ಬೆಂಗಳೂರು: ಚುನಾ ವಣೆಗೆ ಸಲ್ಲಿಸುವ ನಾಮಪತ್ರದಲ್ಲಿ ಅಭ್ಯರ್ಥಿ ವಿರುದ್ಧ ದಾಖಲಾದ ಎಲ್ಲ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಇರಬೇಕು. ವಿಚಾರಣೆ ಹಂತದಲ್ಲಿ ರುವ ದಾವೆಗಳ ಜತೆಗೆ ರದ್ದತಿ, ಖುಲಾಸೆಗೊಂಡ ಅಥವಾ ಬಿಡುಗಡೆ ಕುರಿತ ಮಾಹಿತಿ ಒಳಗೊಂಡಿರಬೇಕು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವೊಂದರಲ್ಲಿ ಖುಲಾಸೆಗೊಂಡಿದ್ದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ತಮ್ಮ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮ ಪಂಚಾಯತ್ ಸದಸ್ಯ ಮುದಿಯಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಸೂರಜ್ ಗೋವಿಂದರಾಜ್ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ನೀಡಿದೆ.
ಚುನಾಯಿತ ಅಭ್ಯರ್ಥಿಗಳ ಅನರ್ಹತೆಗೆ ಶಿಕ್ಷೆ ಅಥವಾ ಆರೋಪದ ಸಾಬೀತು ಅತ್ಯಗತ್ಯವಾಗಿದೆ. ಆದರೆ ನಾಮಪತ್ರದ ನಮೂನೆಯಲ್ಲಿ ಮಾಹಿತಿ ಬಹಿರಂಗಪಡಿಸುವಾಗ ಶಿಕ್ಷೆ ಆಗಿರುವುದು, ವಿಚಾರಣೆ ನಡೆಯುತ್ತಿರುವುದು ಅಥವಾ ಖುಲಾಸೆಗೊಂಡಿರುವುದು ಎಂದು ಪ್ರತ್ಯೇಕಿಸಲಾಗದು. ಎಲ್ಲ ಮಾಹಿತಿ ಇರಲೇಬೇಕು ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಡೆಮಾಕ್ರಟಿಕ್ ಯೂನಿಯನ್ ಆಫ್ ಇಂಡಿಯಾ ವರ್ಸಸ್ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು ಪ್ರಕರಣದಲ್ಲಿ, ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣಪತ್ರದಲ್ಲಿ ಎಲ್ಲ ಕ್ರಿಮಿನಲ್ ಪ್ರಕರಣಗಳು ಅಂದರೆ ರದ್ದಾದ, ಬಿಡುಗಡೆ ಅಥವಾ ಖುಲಾಸೆಯಾದ ಬಗ್ಗೆ ಮಾಹಿತಿ ಒದಗಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರಂತೆ ಅಭ್ಯರ್ಥಿಗಳು ಬಾಕಿ ಇರುವ ಕ್ರಿಮಿನಲ್ ಕೇಸುಗಳ ವಿವರ ಸಲ್ಲಿಸಿದರೆ ಸಾಲದು. ಜತೆಗೆ ಖುಲಾಸೆ ಅಥವಾ ರದ್ದಾದ ಪ್ರಕರಣಗಳ ಮಾಹಿತಿ ನೀಡಬೇಕು.
ಆಗ ಮತದಾರರು ಯಾವ ಅಭ್ಯರ್ಥಿ ಚುನಾವಣೆ ಕಣದಲ್ಲಿದ್ದಾರೆ, ಅವರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನ್ಯಾಯಪೀಠ ಉಲ್ಲೇಖೀಸಿದೆ.