Advertisement

ಕಣ್ಣುಗಳಿಂದ ಆಲಿಸುವುದು ಸಂಜ್ಞಾಭಾಷೆಯ ಬಗ್ಗೆ ತಪ್ಪು ಮಾಹಿತಿ- ಸತ್ಯಾಂಶಗಳು

09:27 AM Nov 27, 2022 | Team Udayavani |

ದೂರದರ್ಶನದಲ್ಲಿ ಯಾವತ್ತಾದರೂ ಪ್ರಮುಖ ಕಾರ್ಯಕ್ರಮದ ಪ್ರಸಾರ ನಡೆಯುತ್ತಿರುವಾಗ ಮಾತನಾಡುತ್ತಿರುವವರ ಸನಿಹ ಇನ್ನೊಬ್ಬರು ಸಂಜ್ಞಾಭಾಷೆಯಲ್ಲಿ ಎಲ್ಲವನ್ನೂ ಹೇಳುವುದನ್ನು ಗಮನಿಸಿದ್ದೀರಾ? ಕಾರ್ಯಕ್ರಮ ನೀಡುತ್ತಿರುವವರ ಮಾತುಗಳನ್ನು ಅವರು ಸಂಜ್ಞಾಭಾಷೆಯಲ್ಲಿ ನಿರೂಪಿಸುತ್ತಿದ್ದಾರೆ ಎಂಬುದು ಪ್ರಾಯಃ ನಿಮಗೆ ಅರ್ಥವಾಗಿರಬಹುದು. ಮಾತನಾಡುವ ಭಾಷೆ ಅಭಿವೃದ್ಧಿ ಹೊಂದುವುದಕ್ಕೆ ಎಷ್ಟೋ ಹಿಂದೆಯೇ ನಮ್ಮ ಪೂರ್ವಜರು ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುತ್ತಿದ್ದರು ಎಂಬುದಾಗಿ ಕೆಲವು ತಜ್ಞರು ಪ್ರತಿಪಾದಿಸುತ್ತಾರೆ. ಆ ಕಾಲಘಟ್ಟದಿಂದ ನಾವು ಎಷ್ಟೋ ದೂರಕ್ಕೆ ಸಾಗಿಬಂದಿದ್ದೇವಾದರೂ ಗದ್ದಲವೆಬ್ಬಿಸುತ್ತಿರುವ ಮಗುವನ್ನು ಸುಮ್ಮನಿರಿಸಲು ತುಟಿಯ ಮೇಲೆ ಬೆರಳಿಸಿ “ಶ್‌…’ ಎನ್ನುವಾಗ, ಆಟೋರಿಕ್ಷಾವನ್ನು ಕೈ ಎತ್ತಿ ಕರೆವಾಗ ಅಥವಾ ಹೊಟೇಲ್‌ನ ಮೆನುವಿನಲ್ಲಿ ಯಾವುದೋ ಖಾದ್ಯವನ್ನು ಬೆರಳು ತೋರಿಸಿ ಆರಿಸುವಾಗ ನಾವು ಸರಳವಾದ ಸಂಜ್ಞಾ ಭಾಷೆಯನ್ನೇ ಉಪಯೋಗಿಸುತ್ತೇವೆ.

Advertisement

ಸಂಜ್ಞಾ ಭಾಷೆ ಕಲಿಯಲು ಕಠಿನವೇ?

ಖಂಡಿತ ಅಲ್ಲ ಅಥವಾ ಇತರ ಭಾಷೆಗಳನ್ನು ಕಲಿಯುವಾಗ ಎದುರಾಗುವುದಕ್ಕಿಂತ ಹೆಚ್ಚಿನದಾದ ಸವಾಲುಗಳು ಈ ಭಾಷೆಯನ್ನು ಕಲಿಯುವಾಗ ಎದುರಾಗುವುದಿಲ್ಲ. ಕೆಲವು ಅಂಶಗಳಲ್ಲಿ ಈ ಭಾಷೆ ಸವಾಲಿನದಾಗಿರಬಹುದು, ಆದರೆ ಇನ್ನಿತರ ಕೆಲವು ಅಂಶಗಳಲ್ಲಿ ಈ ಭಾಷೆಯ ಪ್ರಾವೀಣ್ಯ ಸಾಧಿಸುವುದು ತುಲನಾತ್ಮಕವಾಗಿ ಸುಲಭವಾಗಿರುತ್ತದೆ. ಅಭಿವ್ಯಕ್ತಿಗೆ ಮಾತಿನ ಮಾಧ್ಯಮದ ಜತೆಗೆ ಇನ್ನೊಂದು ಮಾಧ್ಯಮವನ್ನು ಈ ಭಾಷೆಯ ಕಲಿಕೆ ಒದಗಿಸುತ್ತದೆ. ಸಂವಹನದಲ್ಲಿ ಅಧಿಕಾಂಶವು ಮಾತನ್ನು ಉಪಯೋಗಿಸದೆ ನಡೆಯುತ್ತದೆ, ಸಂಜ್ಞಾಭಾಷೆಯ ಉಪಯೋಗವು ಈ ಮಾತೇತರ ಸಂವಹನವನ್ನು ಸಂಘಟಿತ, ಸುಸ್ವರೂಪಗೊಳಿಸುವ ಮೂಲಕ ಹೆಚ್ಚು ಪರಿಣಾಮಕಾರಿಯನ್ನಾಗಿಸುತ್ತದೆ. ಮಾತನಾಡುವ ಭಾಷೆಯಂತೆಯೇ ಜಗತ್ತಿನೆಲ್ಲೆಡೆ ಶ್ರವಣ ಸಾಮರ್ಥ್ಯ ಕಡಿಮೆ ಇರುವವರು ವಿಭಿನ್ನ ಸಂಜ್ಞಾಭಾಷೆಗಳನ್ನು ಉಪಯೋಗಿಸುತ್ತಾರೆ. ಬ್ರಿಟಿಶ್‌ ಸೈನ್‌ ಲ್ಯಾಂಗ್ವೇಜ್‌ (ಬಿಎಸ್‌ಎಲ್‌), ಅಮೆರಿಕನ್‌ ಸೈನ್‌ ಲ್ಯಾಂಗ್ವೇಜ್‌ (ಎಎಸ್‌ಎಲ್‌) ಮತ್ತು ಇಂಡಿಯನ್‌ ಸೈನ್‌ ಲ್ಯಾಂಗ್ವೇಜ್‌ (ಐಎಸ್‌ ಎಲ್‌) ಇವುಗಳಲ್ಲಿ ಕೆಲವು. ಸಂಜ್ಞಾಭಾಷೆಯ ಬಗ್ಗೆ ತಿಳಿದುಕೊಂಡು, ನಾವಿರುವ ಸಮಾಜದಲ್ಲಿ ಹೆಚ್ಚು ಉತ್ತಮ ಸಂವಹನಕ್ಕಾಗಿ ಅದನ್ನು ಉಪಯೋಗಿಸಿಕೊಳ್ಳುವುದಕ್ಕಾಗಿ ಸಂಜಾ ಭಾಷೆಯ ಬಗ್ಗೆ ಸ್ವಲ್ಪ ಹೆಚ್ಚು ಆಳವಾಗಿ ನಾವಿಲ್ಲಿ ತಿಳಿಯೋಣ.

ಸಂಜ್ಞಾಭಾಷೆಯ ಬಗ್ಗೆ ಸಮುದಾಯದಲ್ಲಿ ಇರುವ ಕೆಲವು ತಪ್ಪು ಮಾಹಿತಿಗಳು ಮತ್ತು ಸತ್ಯಾಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ತಪ್ಪು ಮಾಹಿತಿ 1: ಎಲ್ಲ ಕಿವುಡರಿಗೂ ಸಂಜ್ಞಾಭಾಷೆ ಅಥವಾ ಅದರ ಬಳಕೆ ತಿಳಿದಿರುತ್ತದೆ.

ಇಲ್ಲ. ಸಂಜ್ಞಾಭಾಷೆ ಅಥವಾ ಮಾತಿನ ಭಾಷೆ ಮತ್ತು ಸಂಜ್ಞಾಭಾಷೆ ಎರಡೂ ಸಂಯೋಜನೆಗೊಂಡ ಭಾಷೆ ಅಥವಾ ಕೇವಲ ಮಾತಿನ ಭಾಷೆಯನ್ನು ಉಪಯೋಗಿಸುವುದು ಶ್ರವಣ ಸಾಮರ್ಥ್ಯ ದೋಷವುಳ್ಳವರ ಇಚ್ಛೆ ಮತ್ತು ಸಾಮರ್ಥ್ಯವನ್ನು ಅವಲಂಬಿಸಿದೆ. ಶ್ರವಣ ಸಾಮರ್ಥ್ಯವುಳ್ಳವರ ಪೈಕಿ ಕೆಲವು ಮಂದಿ ಮಾತಿನ ಭಾಷೆಯನ್ನು ಮಾತ್ರ ಉಪಯೋಗಿಸುವ ಕಾರಣಕ್ಕೆ ಅವರಿಗೆ ಸಂಜ್ಞಾ ಭಾಷೆಯ ಬಳಕೆ ತಿಳಿದಿರಲಾರದು.

ತಪ್ಪು ಮಾಹಿತಿ 2: ಶ್ರವಣ ಸಾಮರ್ಥ್ಯ ದೋಷವುಳ್ಳವರಿಗೆ ಸಂಜ್ಞಾಭಾಷೆಯು ಬಹಳ ಮುಖ್ಯ.

ಸಂಜ್ಞಾಭಾಷೆಯನ್ನು ಯಾಕೆ ಆವಿಷ್ಕರಿಸಲಾಯಿತು ಎಂಬುದರ ಹಿಂದಿರುವ ಕಾರಣವನ್ನು ನಾವು ಯಾವ ಕಾರಣಕ್ಕೂ ನಿರ್ಲಕ್ಷಿಸಲಾಗದು. ಆದರೆ ಅದು ಶ್ರವಣ ದೋಷವುಳ್ಳವರಿಗೆ ಮಾತ್ರವೇ ಇರುವಂಥದ್ದೇನೂ ಅಲ್ಲ; ಅಲ್ಪ ಸಂಖ್ಯೆಯಲ್ಲಿರುವ ಕೇಳುವ ಸಾಮರ್ಥ್ಯವಿದ್ದು, ಮಾತನಾಡುವ ಸಾಮರ್ಥ್ಯವಿಲ್ಲದವರ ಸಹಿತ ಅದನ್ನು ಯಾರು ಬೇಕಾದರೂ ಕಲಿತು ಉಪಯೋಗಿಸಬಹುದು.

ತಪ್ಪು ಮಾಹಿತಿ 3: ಸಂಜ್ಞಾಭಾಷೆಯಿಂದ ಮಾತನಾಡುವ ಸಾಮರ್ಥ್ಯದ ಬೆಳವಣಿಗೆ ವಿಳಂಬವಾಗುತ್ತದೆ.

ಸಂಜ್ಞಾ ಭಾಷೆಯು ಮಾತಿನ ಮೂಲಕ ಸಂವಹನಕ್ಕೆ ಪರ್ಯಾಯವಾದುದು ಎಂಬ ತಪ್ಪು ಅಭಿಪ್ರಾಯದಿಂದಾಗಿ ಈ ತಪ್ಪು ಕಲ್ಪನೆ ಹುಟ್ಟಿಕೊಂಡಿದೆ. ಮಾತಿನ ಭಾಷೆಯು ಶಾಬ್ದಿಕ ಸಂಕೇತಗಳನ್ನು ಒಳಗೊಂಡಿರುವ ಕಾರಣ ಸಂಜ್ಞಾಭಾಷೆಯ ಬಳಕೆಯಿಂದ ಮಾತನಾಡುವ ಸಾಮರ್ಥ್ಯದ ಬೆಳವಣಿಗೆ ವಿಳಂಬವಾಗುವುದಿಲ್ಲ. ಶಾಬ್ದಿಕ ಸಂಕೇತಗಳನ್ನು ಕಲಿಸುವಾಗ ಹೆತ್ತವರು ಸದಾ ಪದಗಳನ್ನು ಪುನರಾವರ್ತಿಸುತ್ತಿರುತ್ತಾರೆ; ಇದರಿಂದಾಗಿ ಶಿಶುವಿಗೆ ಶಾಬ್ದಿಕ ಸಂಕೇತ ಮತ್ತು ಪದಗಳ ನಡುವೆ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಹಾಗೆ ಹೇಳುವುದಾದರೆ ಸಂಜ್ಞಾಭಾಷೆಯು ಶಿಶುವನ್ನು ಮಾತಿನ ಭಾಷೆಯ ಲೋಕದತ್ತ ಹೆಚ್ಚು ತೆರೆದಿಡುತ್ತದೆ.

ತಪ್ಪು ಮಾಹಿತಿ 4: ಸಂಜ್ಞಾಭಾಷೆಯು ಒಂದು “ನೈಜ’ ಭಾಷೆಯಲ್ಲ

ಭಾರತೀಯ ಸಂಜ್ಞಾಭಾಷೆಯಂತೆಯೇ ಎಲ್ಲ ಸಂಜ್ಞಾಭಾಷೆಗಳು ಮಾತಿನ ಭಾಷೆಯಷ್ಟೇ ಸಂಕೀರ್ಣ ಮತ್ತು ಉನ್ನತವಾಗಿವೆ. ಇತರ ಯಾವುದೇ ಭಾಷೆಗಳಂತೆ ಸಂಜ್ಞಾಭಾಷೆಯೂ ತನ್ನದೇ ಆದ ವ್ಯಾಕರಣ ಸಂಚರನೆಗಳು ಮತ್ತು ಬಳಕೆ ವಿಧಾನವನ್ನು ಹೊಂದಿದೆ.

ತಪ್ಪು ಮಾಹಿತಿ 5: ಸಂಜ್ಞಾಭಾಷೆ ಸಾರ್ವತ್ರಿಕವಾದುದು. ನೀವದನ್ನು ಒಮ್ಮೆ ಕಲಿತರೆ ಜಗತ್ತಿನ ಯಾವುದೇ ಭಾಗದಲ್ಲಿಯೂ ಸಂವಹನ ನಡೆಸಬಹುದು.

ಇಲ್ಲ. ಇತರ ಯಾವುದೇ ಮಾತಿನ ಭಾಷೆಗಳಂತೆ ಪ್ರದೇಶ, ಭಾಷೆ ಮತ್ತು ಸಂಸ್ಕೃತಿಯನ್ನು ಆಧರಿಸಿ ಬದಲಾಗುತ್ತದೆ. ಪ್ರತೀ ದೇಶ ಅಥವಾ ಭಾಷೆ ತನ್ನದೇ ಆದ ಸಂಜ್ಞಾಭಾಷೆಯನ್ನು ಹೊಂದಿರುತ್ತದೆ.

ಈ ಎಲ್ಲ ಸತ್ಯಾಂಶಗಳು ಸಂಜ್ಞಾಭಾಷೆಯ ಪ್ರಾಮುಖ್ಯವನ್ನು ತಿಳಿಸುತ್ತವೆ. ಜನಸಾಮಾನ್ಯರ ನಡುವೆ ಸಂಜ್ಞಾಭಾಷೆ ಮತ್ತು ದೈನಿಕ ಬದುಕಿನಲ್ಲಿ ಅದರ ಬಳಕೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಹೆಚ್ಚು ಹೆಚ್ಚು ಪ್ರಚಾರ ಮತ್ತು ಪ್ರವರ್ಧನಕಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಅಡೆತಡೆಯಿಲ್ಲದ ಸಂವಹನ ಪರಿಸರವನ್ನು ಸ್ಥಾಪಿಸುವುದಕ್ಕಾಗಿ ಎಲ್ಲ ಯುವಜನರು ಇತರ ಭಾಷೆಗಳನ್ನು ಕಲಿಯಲು ತೋರುವಷ್ಟೇ ಉತ್ಸಾಹವನ್ನು ಸಂಜ್ಞಾಭಾಷೆಯ ಕಲಿಕೆಗೂ ಪ್ರದರ್ಶಿಸಬೇಕಾಗಿದೆ. ಇದು ಪ್ರಸ್ತುತ ಕಾಲಘಟ್ಟದ ಅಗತ್ಯವಾಗಿದ್ದು, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ವೃತ್ತಿಪರರು ತುರ್ತು ಸನ್ನಿವೇಶಗಳಲ್ಲಿ ವೈಯಕ್ತಿಕ ಅಗತ್ಯಗಳನ್ನು ಪೂರೈಸುವುದಕ್ಕೆ ಸಹಾಯವಾಗುವಂತೆ ಸಂಜ್ಞಾಭಾಷೆಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವುದಕ್ಕೆ ಅನುವಾಗುವಂತೆ ಇದರ ಪ್ರಾಥಮಿಕ ಜ್ಞಾನವನ್ನಾದರೂ ಹೊಂದಿರಬೇಕಾಗಿದೆ.

ಶುಭಗಂಗಾ ಧ್ರುವಕುಮಾರ್‌, ಅಸಿಸ್ಟೆಂಟ್‌ ಪ್ರೊಫೆಸರ್‌

-ಡಾ| ರಾಕೇಶ್‌ ಚೌಕಳ್ಳಿ ವೀರಭದ್ರಪ್ಪ, ಅಸಿಸ್ಟೆಂಟ್‌ ಪ್ರೊಫೆಸರ್‌, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next