ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಗರದಲ್ಲಿ ಏರುಗತಿಯಲ್ಲೇ ಸಾಗಿದ್ದ ಕೋವಿಡ್ ಸೋಂಕಿತರ ಪ್ರಮಾಣ ಭಾನುವಾರ ಇಳಿಕೆ ಕಂಡು ಬಂದಿದೆ. ಇದರ ಜತೆಗೆ ಸಾವಿನ ಪ್ರಮಾಣ ಕೂಡ ಶನಿವಾರದಷ್ಟೇ ಇದ್ದು ಶೇ.25.09 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಭಾನುವಾರ ಹೊಸದಾಗಿ ಒಟ್ಟು 1,950 ಪ್ರಕರಣಗಳು ಕಂಡು ಬಂದಿದೆ. ಹಾಗೆಯೇ ಕೋವಿಡ್ ಸೋಂಕಿಗೆ 29 ಜನರು ಸಾವಿಗೀಡಾಗಿದ್ದಾರೆ.
ಕಳೆದ ಜು. 22 ರಿಂದಲೂ ನಗರದಲ್ಲಿ ಸೋಂಕಿತರ ಪ್ರಮಾಣ ಎರಡು ಸಾವಿರ ಸಂಖ್ಯೆ ದಾಟುತ್ತಲೆ ಇತ್ತು. ಜು. 22 ರಂದು 2,050 ಇದ್ದರೆ ಬಳಿಕ ಮೂರೆ ಮೂರು ದಿನದಲ್ಲೆ ಆ ಸಂಖ್ಯೆ 2,267 ಬಂದು ತಲುಪಿ ಬೆಂಗಳೂರಿಗರಲ್ಲಿ ಭಯ ಹುಟ್ಟು ಹಾಕಿತ್ತು. ಈಗ ಶನಿವಾರಕ್ಕೆ ಸೋಂಕಿತರ ಪ್ರಮಾಣ ಈಗ ಹೋಲಿಕೆ ಮಾಡಿದರೆ 86 ಮಂದಿ ಸೋಂಕಿತರು ಕಡಿಮೆ ಆಗಿದ್ದು ಸಣ್ಣ ಸಮಾಧಾನ ಉಂಟು ಮಾಡಿದೆ. ಈ ಮೂಲಕ ನಗರದಲ್ಲಿ ಒಟ್ಟಾರೆ ಸೋಂಕಿತ ಪ್ರಕರಣಗಳ ಸಂಖ್ಯೆ 45,453 ಏರಿಕೆಯಾಗಿದ್ದು 29 ಜನರು ಮರಣ ಹೊಂದುವುದರೊಂದಿಗೆ ಸೋಂಕು ಚಿಕಿತ್ಸೆ ಫಲಿಸದೇ ಮೃತಪಟ್ಟ ಸಂಖ್ಯೆ ಇದೀಗ 892ಕ್ಕೆ ಏರಿಕೆ ಆಗಿದೆ.
ಆದರೆ ಶುಕ್ರವಾರದಿಂದ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಆಗುತ್ತಿರುವ ಸಂಖ್ಯೆಯಲ್ಲಿ ಏರುಗತಿ ಕಂಡು ಬರುತ್ತಿಲ್ಲ. ಶನಿವಾರ 686 ಜನರು ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಹಾಗೆಯೇ ಭಾನುವಾರದಂದು 647 ಮಂದಿ ಮಾತ್ರ ಕೋವಿಡ್-19 ನಿಂದ ಚೇತರಿಸಿಕೊಂಡು ಬಿಡುಗಡೆ ಆಗಿದ್ದಾರೆ. ಈ ಮೂಲಕ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 11,405ಕ್ಕೆ ಏರಿದೆ. ಒಟ್ಟು 33,156 ಸಕ್ರಿಯ ಪ್ರಕರಣಗಳಲ್ಲಿ ಕೋವಿಡ್ ಸೋಂಕಿತರು ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ ಹಾಗೂ ಮನೆಗಳಲ್ಲಿ ಆರೈಕೆಯಲ್ಲಿದ್ದಾರೆ.
ಕಳೆದ ಜು. 16 ರಿಂದ ಏರುಗತಿಯಲ್ಲೆ ಸಾಗಿದ್ದ ಸೋಂಕಿತರ ಪ್ರಮಾಣಕ್ಕೆ ಜು. 20 ರಂದು ಬ್ರೇಕ್ ಬಿದ್ದಿತು. ಆದರೆ ಮತ್ತೆ ಜು. 22 ರಿಂದ ಏರಿಕೆ ಆಗುತ್ತೆ ಸಾಗಿ ಜನರಲ್ಲಿ ಆತಂಕದ ಅಲೆ ಸೃಷ್ಟಿಸಿತು. ಕಳೆದರಡು ದಿನಗಳಿಂದಲೂ ಎರಡು ಸಾವಿರ ಮೇಲೆ ಇರುತ್ತಿದ್ದ ಸೋಂಕಿತರ ಪ್ರಮಾಣ ಈಗ 1950ಕ್ಕೆ ತಲುಪಿದ್ದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
647 ಮಂದಿ ಮನೆಗೆ: ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರುತ್ತಿರುವವರ ಸಂಖ್ಯೆಯಲ್ಲಿ ಹೇಳಿಕೊಳ್ಳುವಷ್ಟು ಸುಧಾರಣೆ ಆಗಿಲ್ಲ. ಸೋಂಕಿನಿಂದ ಚೇತರಿಸಿಕೊಂಡು ಶನಿವಾರ 668 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಭಾನುವಾರ 647 ಮಂದಿ ಮಾತ್ರ ಸೋಂಕಿನಿಂದ ಚೇತರಿಸಿಕೊಂಡು ಮನೆ ಸೇರಿದ್ದಾರೆ. ಇದರೊಂದಿಗೆ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾದವರ ಒಟ್ಟು ಬಿಡುಗಡೆಯಾದವರ ಸಂಖ್ಯೆ ಇದೀಗ 11,405ಕ್ಕೆ ಏರಿಕೆ ಆಗಿದೆ. ಮತ್ತಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದು, ಬಿಡುಗಡೆಯಾಗಲಿದ್ದಾರೆ.