Advertisement

‘ಉದಯವಾಣಿ’ಸೇರಿ 30 ಮಾಧ್ಯಮ ಸಂಸ್ಥೆಗಳಿಗೆ ‘ಅಂತಾರಾಷ್ಟ್ರೀಯ ಯೋಗ ದಿವಸ್‌ ಮೀಡಿಯಾ ಸಮ್ಮಾನ್‌’

10:33 AM Jan 09, 2020 | Team Udayavani |

ಹೊಸದಿಲ್ಲಿ: ಕನ್ನಡಿಗರ ‘ಜನಮನದ ಜೀವನಾಡಿ’ಯಾಗಿರುವ ಉದಯವಾಣಿ ಸೇರಿ ದಂತೆ ದೇಶದ 30 ಮಾಧ್ಯಮ ಸಂಸ್ಥೆಗಳಿಗೆ ಮೊದಲ ‘ಅಂತಾರಾಷ್ಟ್ರೀಯ ಯೋಗ ದಿವಸ್‌ ಮೀಡಿಯಾ ಸಮ್ಮಾನ್‌’ ಪ್ರಶಸ್ತಿಯನ್ನು ಹೊಸದಿಲ್ಲಿಯ ನ್ಯಾಶ‌ನಲ್‌ ಮೀಡಿಯಾ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳವಾರ ಪ್ರದಾನ ಮಾಡಲಾಗಿದೆ.

Advertisement

ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು, ‘ಸಮಾಜದ ಒಳಿತಿಗಾಗಿ ಯೋಗವನ್ನು ಪ್ರಚುರಪಡಿಸುವಲ್ಲಿ ಕೊಡುಗೆ ನೀಡಿರುವಂಥ ಮಾಧ್ಯಮ ಸಂಸ್ಥೆಗಳನ್ನು ನಾವು ಈ ಪ್ರಶಸ್ತಿಯ ಮೂಲಕ ವಿಶಿಷ್ಟವಾಗಿ ಗೌರವಿಸುತ್ತಿದ್ದೇವೆ. ಸುದ್ದಿ, ಅಭಿಪ್ರಾಯ ಹಾಗೂ ಜಾಹೀರಾತುಗಳಾಚೆಗೆ ಮಾಧ್ಯಮ ಸಂಸ್ಥೆಗಳ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಶಸ್ತಿಯನ್ನು ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಸುರಾಜ್‌ಗಾಗಿ ಶ್ರಮ: ಈ ವೇಳೆ, ಲೋಕಮಾನ್ಯ ತಿಲಕ್‌ ಅವರ ‘ಕೇಸರಿ’ ಪತ್ರಿಕೆ ಕುರಿತು ಪ್ರಸ್ತಾಪಿಸಿದ ಸಚಿವ ಜಾವಡೇಕರ್‌, “ತಿಲಕ್‌ ಅವರು “ಸ್ವರಾಜ್ಯ’ದ ಕುರಿತು ಜನರಲ್ಲಿ ಅರಿವು ಮೂಡಿಸಲೆಂದೇ “ಕೇಸರಿ’ ಪತ್ರಿಕೆಯನ್ನು ಆರಂಭಿಸಿದರು. ಈಗ ಮಾಧ್ಯಮ ಸಂಸ್ಥೆಗಳು ‘ಸುರಾಜ್‌’ಗಾಗಿ- ಅಂದರೆ ಉತ್ತಮ ಆರೋಗ್ಯಸೇವೆ, ಶಿಕ್ಷಣ, ನಾಗರಿಕ ಸೌಲಭ್ಯಗಳು ಎಲ್ಲ ರಿಗೂ ಲಭ್ಯವಾಗುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿವೆ. ಇದು ಭಾರತದ ಪ್ರೌಢ ಪ್ರಜಾಸತ್ತೆಯ ಪ್ರತೀಕವಾಗಿದೆ’ ಎಂದೂ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ದೂರದೃಷ್ಟಿ ಹಾಗೂ ಪರಿಶ್ರಮದಿಂದಾಗಿಯೇ ಯೋಗವು ಜಾಗತಿಕ ಗೌರವಕ್ಕೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಸಂಬಂಧಿಸಿ ಭಾರತವಿಟ್ಟ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯೂ ಸಂಪೂರ್ಣ ಬೆಂಬಲ ನೀಡಿದೆ ಎಂದೂ ಹೇಳಿದ ಜಾವಡೇಕರ್‌, ಪ್ರಶಸ್ತಿಗೆ ಪಾತ್ರವಾದ ಎಲ್ಲ ಮಾಧ್ಯಮ ಸಂಸ್ಥೆಗಳನ್ನೂ ಅಭಿನಂದಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತೀಯ ಪತ್ರಿಕಾ ಮಂಡಳಿಯ ಮುಖ್ಯಸ್ಥರಾದ ನ್ಯಾ| ಸಿ.ಕೆ. ಪ್ರಸಾದ್‌, ಆಯುಷ್‌ ಸಚಿವ ಶ್ರೀಪಾದ್‌ ಯೆಸ್ಲೋ ನಾಯ್ಕ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಂ ಸಹಾಯ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement

ಕನ್ನಡ ಮುದ್ರಣ ವಿಭಾಗದಲ್ಲಿ ಉದಯವಾಣಿಗೆ ಗರಿ


ಯೋಗದ ಕುರಿತು ಜನರಲ್ಲಿ ಅರಿವು ಮೂಡಿಸಿದ ಮಾಧ್ಯಮಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡುವ ‘ಅಂತಾರಾಷ್ಟ್ರೀಯ ಯೋಗ ದಿವಸ್‌ ಮೀಡಿಯಾ ಸಮ್ಮಾನ್‌’ ಗೌರವವು ಈ ಬಾರಿ ಮುದ್ರಣ ಮಾಧ್ಯಮ (ಕನ್ನಡ) ವಿಭಾಗದಲ್ಲಿ ಉದಯವಾಣಿಗೆ ಲಭಿಸಿದೆ.

ಉದಯವಾಣಿ 2019ರ ಜೂನ್‌ 14ರಿಂದ 22ರ ತನಕ ಈ ಅಭಿಯಾನವನ್ನು ನಡೆಸಿದ್ದು, ಇದರಡಿ ಯೋಗಗುರುಗಳು ಹಾಗೂ ಯೋಗತಜ್ಞರ ಲೇಖನಗಳನ್ನು ಪ್ರಕಟಿಸಿತ್ತು. ವಿಶೇಷ ಪುಟಗಳ ಮೂಲಕ ವಿವಿಧ ಆಸನಗಳ ಪರಿಚಯ ಹಾಗೂ ರಾಜ್ಯದ ಯೋಗ ಪರಂಪರೆಯ ಬಗ್ಗೆಯೂ ನಿರಂತರ ಬೆಳಕು ಚೆಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next