಬಾಂಗ್ಲಾ, ರೋಹಿಂಗ್ಯಾದಿಂದಲೂ ಬಂದವರಾಗಿದ್ದಾರೆ ಎನ್ನುವ ಶಂಕೆ ಇದ್ದು, ಈ ಬಗ್ಗೆಯೂ ಐಎಸ್‌ಡಿ ಹಾಗೂ ಸ್ಥಳೀಯ ಪೊಲೀಸರು ತೀವ್ರ ನಿಗಾ ವಹಿಸಿ ಅವರ ದಾಖಲೆ ಪರಿಶೀಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಹು-ಧಾ ಪೊಲೀಸ್‌ ಕಮೀಷನರೇಟ್‌, ಧಾರವಾಡ ಜಿಲ್ಲಾ ಪೊಲೀಸ್‌ ಸಹಯೋಗದೊಂದಿಗೆ ಜಿಲ್ಲೆಯ ಹು-ಧಾ ಅವಳಿ ನಗರ, ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ ತಾಲೂಕುಗಳಲ್ಲಿ ವಲಸಿಗರ ಬಗ್ಗೆ ಸ್ಥಳೀಯ ಐಎಸ್‌ಡಿ ವಿಭಾಗದವರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

ಈ ಪ್ರದೇಶಗಳಲ್ಲಿ ವಾಸಿಸಿರುವ ಪಶ್ಚಿಮ ಬಂಗಾಲ, ಬಿಹಾರ, ಉತ್ತರ ಪ್ರದೇಶದ ಮುಖಂಡರನ್ನು ಭೇಟಿ ಮಾಡಿ, ಆ ಪ್ರದೇಶಗಳ ವಲಸಿಗ ಜನರ ಸಮೀಕ್ಷೆಗೆ ಮುಂದಾಗಿದ್ದಾರೆ. ಅಲ್ಲದೆ ಚಿನ್ನಾಭರಣ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು, ರಸ್ತೆ ರಿಪೇರಿ ಮಾಡುವ ಗುತ್ತಿಗೆದಾರರು ಸೇರಿದಂತೆ ಇನ್ನಿತರೆ ಕಾಮಗಾರಿಗಳಲ್ಲಿ ವಲಸಿಗರನ್ನು ಕೆಲಸಕ್ಕೆ ನಿಯೋಜಿಸಿಕೊಂಡವರನ್ನು ಭೇಟಿ ಮಾಡಿ ಅವರಿಂದ ವಲಸಿಗರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

ಅವಳಿ ನಗರದಲ್ಲಿ ವಲಸಿಗರಾಗಿ ಆಗಮಿಸಿದವರ ಬಗ್ಗೆ ನಿಗಾ ವಹಿಸಲಾಗಿದೆ. ಅನಧಿಕೃತವಾಗಿ ವಾಸವಾದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರೆಂದು ಆಗಮಿಸಿ ನಗರದ ಮಸಾಜ್‌ ಪಾರ್ಲರ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಯುವತಿಯರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗಿದೆ. ಬೀಟ್‌ ವ್ಯವಸ್ಥೆ ಬಲಗೊಳಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ.ಆರ್‌.ದಿಲೀಪ್‌, ಆಯುಕ್ತರು, ಹು ಧಾ ಪೊಲೀಸ್‌ ಕಮೀಷನರೇಟ್‌

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next