Advertisement

ನೆರೆ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಆತಂಕ

11:30 PM Oct 23, 2019 | Team Udayavani |

ಬೆಂಗಳೂರು: ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ವಿಜಯಪುರ, ಚಿಕ್ಕಮಗಳೂರು, ಕೊಡಗು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತೀವ್ರ ನೆರೆ ಕಾಣಿಸಿಕೊಂಡಿದ್ದು, ಸಂತ್ರಸ್ತರು ಆಶ್ರಯ ಪಡೆದಿರುವ ಕಾಳಜಿ ಕೇಂದ್ರಗಳ ಬಳಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು.

Advertisement

ಜತೆಗೆ, ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ನೆರೆ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಿ ವರದಿ ನೀಡಲು ಇಲಾಖೆಯ ಉತ್ತರ ಕರ್ನಾಟಕ ಭಾಗದ ಪ್ರಾದೇಶಿಕ ಅಪರ ನಿರ್ದೇಶಕರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ನೋಡಲ್‌ ಅಧಿಕಾರಿಗಳು ಕೂಡಲೇ ನೆರೆ ಹಾವಳಿಗೆ ತುತ್ತಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ಸಂಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಬೇಕು.

ಜತೆಗೆ, ಸರ್ವೇಕ್ಷಣ ಘಟಕದಲ್ಲಿ 24/7 ಮಾಹಿತಿ ಕೇಂದ್ರ ಸ್ಥಾಪಿಸಿ, ದೈನಂದಿನ ವರದಿಯನ್ನು ಆರೋಗ್ಯ ಸಚಿವರ ಕಾರ್ಯಾಲಯಕ್ಕೆ ತಲುಪಿಸಬೇಕು ಎಂದು ತಿಳಿಸಲಾಗಿದೆ. ಪ್ರವಾಹ ಪೀಡಿತರಿಗೆ ಚಿಕಿತ್ಸೆಗೆ ಅಗತ್ಯವಾದಷ್ಟು ಔಷಧ ಮತ್ತು ಸಲಕರಣೆಗಳನ್ನು ದಾಸ್ತಾನು ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯ ಅಪರ ನಿರ್ದೇಶಕರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next