ಯಾದಗಿರಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ತಲುಪಿದೆ. ರವಿವಾರ ಮತ್ತೆ 56 ಜನರಿಗೆ ಸೋಂಕು ದೃಢವಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 1988ಕ್ಕೆ ಏರಿಕೆಯಾಗಿದೆ.
ಶನಿವಾರವಷ್ಟೇ ಗುರುಮಠಕಲ್ ಪುರಸಭೆಯ ನಾಲ್ವರು ಸಿಬ್ಬಂದಿಗೆ ವಕ್ಕರಿಸಿದ್ದ ಕೋವಿಡ್ ರವಿವಾರ ಮತ್ತೆ ನಾಲ್ವರು ಐಎಲ್‌ಐ ಲಕ್ಷಣವಿರುವ 55 ವರ್ಷದ ಪುರುಷ ಪಿ-96994, 58 ವರ್ಷದ ಪುರುಷ ಪಿ-97028, 57 ವರ್ಷದ ಪುರುಷ ಪಿ-97457 ಹಾಗೂ 54 ವರ್ಷದ ಪುರುಷ ಪಿ-97662ರಲ್ಲಿ ಸೋಂಕು ಪತ್ತೆಯಾಗಿದೆ.
ಸಂಪರ್ಕ ಪತ್ತೆಯಾಗದ ಯಾದಗಿರಿ ತಾಲೂಕಿನ ಕಡೇಚೂರ ಪ್ರಾಥಮಿಕ ಆರೋಗ್ಯ ಕೇಂದ್ರದ 33 ವರ್ಷದ ಪುರುಷ ಪಿ-102241 ಸೋಂಕಿಗೆ ತುತ್ತಾಗಿದ್ದಾನೆ. ಜಿಲ್ಲೆಯಲ್ಲಿ ಒಟ್ಟು 12 ಐಎಲ್‌ಐ ಲಕ್ಷಣದ ಸೋಂಕಿತರು ಪತ್ತೆಯಾಗಿದ್ದಾರೆ. ಒಬ್ಬರು ಮಹಾರಾಷ್ಟ್ರದ ನಂಟು ಹೊಂದಿದ್ದರೆ ಉಳಿದವರ ಸೋಂಕಿತ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಯಾದಗಿರಿ ನಗರ ಮತ್ತು ಗ್ರಾಮೀಣ ಗುರುಮಠಕಲ್, ಶಹಾಪುರ ಹಾಗೂ ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಜನರಿಗೆ ಸೋಂಕು ಹರಡಿದ್ದು 38 ಪುರುಷರು, 18 ಮಹಿಳೆಯರು ಕೊರೊನಾಗೆ ತುತ್ತಾಗಿದ್ದಾರೆ. ಆರೋಗ್ಯ ಇಲಾಖೆ ಶನಿವಾರ 675 ಜನರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 600 ಜನರ ವರದಿ ನೆಗೆಟಿವ್ ಬಂದಿವೆ.
ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,762 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5,481 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 156 ಕಂಟೈನ್ಮೆಂಟ್ ಝೋನ್‌ಗಳನ್ನು ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 178 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 63, ಸುರಪುರ 58 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 108 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ ತಿಳಿಸಿದ್ದಾರೆ.
ರೋಗಿಗಳೊಂದಿಗೆ ಡಿಸಿ ಸಮಾಲೋಚನೆ : ಜಿಲ್ಲೆಯ ಬಂದಳ್ಳಿಯಲ್ಲಿರುವ ಏಕಲವ್ಯ ಕೋವಿಡ್ ಕೇರ್ ಆಸ್ಪತ್ರೆಗೆ ಡಿಸಿ ಎಂ.ಕೂರ್ಮಾರಾವ್ ರವಿವಾರ ಭೇಟಿ ನೀಡಿ, ರೋಗಿಗಳ ಜತೆ ಸಮಾಲೋಚನೆ ನಡೆಸಿದರು. ವೈದ್ಯರ ಹಾಜರಾತಿ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾ ಧಿಕಾರಿಗಳು, ರೋಗಿಗಳಿಗೆ ನೀಡಲಾಗುತ್ತಿರುವ ಉಪಹಾರ, ಊಟದ ಕುರಿತು ಹಾಗೂ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ ಇತರರು ಇದ್ದರು.