Advertisement

ಸಾಂಕ್ರಾಮಿಕ ರೋಗ ಪತ್ತೆಗೆ ಪುತ್ತೂರಿನಲ್ಲೇ ಬೇಕು ಸೌಲಭ್ಯ

10:31 PM May 20, 2021 | Team Udayavani |

ಪುತ್ತೂರು: ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗ ಪತ್ತೆ ಮಾಡುವ ಎಲಿಸಾ, ಕಾರ್ಡ್‌ ಟೆಸ್ಟ್‌ಗೆ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದಿರುವ ಕಾರಣ ರಕ್ತದ ಮಾದರಿಯನ್ನು ಮಂಗಳೂರಿಗೆ ಕಳುಹಿಸಿ ಫಲಿತಾಂಶಕ್ಕೆ ಕಾಯಬೇಕಾದ ಸ್ಥಿತಿ ಇಲ್ಲಿನದು.

Advertisement

ಪ್ರಸ್ತುತ ಕೋವಿಡ್‌ ಜತೆಗೆ ಅಕಾಲಿಕ ಮಳೆ ಪರಿಣಾಮ ಸಾಂಕ್ರಾಮಿಕ ರೋಗ ಗಳು ವಕ್ಕರಿಸುತ್ತಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರು ರೋಗ ಖಚಿತ ಪಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗೆ ತೆರಳಬೇಕು ಅಥವಾ ಮಂಗಳೂರಿನಿಂದ ಬರುವ ವರದಿಗೆ ಕಾದು ಕೂರಬೇಕಾದ ಪರಿಸ್ಥಿತಿ ಇದೆ.

ಬಹುದಿನದ ಬೇಡಿಕೆ :

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಡ್‌ ಟೆಸ್ಟ್‌ ವ್ಯವಸ್ಥೆಯನ್ನು ಆರಂಭಿಸ ಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿದೆ. ಪುತ್ತೂರು ಉಪವಿಭಾಗದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರು ಈ ಆಸ್ಪತ್ರೆಯನ್ನು ಅವಲಂಬಿಸಿರುವುದರಿಂದ ಫಲಿತಾಂಶವು ತತ್‌ಕ್ಷಣ ದೊರೆತರೆ ಚಿಕಿತ್ಸೆಗೆ ಅನುಕೂಲವಾಗುತ್ತದೆ.

ಪ್ರಸ್ತುತ ಡೆಂಗ್ಯೂ ಜ್ವರದ ಕುರಿತಂತೆ ಆರಂಭಿಕ ರಕ್ತ ಪರೀಕ್ಷೆಯಾದ ಕಾರ್ಡ್‌ ಟೆಸ್ಟ್‌ ವ್ಯವಸ್ಥೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿರುವುದರಿಂದ ಜ್ವರ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಯನ್ನು ಮಾಡಿಸಬೇಕಾಗಿದೆ. ಈ ಪರೀಕ್ಷೆಯ ವೆಚ್ಚ ಬಡವರಿಗೆ ಹೊರೆಯೂ ಆಗಿದೆ. ಇನ್ನಷ್ಟು ನಿಖರ ಮಾಹಿತಿ ಲಭ್ಯವಾಗಬೇಕಾದರೆ ಎಲಿಸಾ ಟೆಸ್ಟ್‌ ಮಾಡಲು ವೈದ್ಯರು ಸೂಚನೆ ನೀಡುತ್ತಾರೆ. ಜ್ವರಪೀಡಿತರಿಂದ ಸಂಗ್ರಹಿಸುವ ರಕ್ತವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು. ಡೆಂಗ್ಯೂ ಖಚಿತ ಪಡಿಸಲು ಮಾಡಲಾಗುವ ಮೂರು ವಿಧಾನದ ಪರೀಕ್ಷೆಗೆ ತಾಲೂಕು ಆಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲ. ಈಗಾಗಲೇ ಕೊವೀಡ್‌ ತಪಾಸಣೆ ಜತೆಗೆ ಜಿಲ್ಲಾಸ್ಪತ್ರೆಯ ಲ್ಯಾಬ್‌ಗಳಿಗೆ ಡೆಂಗ್ಯೂ, ಮಲೇರಿಯಾ ರೋಗದ ರಕ್ತ ಪರೀಕ್ಷೆಯ ತಪಾಸಣೆಯ ಹೊರೆ ಎದುರಾಗಿದ್ದು ಹೀಗಾಗಿ ಫಲಿತಾಂಶ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

Advertisement

ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಾರೆ :

ಶಂಕಿತ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡಲ್ಲಿ ಅಲ್ಲಿ ಯಾವುದೇ ಫಲಿತಾಂಶಗಳು ದೊರೆಯುವುದಿಲ್ಲ. ಕಾರ್ಡ್‌ ಟೆಸ್ಟ್‌, ಎಲಿಸಾ ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ಸಂಗ್ರಹಿಸಿ ಮಂಗಳೂರಿನ ಜಿಲ್ಲಾ ಪ್ರಯೋಗ ಶಾಲೆಗೆ ಕಳುಹಿಸಬೇಕು. ಅಲ್ಲಿಂದ ಫಲಿತಾಂಶ ಬರಲು ಮೂರರಿಂದ ನಾಲ್ಕು ದಿನಗಳ ತನಕ ಕಾಯಬೇಕು.

ಪರೀಕ್ಷಾ ವಿಧಾನ : ಜ್ವರ 2 ದಿನಗಳಲ್ಲಿ ಕಡಿಮೆ ಯಾಗದಿದ್ದರೆ ರಕ್ತ ತಪಾಸಣೆ ಮಾಡಿಸ ಬೇಕು. ಪ್ಲೇಟ್‌ಲೆಟ್‌ ಕೌಂಟ್‌ ಪರೀಕ್ಷೆಯಲ್ಲಿ ವೈದ್ಯರಿಗೆ ರೋಗಿಗೆ ಬಂದಿರುವ ರೋಗದ ಸ್ವರೂಪದ ಮಾಹಿತಿ ಲಭ್ಯವಾಗುತ್ತದೆ. ರಕ್ತಸ್ರಾವ ಅಥವಾ ಇತರ ಯಾವುದೇ ತೀವ್ರ ಲಕ್ಷಣ ಗಳು ಕಂಡು ಬಂದಲ್ಲಿ ರೋಗಿಯನ್ನು ತುರ್ತಾಗಿ ವಿಶೇಷ ಸೌಲಭ್ಯಗಳಿರುವ ಆಸ್ಪತ್ರೆಗೆ ದಾಖಲಿಸಿ ಡೆಂಗ್ಯೂ ರಕ್ತ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಡೆಂಗ್ಯೂ ರೋಗದ ನಿಖರ ಪತ್ತೆಗೆ ಜ್ವರ ಬಂದ 5 ದಿನದ ಒಳಗಾದರೆ ಎನ್‌ಎಸ್‌ಐ ಪರೀಕ್ಷೆ, 5 ದಿನದ ಅನಂತರವಾದರೆ M, IgG, ELISA, RT-PC ಪರೀಕ್ಷೆಗಳು ಮಾಡಲಾಗುತ್ತಿದೆ. ಈ ಸೌಲಭ್ಯಗಳು ಇಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ದೊರಕುತ್ತಿಲ್ಲ.

ಡೆಂಗ್ಯೂ ಸಂಬಂಧಿತ ಎಲಿಸಾ ರಕ್ತ ಪರೀಕ್ಷೆ ಮಂಗಳೂರಿನಲ್ಲಿ ನಡೆಯುತ್ತದೆ. ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಡ್‌ ಟೆಸ್ಟ್‌ ಮಾಡಿಸಬಹುದು. ಸರಕಾರಿ ಆಸ್ಪತ್ರೆಗೆ ಸೌಲಭ್ಯ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಡಾ| ಅಶೋಕ್‌ ಕುಮಾರ್‌ ರೈ,  ತಾಲೂಕು ಆರೋಗ್ಯಾಧಿಕಾರಿ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next