ನವದೆಹಲಿ: ತಿಹಾರ್ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಸಾಮಾನ್ಯವಾಗಿವೆ. ಲೈಂಗಿಕ ಬಯಕೆ ತೀರಿಸಿಕೊಳ್ಳಲು ಬಂಧಿತ ವಿಐಪಿಗಳಿಗೆ ವ್ಯವಸ್ಥೆ ಮಾಡಿಕೊಡುವ ಬಗ್ಗೆ ತಮಗೆ ತಿಳಿದಿದೆ ಎಂದು ತಿಹಾರ್ ಜೈಲಿನ ಮಾಜಿ ಕಾನೂನು ಅಧಿಕಾರಿ ಸುನೀಲ್ ಗುಪ್ತಾ ಹೇಳಿದ್ದಾರೆ.
ಬಂಧಿತ ದೆಹಲಿ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ, ಹೊರಗಿನ ಆಹಾರವನ್ನು ಸೇವಿಸುತ್ತಿರುವ ವಿಡಿಯೋ ವೈರಲ್ ಆದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ಸುನೀಲ್ ಗುಪ್ತಾ ಅವರು 1981ರಿಂದ 2016ರವರೆಗೆ ತಿಹಾರ್ ಜೈಲಿನಲ್ಲಿ ಕಾನೂನು ಅಧಿಕಾರಿ ಮತ್ತು ವಕ್ತಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
“ಜೈಲಿನ ಅಧಿಕಾರಿಗಳು ಮತ್ತು ಸಹ ಕೈದಿಗಳಿಂದ ಬಂಧಿತ ವಿಐಪಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಮತ್ತು ಲೈಂಗಿಕ ಸೇವೆಯ ವ್ಯವಸ್ಥೆಯು ದೇಶದ ಅತಿದೊಡ್ಡ ಕಾರಾಗೃಹವಾದ ತಿಹಾರ್ ಜೈಲಿನ ಆವರಣದಲ್ಲೇ ಸಿಗುತ್ತವೆ,’ ಎಂದು ಸುನೀಲ್ ಗುಪ್ತಾ ತಿಳಿಸಿದ್ದಾರೆ.
ಸುನೀಲ್ ಗುಪ್ತಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ತಿಹಾರ್ ಜೈಲಿನ ವಕ್ತಾರರಾದ ಧೀರಜ್ ಮಥುರ್ ನಿರಾಕರಿಸಿದ್ದಾರೆ.
ತಿಹಾರ್ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರು ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಹಾಗೂ ಹಸಿ ತರಕಾರಿ, ತಾಜಾ ಹಣ್ಣುಗಳು ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.