ಕೋವಿಡ್ ಸಾಂಕ್ರಾಮಿಕದ ವಿರುದ್ಧ ವಿಶ್ವಾದ್ಯಂತ ಅಗಣಿತ ವೈದ್ಯರು, ಆರೋಗ್ಯ ವಲಯದ ಸಿಬಂದಿ ಹೋರಾಡುತ್ತಿದ್ದಾರೆ. ಬೇಸರದ ಸಂಗತಿಯೆಂದರೆ, ಭಾರತ ಸೇರಿದಂತೆ ಕೋವಿಡ್ ಪೀಡಿತವಾಗಿರುವ ಎಲ್ಲಾ ರಾಷ್ಟ್ರಗಳಲ್ಲೂ ವೈದ್ಯರು, ನರ್ಸ್‌ಗಳು ಮತ್ತು ಇತರ ಆರೋಗ್ಯ ಸಿಬಂದಿಯೂ ಸೋಂಕಿಗೀಡಾಗುತ್ತಿರುವುದು. ಭಾರತದಲ್ಲಿ ವೈದ್ಯರು, ಆರೋಗ್ಯ ಸಿಬಂದಿಯ ಮೇಲೆ ಹಲ್ಲೆಗಳು ವರದಿಯಾಗಿರುವುದರಿಂದ ಕೇಂದ್ರ-ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮವನ್ನೇನೋ ಜರುಗಿಸಿವೆ. ಆದರೆ ಸ್ವಾಸ್ಥ್ಯಕರ್ಮಿಗಳು ಈಗ ಸೋಂಕಿನ ಅಪಾಯ ಎದುರಿಸುತ್ತಿರುವುದರಿಂದ, ಸರಕಾರಗಳಿಗೆ ಬಹುದೊಡ್ಡ ಸವಾಲು ಎದುರಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯೊಂದರಲ್ಲೇ ವೈದ್ಯರು ಸೇರಿದಂತೆ, ಆರೋಗ್ಯ ವಲಯದಲ್ಲಿ ಕೆಲಸ ಮಾಡುವ 250ಕ್ಕೂ ಅಧಿಕ ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಸಂಖ್ಯೆ ಇನ್ನೂ ಅಧಿಕವಿರಬಹುದು ಎನ್ನುವುದೇ ಆತಂಕದ ವಿಷಯ. ಅಧಿಕ ಪ್ರಮಾಣದಲ್ಲಿ ಸ್ವಾಸ್ಥ್ಯ ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿರುವುದರಿಂದ, ಕೆಲವು ಆಸ್ಪತ್ರೆಗಳಲ್ಲಿ ಸಾಮಾನ್ಯ ಸೇವೆಗಳನ್ನು ನಿಲ್ಲಿಸಬೇಕಾದರೆ, ಕೆಲವು ಆಸ್ಪತ್ರೆಗಳನ್ನಂತೂ ಪೂರ್ಣ ಮುಚ್ಚಬೇಕಾಯಿತು. ಎಲ್ಲಕ್ಕಿಂತ ಚಿಂತೆಗೀಡುಮಾಡುವ ಅಂಶವೆಂದರೆ, ಕೊರೊನಾ ಪ್ರಕರಣಗಳಿಲ್ಲದ ವಾರ್ಡ್‌ಗಳಲ್ಲಿ ಕೆಲಸ ಮಾಡುವ ಸಿಬಂದಿಗಳಲ್ಲೂ ಸೋಂಕು ಪತ್ತೆಯಾಗುತ್ತಿರುವುದು. ಇದರಿಂದಾಗಿ, ಉಳಿದ ರೋಗಿಗಳಿಗೂ ಸೋಂಕು ತಗಲುವ ಅಪಾಯ ಅತ್ಯಧಿಕವಿರುತ್ತದೆ.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಹಾಗೂ ಆ ವಿಭಾಗಗಳು ಮತ್ತು ಕೇಂದ್ರಗಳಲ್ಲಿರುವ ಇತರೆ ಸ್ವಾಸ್ಥ್ಯಕರ್ಮಿಗಳಿಗೆ ಸೋಂಕು ತಗಲುವ ಅಪಾಯ ನಿರಂತರವಾಗಿ ಇರುತ್ತದೆ. ಆದರೆ, ಆಸ್ಪತ್ರೆಯ ಗತಿವಿಧಿಗಳು ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ, ಇತರೆ ವಿಭಾಗಗಳಲ್ಲಿ ಹಾಗೂ ಅಲ್ಲಿ ಕೆಲಸ ಮಾಡುವವರಿಗೂ ಸೋಂಕು ಹರಡುವ ಸಾಧ್ಯತೆ ಇದ್ದೇ ಇರುತ್ತದೆ.
ಆದಾಗ್ಯೂ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಸಿಬಂದಿಗೆ ಸುರಕ್ಷತಾ ಪರಿಕರಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆಯಾದರೂ, ಅಭಾವವಂತೂ ದೂರವಾಗಿಲ್ಲ. ಈ ಕಾರಣಕ್ಕಾಗಿಯೇ, ಆರೋಗ್ಯ ಸಿಬಂದಿ ತಮಗೆ ಸುರಕ್ಷಾ ಪರಿಕರಗಳನ್ನು ಕೂಡಲೇ ಒದಗಿಸಿ, ಇಲ್ಲವೇ ಇತರೆ ಸುರಕ್ಷತಾ ವಿಧಾನಗಳನ್ನು ಹೇಳಿ ಎಂದು ಕೇಳುತ್ತಿದ್ದಾರೆ. ಈ ಸ್ಥಿತಿ ಕೇವಲ ದೆಹಲಿಗಷ್ಟೇ ಸೀಮಿತವಾಗಿಲ್ಲ, ದೇಶದ ಬಹುತೇಕ ರಾಜ್ಯಗಳಲ್ಲೂ ಇದೇ ಸ್ಥಿತಿಯಿದೆ.
ಕೋವಿಡ್ ಮಹಾಮಾರಿಯ ಪ್ರಸರಣ ಚಕ್ರವನ್ನು ಮುರಿಯುವುದಕ್ಕಾಗಿ ಸರ್ಕಾರವು ತ್ವರಿತವಾಗಿ ಸಂಪೂರ್ಣಲಾಕ್‌ಡೌನ್ ಅನ್ನು ಘೋಷಿಸಿತು. ಖಂಡಿತವಾಗಿಯೂ, ಇದರಿಂದ ಸಕಾರಾತ್ಮಕ ಫಲಿತಾಂಶವಂತೂ ದೊರೆತಿದೆ. ಆದರೆ, ಅಪಾಯ ಇನ್ನೂ ದೂರವಾಗಿಲ್ಲ, ಮುಂದಿನ ತಿಂಗಳಲ್ಲಿ ಸೋಂಕಿತರ ಸಂಖ್ಯೆ ವೃದ್ಧಿಸಲಿದೆ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಗಳ ಸ್ತರದಲ್ಲಿ ಯಾವ ತಯಾರಿ ಆಗಬೇಕಿತ್ತೋ, ಅದು ಆರಂಭಿಕ ದಿನಗಳಲ್ಲಿ ಆಗಲಿಲ್ಲ. ಈಗಲೂ ಏಕಾಂತವಾಸದಲ್ಲಿರುವ ರೋಗಿಗಳ ವಿಷಯವಿರಲಿ, ಅವರ ಸೇವೆಗೆ ನಿಯೋಜಿತವಾಗಿರುವ ಸಿಬಂದಿಗೂ ಸರಿಯಾಗಿ ವಾಸಿಸಲು ಸ್ಥಳ ಸಿಗುತ್ತಿಲ್ಲ, ಅವರ ಊಟೋಪಚಾರಕ್ಕೆ ಸರಿಯಾದ ವ್ಯವಸ್ಥೆಯೂ ಆಗಿಲ್ಲ ಎಂಬ ದೂರು ಪದೇ ಪದೇ ಕೇಳಿಬರುತ್ತಿದೆ. ಹಾಗೆಂದು, ಇದೆಲ್ಲವೂ ಕೇಂದ್ರ ಸರಕಾರವೊಂದೇ ಮಾಡಬೇಕಾದ ಕೆಲಸವಲ್ಲ. ರಾಜ್ಯಗಳೂ ತಮ್ಮ ಜವಾಬ್ದಾರಿ ಅರಿತು, ಆರೋಗ್ಯ ಸಿಬಂದಿಯ ಸುರಕ್ಷತೆಗೆ ಅತ್ಯಗತ್ಯ ವ್ಯವಸ್ಥೆಯನ್ನು ಕೂಡಲೇ ಕಲ್ಪಿಸಲೇಬೇಕಿದೆ. ಇಲ್ಲದಿದ್ದರೆ, ದೇಶವು ಕೋವಿಡ್ ವಿರುದ್ಧದ ಸಮರದಲ್ಲಿ ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ.