Advertisement

ನಡುಗಡ್ಡೆಯಂತಾದ ಬರದ್ವಾಡದಲ್ಲಿ ಸಾಂಕ್ರಮಿಕ ರೋಗ ಭೀತಿ

09:37 AM Aug 13, 2019 | Team Udayavani |

ಹುಬ್ಬಳ್ಳಿ: ಪ್ರವಾಹದಿಂದ ನಡುಗಡ್ಡೆಯಂತಾಗಿದ್ದ ಬರದ್ವಾಡ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದ್ದು, ತುರ್ತು ಸಂದರ್ಭದಲ್ಲಿ ಗ್ರಾಮದಿಂದ ಹೊರಗಡೆ ಹೋಗಲು ಸಂಪರ್ಕ ರಸ್ತೆಯೂ ಇಲ್ಲದಂತಾಗಿದೆ. ಎಲ್ಲ ಸೌಲಭ್ಯಗಳಿದ್ದರೂ ಮಳೆರಾಯನ ಅರ್ಭಟಕ್ಕೆ ಎಲ್ಲವೂ ನೀರು ಪಾಲಾಗಿವೆ.

Advertisement

ಪ್ರತ್ಯೇಕ ಗ್ರಾಪಂಗೆ ಒತ್ತಾಯಿಸಿ ಹೋರಾಟ ಕೈಗೊಂಡು ಗ್ರಾಪಂ ಅನುದಾನವನ್ನೇ ಧಿಕ್ಕರಿಸಿರುವ ಕುಂದಗೊಳ ತಾಲೂಕಿನ ಗ್ರಾಮದಲ್ಲಿ ಪ್ರಮುಖವಾಗಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಪಂ ಮೂಲಕ ಬರುವ ಯೋಜನೆ ಸೇರಿದಂತೆ ಇತರೆ ಯಾವುದೇ ಅನುದಾನ ಬಳಕೆಗೆ ಅಸಹಕಾರ ತೋರಿದ್ದಾರೆ. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ಪ್ರಮುಖ ರಸ್ತೆಯಿಂದ ಹಿಡಿದು, ಓಣಿಯ ರಸ್ತೆಗಳು ಕೆಸರುಗದ್ದೆಯಂತಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲ ನೀರು ನಿಂತಿದೆ. ಪರಿಣಾಮ ಸಾಂಕ್ರಾಮಿಕ ರೋಗಗಳ ಭೀತಿ ಗ್ರಾಮಸ್ಥರನ್ನು ಆವರಿಸಿದ್ದು, ಬಡವನ ಸಿಟ್ಟು ದವಡೆಗೆ ಮೂಲ ಎಂಬಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.

ಇದ್ದೂ ಇಲ್ಲದ ಪರಿಸ್ಥಿತಿ: ಕುಡಿಯುವ ನೀರಿನ ಪೈಪ್‌ಗ್ಳು ದೊಡ್ಡಹಳ್ಳದ ಪಾಲಾಗಿವೆ. ಇದರಿಂದ ಗ್ರಾಮದ ಜನರು ಕುಡಿಯುವ ನೀರಿಗೂ ಸಮಸ್ಯೆ ಅನುಭವಿಸುವಂತಾಗಿದೆ. 2 ಕಿಮೀ ದೂರದಿಂದ ಕುಡಿಯುವ ನೀರು ಹೊತ್ತು ತರುವಂತಾಗಿದೆ. ಸಂಪರ್ಕ ರಸ್ತೆ ಇಲ್ಲದ ಪರಿಣಾಮ ಆಸ್ಪತ್ರೆಗೆ ಹೋಗುವುದು ಕಷ್ಟವಾಗಿದೆ. ಶಾಲೆ ಶಿಕ್ಷಕರು, ಬ್ಯಾಂಕ್‌ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ಈ ಗ್ರಾಮಕ್ಕೆ ಬರುವುದಾದರೂ ಹೇಗೆ ಎನ್ನುವಂತಾಗಿದೆ. ನೆರೆ ಸಂದರ್ಭದಲ್ಲಿ ಸಿಬ್ಬಂದಿಯನ್ನು ಗ್ರಾಮಸ್ಥರೇ ಹಳ್ಳ ದಾಟಿಸಿದ್ದಾರೆ. ಇಲ್ಲಿನ ಪರಿಸ್ಥಿತಿ ಕಂಡು ಗ್ರಾಮಕ್ಕೆ ಯಾರೂ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮದ ನಿವಾಸಿ ರವಿಕುಮಾರ.

ಹಳೆಯದನ್ನು ಕೆಡಗಾಯ್ತು, ಹೊಸತು ಮುಗಿಯಲಿಲ್ಲ: ಗ್ರಾಮದ ಬಳಿಯಿರುವ ದೊಡ್ಡ ಹಳ್ಳಕ್ಕೆ ಹೊಸ ಸೇತುವೆ ನಿರ್ಮಾಣಕ್ಕೆ ಹಳೆಯ ಸೇತುವೆ ಕೆಡವಲಾಗಿದೆ. ಆದರೆ, 8 ತಿಂಗಳಿಂದ ಹೊಸ ಸೇತುವೆ ಕಾಮಗಾರಿ ಕುಂಟುತ್ತ ಸಾಗಿದ್ದು ಇನ್ನೂ ಮುಗಿದಿಲ್ಲ. ಪಕ್ಕದಲ್ಲಿ ರ್ಮಿಸಿದ ತಾತ್ಕಾಲಿಕ ರಸ್ತೆ ಸಣ್ಣಪುಟ್ಟ ವಾಹನಗಳ ಓಡಾಟಕ್ಕೆ ಮಾತ್ರ ಪೂರಕವಾಗಿದ್ದು, ಎಂಟು ತಿಂಗಳಿನಿಂದ ಬಸ್‌ ಸಂಚಾರ ಸ್ಥಗಿತಗೊಂಡಿದೆ. ನೆರೆಯಿಂದ ತಾತ್ಕಾಲಿಕ ರಸ್ತೆಯೂ ನೀರು ಪಾಲಾಗಿದೆ. ಇದನ್ನು ದುರಸ್ತಿ ಮಾಡುವ ಗೋಜಿಗೆ ಗುತ್ತಿಗೆದಾರ ಮುಂದಾಗಿಲ್ಲ. ಈ ಕಾರ್ಯದ ಮೇಲ್ವಿಚಾರಣೆ ನಡೆಸಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ.
ರಸ್ತೆಗಳೇ ಶೌಚಾಲಯ!: ಆರು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯ ಹೊರತುಪಡಿಸಿದರೆ ಹೊಸ ಶೌಚಾಲಯಗಳು ನಿರ್ಮಾಣವಾಗಿಲ್ಲ. ಬಯಲು ಶೌಚಕ್ಕೆ ಆಸರೆಯಾಗಿದ್ದ ಹೊಲ, ತೋಟಗಳು ಕೆಸರುಗದ್ದೆಯಂತಾಗಿರುವ ಪರಿಣಾಮ ಗ್ರಾಮದ ರಸ್ತೆಗಳೇ ಶೌಚಾಲಯವಾಗಿವೆ. ಆದರೆ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಶೌಚವೂ ದುಸ್ತರವಾಗಿ ಪರಿಣಮಿಸಿದೆ. ಮಳೆಯಿಂದ ತಿಪ್ಪೆಗುಂಡಿಗಳು ತುಂಬಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ವಿದ್ಯಾರ್ಥಿಗಳಿಗೆ ಸಂಕಷ್ಟ: ದೊಡ್ಡಹಳ್ಳದ ಸೇತುವೆ ಹಾಗೂ ರೊಟ್ಟಿಗೆವಾಡ-ಕೊಡ್ಲಿವಾಡ ಗ್ರಾಮದ ನಡುವಿನ ಈರಣ್ಣ ಹಳ್ಳದ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಪರದಾಡುವಂತಾಗಿದೆ. ಸಂಪರ್ಕ ರಸ್ತೆಗಳು ಇಲ್ಲದ ಪರಿಣಾಮ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಕಾಲ್ನಡಿಗೆ ಅನಿವಾರ್ಯವಾಗಿದೆ. ಹುಬ್ಬಳ್ಳಿಗೆ ಬರುವ ವಿದ್ಯಾರ್ಥಿಗಳು ನಾಲ್ಕೈದು ಕಿಮೀ ನಡೆದುಕೊಂಡು ಈರಣ್ಣ ಹಳ್ಳ ದಾಟಿ ರೊಟ್ಟಿಗೆವಾಡ ಗ್ರಾಮದಲ್ಲಿ ಬಸ್‌ ಹಿಡಿಯಬೇಕು. ಇನ್ನೂ ಹಿರೇಗುಂಜಳ ಗ್ರಾಮದ ಶಾಲೆ-ಕಾಲೇಜಿಗೆ ತೆರಳುವ ಬರದ್ವಾಡ ಗ್ರಾಮದ ವಿದ್ಯಾರ್ಥಿಗಳು ದೊಡ್ಡ ಹಳ್ಳ ದಾಟಿ ಆಸ್ಪತ್ರೆ ಬಳಿ ಬಂದು ಬಸ್‌ ಹತ್ತಬೇಕು. ಮಂಗಳವಾರ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ ಎನ್ನುವ ಆತಂಕ ಪಾಲಕರಲ್ಲಿ ಎದುರಾಗಿದೆ.
6 ವರ್ಷದಿಂದ ಅಭಿವೃದ್ಧಿ ವಂಚಿತ: ಪ್ರತ್ಯೇಕ ಗ್ರಾಪಂಗೆ ಒತ್ತಾಯಿಸಿ ನಡೆಸುತ್ತಿರುವ ಅಸಹಕಾರ ಚಳವಳಿಯಿಂದ ಕಳೆದ ಆರು ವರ್ಷಗಳಿಂದ ಗ್ರಾಮದಲ್ಲಿ ಯಾವೊಂದು ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಗ್ರಾಪಂ ವತಿಯಿಂದ ಕುಡಿಯುವ ನೀರು ಹಾಗೂ ವಿದ್ಯುತ್‌ ದೀಪ ಮಾತ್ರ ಪಡೆಯುತ್ತಿದ್ದಾರೆ. ನರೇಗಾ ಸೇರಿದಂತೆ ಇತರೆ ಯಾವ ಯೋಜನೆಯ ಅನುದಾನ ಗ್ರಾಮದ ಅಭಿವೃದ್ಧಿಗೆ ಬಳಸಲು ಅವಕಾಶ ನೀಡಿಲ್ಲ. ಆರು ವರ್ಷಗಳಿಂದ ನಡೆಯುತ್ತಿರುವ ಈ ಹೋರಾಟದ ಪರಿಣಾಮ ಗ್ರಾಮ ಸಾಕಷ್ಟು ಅಭಿವೃದ್ಧಿಯಿಂದ ವಂಚಿತವಾಗಿದೆ.
ಗ್ರಾಮದ ಅಭಿವೃದ್ಧಿಗೆ ಗ್ರಾಪಂ ಅನುದಾನ ಬಳಕೆಗೆ ಗ್ರಾಮಸ್ಥರಿಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಸಂಪರ್ಕ ರಸ್ತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಆದಷ್ಟು ಬೇಗ ತಾತ್ಕಾಲಿಕ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.•ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಎಂಟು ತಿಂಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಪೂಜೆ ಮಾಡಲಾಗಿದೆ. ಶೇ.10 ಕಾಮಗಾರಿ ಮುಗಿದಿಲ್ಲ. ನಿರ್ಮಾಣ ಕಾರ್ಯ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಎರಡೂ ಭಾಗದಲ್ಲೂ ಸಂಪರ್ಕ ರಸ್ತೆ ಇಲ್ಲದೆ ಜನರು ಬದುಕುವಂತಾಗಿದೆ. ಕನಿಷ್ಠಪಕ್ಷ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿಲ್ಲ.•ಫಕೀರಪ್ಪ ಮಾಡಳ್ಳಿ, ಗ್ರಾಮಸ್ಥ

 

Advertisement

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next