Advertisement

ಹಣದುಬ್ಬರ: ಜನಸಾಮಾನ್ಯರಿಗೆ ಹೊರೆಯಾದ ಆರ್ಥಿಕ ಕಗ್ಗಂಟು

01:41 AM Jun 28, 2021 | Team Udayavani |

ಕೊರೊನಾದಿಂದಾಗಿ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನ ಆರ್ಥಿಕತೆಯೇ ಕುಸಿದು ಹೋಗಿದೆ. ದೇಶದ ಆರ್ಥಿಕತೆ ಅಡಕತ್ತರಿಗೆ ಸಿಲುಕಿದ್ದು ಆದಾಯವೇ ಇಲ್ಲದೆ ಬೇಡಿಕೆ ಹೆಚ್ಚುತ್ತಿದೆ. ಯಾವುದೇ ಕ್ಲಿಷ್ಟಕರ ಸಮಸ್ಯೆಗಳಿಗೆ ನಿರ್ದಿಷ್ಟ ಹಾಗೂ ನಿರ್ಣಾಯಕ ಪರಿಹಾರಗಳನ್ನು ಕೈಗೊಳ್ಳಲು ಈ ವೈರಸ್‌ ಅಡ ಚಣೆಯುಂಟು ಮಾಡುತ್ತಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳು ಕಡಿಮೆಯಾಗಿ ಸರಕಾರದ ಆದಾಯದಲ್ಲಿ ಖೋತಾ ಆಗಿದೆಯಾದರೂ ವೆಚ್ಚ ಹೆಚ್ಚಾಗಿದೆ. ಆರೋಗ್ಯ ಬಿಕ್ಕಟ್ಟು ಆರ್ಥಿಕ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು ಸರಕಾರದ ಬೊಕ್ಕಸ ಬರಿದಾಗಿದೆ. ಸರಕಾರಕ್ಕೆ ಹಕ್ಕು ಬಾಧ್ಯತೆಗಳ ಅರಿವಿದ್ದರೂ ದೃಢ ನಿಷ್ಠೆಯಿದ್ದರೂ ಕಾರ್ಯಾನುಷ್ಠಾನ ಕಷ್ಟವಾಗುತ್ತಿದೆ.

Advertisement

ಹಣದುಬ್ಬರ ಹಾಗೂ ಲಾಕ್‌ಡೌನ್‌ನ ಪಶ್ಚಾತ್‌ ಕಂಪನಗಳು ಸೇರಿಕೊಂಡು ಸರಕಾರಕ್ಕೆ ಸರಣಿ ಸವಾಲುಗಳು ಎದುರಾಗಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯಲ್ಲಿ ಉಂಟಾಗುವ ಏರಿಕೆಯನ್ನು ಹಣದುಬ್ಬರ ಎನ್ನುವುದು ವಾಡಿಕೆ. ಆದರೆ ಈ ಹಣದುಬ್ಬರವೆಂಬ ವಿಷಚಕ್ರ ಎಲ್ಲ ವಲಯಗಳನ್ನು ಬಾಧಿಸುತ್ತದೆ. ಇದೀಗ ಹಣದುಬ್ಬರ ದೊಂದಿಗೆ ಅರ್ಥಿಕ ಹಿಂಜರಿಕೆ ಸನ್ನಿವೇಶ ಎದುರಾಗಿದೆ. ಇವೆರಡೂ ಒಟ್ಟೊಟ್ಟಾಗಿ ಸಾಗುವ ಪ್ರಕ್ರಿಯೆಗೆ ಹಿಂಜ ರಿತದ ಹಣದುಬ್ಬರ ಎನ್ನಲಾಗುತ್ತದೆ. ಹಣದುಬ್ಬರ ದೊಂದಿಗೆ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿದ್ದರೆ ಹಣದುಬ್ಬರದೊಂದಿಗಿನ ಆರ್ಥಿಕ ಹಿನ್ನಡೆ ಎನ್ನಲಾಗು ತ್ತದೆ. ಕೊರೊನಾದಿಂದುಟಾದ ಉತ್ಪಾದನ ಕೊರತೆ ಯಿಂದಾಗಿ ನಿರುದ್ಯೋಗ ಸಮಸ್ಯೆಯು ತಾರಕ ಕ್ಕೇರಿದೆ. ಇದು ಆರ್ಥಿಕಾಭಿವೃದ್ದಿಯ ಮೇಲೆ ದುಷ್ಪರಿಣಾಮವನ್ನು ಬೀರಿ ಬಡತನ ವ್ಯಾಪಿಸುತ್ತದೆ.

ಸರಕು ಮತ್ತು ಇಂಧನ ಬೆಲೆಯೇರಿಕೆಯ ಹಿನ್ನೆಲೆಯಿಂದ ಮೇ ತಿಂಗಳ ಹಣದುಬ್ಬರ ಶೇ. 12.9ಕ್ಕೆ ಏರಿದೆ. ಸಗಟು ಮತ್ತು ರಿಟೇಲ್‌ ಹಣದುಬ್ಬರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ದೇಶದಲ್ಲಿ ನಿರಂತರವಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಲೇ ಸಾಗಿದೆ. ಇನ್ನೊಂದೆಡೆ ಲಾಕ್‌ಡೌನ್‌ನಿಂದ ಸ್ಥಗಿತಗೊಂಡ ಆರ್ಥಿಕ ಚಟು ವಟಿಕೆಗಳಿಂದಾಗಿ ಜನರ ಆದಾಯ ಇಳಿಮುಖ ವಾಗಿದೆ. ಸಾಲದ ಹೊರೆ ಜನರ ಹೆಗಲೇರಿದೆ. ಆರ್‌ಬಿಐ ನ ಹಣಕಾಸು ನೀತಿ ತೈಲ ಬೆಲೆ ಇಳಿಕೆಯನ್ನು ಪ್ರತಿಪಾದಿಸಿದೆ. ಆರ್‌ಬಿಐ ತನ್ನ ಪರಿಧಿಯಲ್ಲಿನ ಎಲ್ಲ ಪ್ರಯತ್ನಗಳನ್ನು ಮಾಡಿದೆಯಾದರೂ ಆರ್ಥಿಕ ದುರ್ಗತಿಯ ಕಾರಣದಿಂದಾಗಿ ಸಂಕೀರ್ಣ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಭಾರತೀಯ ಅರ್ಥವ್ಯವಸ್ಥೆಯ ನಿಗಾ ಕೇಂದ್ರದ (ಸಿಎಂಇಐ) ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಪ್ರಮಾಣ ಗ್ರಾಮೀಣ ಭಾಗದಲ್ಲಿ ಶೇ. 8.57 ಹಾಗೂ ನಗರ ಪ್ರದೇಶಗಳಲ್ಲಿ ಶೇ. 11.42 ಕ್ಕೆ ಏರಿಕೆಯಾಗಿದೆ. ಆದಾಯವಿಲ್ಲದ ಕಾರಣ ಸರಕು ಮತ್ತು ಸೇವೆಗಳ ಬೇಡಿಕೆ ಕಡಿಮೆಯಾಗಿದೆ. ದುಡಿಯುವ ವರ್ಗದ ಜನ ತಮ್ಮ ಆದಾಯ ಮೂಲವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ದಿನಸಿ, ತರಕಾರಿ ಸಹಿತ ಅಗತ್ಯ ವಸ್ತುಗಳ ಬೆಲೆ ಗಗನಮುಖೀಯಾಗಿದೆ.

ಜನಸಾಮಾನ್ಯರು ಒಂದೆಡೆ ಆದಾಯವಿಲ್ಲದಿದ್ದರೆ ಇನ್ನೊಂದೆಡೆ ಖರ್ಚು ಹೆಚ್ಚಾಗಿ ಅಸಹನೀಯ ಬದುಕು ಸಾಗಿಸುವಂತಾಗಿದೆ. ಬೆಲೆ ನಿಯಂತ್ರಣಕ್ಕೆ ಬರಬೇಕಾದರೆ ತೈಲೋತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಡಿತಗೊಳಿಸಬೇಕು ಮತ್ತು ಸಾರ್ವಜನಿಕ ವಲಯದ ತೈಲ ಕಂಪೆನಿಗಳು ಲಾಭಾಂಶ ಕಡಿಮೆಗೊಳಿಸಬೇಕು. ಯಾವ ದೇಶದಲ್ಲಿಯೂ ಯಾವುದೇ ಸರಕು ಮತ್ತು ಸಾಮಗ್ರಿಗೆ ಶೇ. 35 ಮೂಲ ಬೆಲೆ ಮತ್ತು ಶೇ. 65 ತೆರಿಗೆ ಎಂಬ ವಿಚಿತ್ರ ಸನ್ನಿವೇಶವಿಲ್ಲ. ಗ್ರಾಹಕರು ತೈಲೋತ್ಪನ್ನಗಳಿಗೆ ನೀಡುತ್ತಿರುವ 100 ರೂ. ಗಳಲ್ಲಿ 35 ರೂ. ಮೂಲಬೆಲೆಯಾಗಿದ್ದರೆ ಕೇಂದ್ರ ತೆರಿಗೆ 34 ರೂ. ಮತ್ತು ರಾಜ್ಯ ತೆರಿಗೆ 25 ರೂ. ಗಳಾಗಿವೆ. ದೇಶದಲ್ಲಿ ತೈಲ ಬೆಲೆ ಏರಿಕೆಗೆ ಅಂತರಾಷ್ಟ್ರೀಯ ತೈಲ ದರ ಏರಿಕೆಯ ನೆಪವೊಡ್ಡುವುದು ತರವಲ್ಲ.

Advertisement

ಹಾಗೆಂದು ಸರಕಾರಕ್ಕೂ ಪೆಟ್ರೊಲಿಯಂ ಉತ್ಪಾ ದನೆಗಳ ತೆರಿಗೆಯ ವಿಚಾರದಲ್ಲಿ ಅಪಾರ ಕಾಳಜಿ ಮತ್ತು ಆತಂಕ ಇದ್ದೇ ಇದೆ. ಸದ್ಯ ದೇಶದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಆದರೆ ವೆಚ್ಚ ಮಾತ್ರ ಹೆಚ್ಚಾಗಿದೆ, ಸರಕಾರ ಸಾಲ ಮಾಡಬೇಕೆಂದರೆ ಹಿಂದಿನ ಕೆಲವು ವರ್ಷಗಳಲ್ಲಿ ಸರಕಾರ ಮಾಡಿರುವ ಸಾಲ ಮತ್ತು ಅದರ ಬಡ್ಡಿಯನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಾಗಿಲ್ಲ. ಜಿಎಸ್‌ಟಿ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ತೆರಿಗೆ ಶೇ. 28 ಆಗಿರುವುದರಿಂದ ತೈಲೋ ತ್ಪನ್ನಗಳನ್ನು ಈ ವ್ಯಾಪ್ತಿಗೆ ತರಲಾಗುವುದಿಲ್ಲ. ಈಗಿನ ತೆರಿಗೆಯು ಇದರ ಎರಡರಷ್ಟಿದೆ. ಸರಕಾರ ಸಾಲ ಮಾಡ ಬಹುದು, ತಪ್ಪಿಲ್ಲ, ಸಾಲ ಮೀರಿದರೆ ಅಂತಾ ರಾಷ್ಟ್ರೀಯ ಏಜೆನ್ಸಿಗಳು ಭಾರತದ ಕ್ರೆಡಿಟ್‌ ರೇಟಿಂಗ್ಸ್‌ ಅನ್ನು ಕಡಿಮೆ ಮಾಡುತ್ತವೆ. ತನ್ಮೂಲಕ ಭಾರತಕ್ಕೆ ಹರಿದು ಬರುವ ವಿದೇಶೀ ಬಂಡವಾಳವು ಕಡಿಮೆ ಯಾಗುತ್ತದೆ ಮತ್ತು ಉದ್ದಿಮೆಗಳ ಮೇಲೆ ಪರಿಣಾಮ ಬೀರಿ ನಿರುದ್ಯೋಗ ಇನ್ನಷ್ಟು ಹೆಚ್ಚಾಗುತ್ತದೆ.

ಪೆಟ್ರೋಲ್‌ ತೆರಿಗೆಯನ್ನು ಕಡಿಮೆಗೊಳಿಸಿ, ನಿಯಂತ್ರಿಸಿ ಸರಕಾರಿ ಖಜಾನೆಯನ್ನು ಸರಿದೂಗಿಸಲು ಆಮದು ಮತ್ತು ರಫ್ತುಗಳಲ್ಲಿನ ಕಠಿನ ನಿರ್ಧಾರಗಳು, ಸಾರ್ವಜನಿಕ ಖರ್ಚುವೆಚ್ಚಗಳ ನಿಯಂತ್ರಣ, ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಕೆಲವು ನೀತಿ ನಿರೂಪಣ ನಿರ್ಣಯಗಳ ಅಗತ್ಯವಿದೆ. ಭಾರೀ ಲಾಭ ಗಳಿಸಿದ ಕೈಗಾರಿಕೆಗಳಿಗೆ ಮತ್ತು ಅತೀವ ಆದಾಯದ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಬಹುದು. ಅನುತ್ಪಾದಕ ಸಾರ್ವಜನಿಕ ಖರ್ಚನ್ನು ತಪ್ಪಿಸಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಹಣದುಬ್ಬರ ನಿಯಂತ್ರಿಸಿ ಜನತೆಯ ಬದುಕನ್ನು ಸಹನೀಯಗೊಳಿಸಲು ಸರ ಕಾರ ದಿಟ್ಟ ಕ್ರಮ ಕೈಗೊಳ್ಳಲೇಬೇಕು.

ಜಗದ್ವಿಖ್ಯಾತ ರೇಟಿಂಗ್‌ ಸಂಸ್ಥೆಗಳು 2021-22ರ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೆ. 10 ರಿಂದ 12 ಎಂದು ಅಂದಾಜಿಸಿವೆ. ಇದನ್ನು ಆರ್‌ಬಿಐ ಸಮರ್ಥಿಸಿಕೊಳ್ಳುವ ವಿಶ್ವಾಸವಿಲ್ಲದೆ ಶೇ. 9.5ಕ್ಕೆ ಇಳಿಸಿತ್ತು. ಕೊರೊನಾ ಮೂರನೆಯ ಅಲೆಯ ತೀವ್ರತೆ, ಆತಂಕ ಮತ್ತು ಭಯ ಎಲ್ಲೆಡೆ ಮನೆ ಮಾಡಿದೆ. ಇದೀಗ ವಿಶ್ವಬ್ಯಾಂಕ್‌ ಭಾರತ 2021-21ರ ಬೆಳವಣಿಗೆಯನ್ನು ಶೇ. 10.1ರ ಅಂದಾಜನ್ನು ಶೇ. 8.3ಕ್ಕೆ ಇಳಿಸಿದೆ. ಐಸಿಆರ್‌ಎ ಕೂಡಾ ಶೇ. 8.5 ಎಂದು ಹೇಳಿದೆ. ಎಪ್ರಿಲ್‌-ಮೇ ತಿಂಗಳ ಲಾಕ್‌ಡೌನ್‌ ಇದಕ್ಕೆ ಕಾರಣ. ಸಮೀಕ್ಷೆಗಳು ಏನೇ ಹೇಳಿದರೂ ಕೊರೊನಾ ನಿರೋಧಕ ಲಸಿಕೆಯ ತುರ್ತು ವಿತರಣೆಯ ಮೇಲೆ ಆರ್ಥಿಕ ಚಟುವಟಿಕೆಗಳು ನಿಂತಿವೆ. ಕೇಂದ್ರೀಕೃತ ಲಸಿಕೆ ವಿತರಣೆ ಎಲ್ಲೆಡೆ ನಡೆಯುತ್ತಿರುವ ಪ್ರಾಮಾಣಿಕ ಪ್ರಯತ್ನಗಳು ಸಂಭವನೀಯ ಅಲೆಗಳ ಹೊಯ್ದಾಟ ವನ್ನು ನಿಲ್ಲಿಸಬಹುದು. ಸಾರ್ವಜನಿಕ ಕೋವಿಡ್‌ ಶಿಷ್ಟಾಚಾರ ಪಾಲನೆ ಮತ್ತು ಕಾಳಜಿ ಪ್ರಾಮುಖ್ಯ.

ಇದೀಗ ಬೇಡಿಕೆ ಮತ್ತು ಉತ್ಪಾದನೆಗಳೆರಡೂ ತಗ್ಗಿವೆ. ಸ್ವದೇಶಿ ಉತ್ಪನ್ನ ಪ್ರಮಾಣ ಕುಸಿದಿದೆ. ದೇಶವು ಬಿಕ್ಕಟ್ಟಿನ ಅನಂತರದ ಸಂದರ್ಭದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹೂಡಿಕೆಗಿಂತಲೂ ಮಿಗಿಲಾದುದು ಬೇಡಿಕೆ. ಆದರೆ ಆರ್ಥಿಕ ಸುಸ್ಥಿತಿಗೆ ಹೂಡಿಕೆ ಯಿಂದಾಗುವ ಹೆಚ್ಚಳವು ದೃಢವಾಗಿ ಸ್ಥಿರತೆಯನ್ನು ಕಾಪಾಡಿ ಬೇಡಿಕೆ ಹೆಚ್ಚಾಗುವುದು ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗುತ್ತದೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next