Advertisement
ಇದರಿಂದಾಗಿ ರಾಜ್ಯದ ಹತ್ತು ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿಯ ಆಳಕ್ಕೆ ಕೊಳವೆಬಾವಿ ರೀತಿಯ ಬಾವಿ ತೋಡಿ ಭೂಗರ್ಭದ 3ರಿಂದ 8 ಸಾವಿರ ಮೀಟರ್ ಆಳದಲ್ಲಿರುವ ಜಲನಾಡಿಗಳಿಂದ ನೀರು ಮೇಲೆತ್ತಿ ಅದನ್ನು ಬಳಸಿಕೊಳ್ಳುವ ಪಾತಾಳ ಗಂಗೆ ಯೋಜನೆ ಜಾರಿಯಾಗುವುದು ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಭೆಯಲ್ಲಿ ಎಲ್ಲಾ ಆಯಾಮಗಳಿಂದ ಯೋಜನೆ ಬಗ್ಗೆ ಮುಕ್ತವಾಗಿ ಚರ್ಚಿಸಲಾಗಿದೆ. ಕೆಲವರು ತಂತ್ರಜ್ಞಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಪರಿಸರಕ್ಕೆ ಹಾನಿಕಾರಕ ಮಾತ್ರವಲ್ಲ, ನೀರು ಕೂಡ ಕುಡಿಯಲು ಯೋಗ್ಯವಲ್ಲ. ಆದ್ದರಿಂದ ಯೋಜನೆ ಬೇಡವೇ ಬೇಡ ಎಂಬ ವಾದ ಮಂಡಿಸಿದ್ದಾರೆ. ಪರಿಸರ ಮತ್ತು ಆರ್ಥಿಕ ಪರಿಣಾಮಗಳನ್ನು ಅಧ್ಯಯನ ಮಾಡಿ ತೀರ್ಮಾನ ಕೈಗೊಳ್ಳಬೇಕು ಎಂದು ಕೆಲವರು ಸಲಹೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
Related Articles
Advertisement
ಯೋಜನೆಗೆ ಸಭೆಯಲ್ಲಿ ತೀವ್ರ ವಿರೋಧಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಪಾತಾಳ ಗಂಗೆ ಯೋಜನೆ ಬಗ್ಗೆ ಪರಿಸರವಾದಿಗಳು, ಭೂಗರ್ಭ ಶಾಸ್ತ್ರಜ್ಞರು, ಕೆಲವು ವಿಜ್ಞಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಾಟರ್ ಕ್ವೆಸ್ಟ್ ಎಂಬ ಸಂಸ್ಥೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಅವರು, ಯೋಜನೆ ತೀರಾ ಅವೈಜ್ಞಾನಿಕ ಎಂದು ಆರೋಪಿಸಿದರು ಎನ್ನಲಾಗಿದೆ. ಸಭೆಗೆ ತಂತ್ರಜ್ಞಾನ ಒದಗಿಸುವ ಕಂಪೆನಿಯವರನ್ನೂ ಕರೆಸಬೇಕಿತ್ತು. ಸರ್ಕಾರ ಅವರ ಪರ ವಾದ ಮಂಡಿಸುವುದು ಎಷ್ಟು ಸರಿ. ಮೈಲಾಗಿ ವಾಟರ್ ಕ್ವೆಸ್ಟ್ ಎಂಬ ಕಂಪೆನಿ ಅಮೆರಿಕಾ ಮೂಲದ್ದಲ್ಲ, ಫ್ರಾನ್ಸ್ ಮೂಲದ್ದು. ದೇಶದಲ್ಲಿ ಸ್ಟಾರ್ಟ್‌ಅಪ್ ಕಂಪನಿ ಸ್ಥಾಪಿಸಿದ ಇಬ್ಬರು ಆ ಕಂಪೆನಿಯ ನೆರವಿನೊಂದಿಗೆ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ. ಆ ಕಂಪೆನಿಯಲ್ಲಿ ವಿಜ್ಞಾನಿಗಳೇ ಇಲ್ಲ. ಹೀಗಿರುವಾಗ ತಜ್ಞರ ಅಭಿಪ್ರಾಯವಿಲ್ಲದೆ ಹೇಗೆ ಯೋಜನೆ ಜಾರಿಗೊಳಿಸಲು ಒಪ್ಪಿಕೊಂಡಿರಿ ಎಂದು ಸಚಿವರನ್ನು ಪ್ರಶ್ನಿಸಿದರು ಎಂದು ತಿಳಿದುಬಂದಿದೆ. ಈ ಕಾರಣದಿಂದಾಗಿ ನಿಮ್ಮ ಅಭಿಪ್ರಾಯವನ್ನು ಕಂಪೆನಿ ಅಧಿಕಾರಿಗಳ ಗಮನಕ್ಕೆ ತಂದು ಅವರಿಂದ ಸಮರ್ಪಕ ಉತ್ತರ ಪಡೆಯಲಾಗುವುದು. ಯೋಜನೆ ವೈಜ್ಞಾನಿಕವಾದರೆ ಮಾತ್ರ ಅದನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಆದರೆ, ಇದಕ್ಕೆ ಒಪ್ಪದ ಪರಿಸರವಾದಿಗಳು ಮತ್ತು ಭೂಗರ್ಭ ಶಾಸ್ತ್ರಜ್ಞರು, ಕಂಪೆನಿಯವರೊಂದಿಗೆ ಚರ್ಚಿಸುವಾಗ ನಮ್ಮನ್ನೂ ಕರೆಸಿ ಎಂದು ಒತ್ತಾಯಿಸಿದರು ಎಂದು ಹೇಳಲಾಗಿದೆ. ಪಾತಾಳಗಂಗೆ ಯೋಜನೆ ಕೇಂದ್ರದ ಸಲಹೆ
ವಿಜ್ಞಾನಿ ಮಾಶಾಳ್ಕರ್ ಎಂಬುವರು ಭೂಗರ್ಭದಲ್ಲಿರುವ ಮ್ಯಾಗ್ನೆಟ್ ರೀಜನ್‌ನಲ್ಲಿರುವ ನೀರನ್ನು ಬಳಸಿಕೊಳ್ಳಲು ಪ್ರಯತ್ನ ಮಾಡಬಹುದು ಎಂದು ನೀಡಿದ್ದ ಸಲಹೆಯಂತೆ ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗ 26 ರಾಜ್ಯಗಳಿಗೆ ಈ ಕುರಿತು ಮಾಹಿತಿ ನೀಡಿತ್ತು. ಅದರ ಆಧಾರದ ಮೇಲೆ ಪಾತಾಳಗಂಗೆ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಕೊಳವೆ ಬಾವಿ ಕೊರೆದು ಮ್ಯಾಗ್ನೆಟಿಕ್ ರೀಜನ್‌ನಲ್ಲಿರುವ ನೀರು ಮೇಲಕ್ಕೆತ್ತಿ ಬಳಸಿಕೊಳ್ಳಲು ಮೂರು ಕೊಳವೆಬಾವಿ ಕೊರೆಯುವ ಸಲುವಾಗಿ ಆರ್ಥಿಕ ನೆರವು ನೀಡುವ ಬಗ್ಗೆಯೂ ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗ ಹೇಳಿತ್ತು ಎಂದು ಸಚಿವರು ತಿಳಿಸಿದರು. 26 ರಾಜ್ಯಗಳ ಪೈಕಿ ಇತರೆ ರಾಜ್ಯಗಳು ಒಪ್ಪದೇ ಇದ್ದರೂ ಕರ್ನಾಟಕ ಮಾತ್ರ ಒಪ್ಪಿಗೆ ನೀಡಿದ್ದೇಕೆ ಎಂಬ ಪ್ರಶ್ನೆಗೆ, ಇತರೆ ರಾಜ್ಯಗಳ ವಿಚಾರ ನಮಗೆ ಗೊತ್ತಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲದಿಂದ ನೀರಿಗೆ ತೀವ್ರ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಗದಗ ಜಿಲ್ಲೆಯ ಬೆಳವಡಿ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ತುಮಕೂರು ಜಿಲ್ಲೆಯ ಪಾವಗಡ ಮತ್ತು ಕಲಬುರಗಿ ಜಿಲ್ಲೆಯ ಆಳಂದಗಳಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು ಎಂದು ಹೇಳಿದರು.